20ರ ಮುಷ್ಕರಕ್ಕೆ ಸಂಘಟನೆಗಳ ಬೆಂಬಲ

7
ವಿಮೆ, ಇಂಧನ ದರ ಏರಿಕೆಗೆ ಖಂಡನೆ: ವಾಣಿಜ್ಯ ವಾಹನಗಳ ಮಾಲೀಕರ ಪ್ರತಿಭಟನೆ

20ರ ಮುಷ್ಕರಕ್ಕೆ ಸಂಘಟನೆಗಳ ಬೆಂಬಲ

Published:
Updated:
ದಾವಣಗೆರೆಯಲ್ಲಿ ಶನಿವಾರ ಏರ್ಪಡಿಸಿದ್ದ ಅನಿರ್ದಿಷ್ಟಾವಧಿ ಮುಷ್ಕರದ ಪೂರ್ವಸಿದ್ಧತಾ ಸಭೆಯಲ್ಲಿ ವಿವಿಧ ಸಾರಿಗೆ ವಾಹನಗಳ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ದಾವಣಗೆರೆ: ಇದೇ 20ರಂದು ಆರಂಭಗೊಳ್ಳಲಿರುವ ವಾಣಿಜ್ಯ ವಾಹನಗಳ ದೇಶವ್ಯಾಪಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಜಿಲ್ಲೆಯಲ್ಲೂ ಬೆಂಬಲ ಸೂಚಿಸಲು ವಿವಿಧ ಸಂಘಟನೆಗಳು ಸಮ್ಮತಿ ಸೂಚಿಸಿವೆ.

ನಗರದ ರೋಟರಿ ಬಾಲಭವನದಲ್ಲಿ ಶನಿವಾರ ನಡೆದ ಮುಷ್ಕರಕ್ಕೆ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ವಿವಿಧ ಬಗೆಯ ವಾಹನಗಳ ಸಂಘಟನೆಗಳ ಪದಾಧಿಕಾರಿಗಳು ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಒಕ್ಕೊರಲಿನಿಂದ ಖಂಡಿಸಿದರು.  ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್‌ ಸೈಫುಲ್ಲಾ ಮಾತನಾಡಿ, ‘ಡೀಸೆಲ್ ಮತ್ತು ಪೆಟ್ರೋಲ್‌ಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು. ಇದರಿಂದ ಇಂಧನಗಳ ದರ ಪ್ರತಿ ಲೀಟರ್‌ಗೆ ₹ 15 ಕಡಿಮೆಯಾಗುತ್ತದೆ. ಹಾಗೆಯೇ ಪ್ರತಿ ದಿನವೂ ಇಂಧನ ದರ ಪರಿಷ್ಕರಿಸುವ ಬದಲು ಕನಿಷ್ಠ ಮೂರು ತಿಂಗಳಿಗೆ ಒಮ್ಮೆ ಬೆಲೆ ಪರಿಷ್ಕರಿಸಬೇಕು. ಇದರಿಂದ ವಾಣಿಜ್ಯ ವಾಹನಗಳ ವ್ಯವಹಾರದಲ್ಲಿ ಸ್ಥಿರತೆ ಕಂಡುಬರುತ್ತದೆ’ ಎಂದು ಹೇಳಿದರು.

15 ವರ್ಷಗಳ ಹಿಂದೆ ಪ್ರತಿ ಲಾರಿಯ ಥರ್ಡ್‌ ಪಾರ್ಟಿ ವಿಮಾ ಪಾಲಿಸಿ ಮೊತ್ತ ಕೇವಲ ₹ 3,000 ಇತ್ತು. ಈಗ ಅದು ₹ 35,000ಕ್ಕೆ ಏರಿಕೆಯಾಗಿದೆ. ಇದೇ ಹಾದಿಯಲ್ಲಿ ಬಸ್‌, ಆಟೊ, ಕಾರ್‌ ಹಾಗೂ ಇತರ ವಾಹನಗಳ ವಿಮೆಯೂ ಏರಿಕೆಯಾಗಿದೆ. ಹೀಗಾಗಿ, ವೈಜ್ಞಾನಿಕವಾಗಿ ವಿಮಾ ಪಾಲಿಸಿಗಳ ಬೆಲೆ ಏರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಟೋಲ್‌ ಸಂಗ್ರಹದಿಂದ ಭಾರಿ ನಷ್ಟವಾಗುತ್ತಿದೆ. ಅಲ್ಲದೇ ಇಂಧನ, ಸಮಯ ಅಪವ್ಯಯವಾಗುತ್ತಿದೆ. ಅಲ್ಲದೇ ರಸ್ತೆಗಳಲ್ಲಿ ವಾಹನಗಳ ಸಂಚಾರ ದಟ್ಟಣೆಯೂ ಹೆಚ್ಚಿ ಎಲ್ಲರಿಗೂ ಕಿರಿಕಿರಿಯಾಗುತ್ತಿದೆ. ಹೀಗಾಗಿ, ಟೋಲ್‌ಗಳ ಮೂಲಕ ತೆರಿಗೆ ಸಂಗ್ರಹಿಸುವ ವ್ಯವಸ್ಥೆಯನ್ನು ತೆಗೆದುಹಾಕಿ. ವಾರ್ಷಿಕವಾಗಿ ಪ್ರತಿ ವಾಹನಗಳಿಂದ ತೆರಿಗೆ ಸಂಗ್ರಹಿಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಸಾರಿಗೆ ಕ್ಷೇತ್ರದಲ್ಲಿರುವ ಚಾಲಕ, ನಿರ್ವಾಹಕ, ಕ್ಲೀನರ್‌, ಮೆಕ್ಯಾನಿಕ್‌ಗಳಿಗೆ ಇಎಸ್‌ಐ ಸೌಲಭ್ಯ ಒದಗಿಸಬೇಕು. ಅಪಘಾತಗಳು ಸಂಭವಿಸಿದಾಗ, ಗಾಯಗೊಂಡವರಿಗೆ ಉತ್ಕೃಷ್ಟ ದರ್ಜೆಯ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಬೇಡಿಕೆಯಿಟ್ಟರು.

‘ನಮಗೆ ಬೇರೆ ವೃತ್ತಿ ಗೊತ್ತಿಲ್ಲ. ಹೀಗಾಗಿ, ಸಾರಿಗೆ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಂಡಿದ್ದೇವೆ. ಸಾರಿಗೆ ವಾಹನಗಳಿಲ್ಲದೇ ಇದ್ದರೆ ಇಡೀ ವ್ಯವಸ್ಥೆಯೇ ಸ್ಥಗಿತಗೊಳ್ಳುತ್ತದೆ. ಹೀಗಾಗಿ, ಸಾರಿಗೆ ಕ್ಷೇತ್ರಕ್ಕೆ ಧಕ್ಕೆಯಾಗುತ್ತಿರುವುದನ್ನು ಸರ್ಕಾರ ತಪ್ಪಿಸಬೇಕು. ಸಾರಿಗೆ ಕ್ಷೇತ್ರಕ್ಕೆ ವಿಶೇಷ ಪ್ರೋತ್ಸಾಹ ನೀಡಬೇಕು’ ಎಂದು ಆಗ್ರಹಿಸಿದರು.

ಲಾರಿ ಮಾಲೀಕರ ಹಾಗೂ ಟ್ರಾನ್ಸ್‌ಪೋರ್ಟ್‌ ಏಜೆಂಟರ ಸಂಘದ ಗೌರವಾಧ್ಯಕ್ಷ ನೇತಾಜಿರಾವ್‌ ಘೋರ್ಪಡೆ ಅಧ್ಯಕ್ಷತೆ ವಹಿಸಿದ್ದರು.  ಜಿಲ್ಲಾ ಖಾಸಗಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ಮಂಜುನಾಥ್, ಮಿನಿಬಸ್‌ ಮಾಲೀಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ನಾಯ್ಕ, ಪ್ರವಾಸಿ ಟ್ಯಾಕ್ಸಿ ಸ್ಟ್ಯಾಂಡ್‌ ಅಧ್ಯಕ್ಷ ಧೀಕ್ಷಿತ್‌, ಪ್ರಯಾಣಿಕ ಆಟೊರಿಕ್ಷಾ ಸಂಘದ ಅಧ್ಯಕ್ಷ ಅಣ್ಣಪ್ಪ ಸ್ವಾಮಿ ಅವರೂ ಇದ್ದರು.

ಲಾರಿ ಮಾಲೀಕರ ಹಾಗೂ ಟ್ರಾನ್ಸ್‌ಪೋರ್ಟ್‌ ಏಜೆಂಟರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ಕೆ. ಮಲ್ಲಿಕಾರ್ಜುನ್‌ ನಿರೂಪಿಸಿ, ವಂದಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !