ಬುಧವಾರ, ಮಾರ್ಚ್ 3, 2021
25 °C

ಮಣ್ಣು, ಬೆಂಕಿಯ ಪಾಲಾಗದಿರಲಿ ನಮ್ಮ ಕಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ದಾವಣಗೆರೆ: ಕಣ್ಣು ದಾನ ಮಾಡಿದರೆ ಸತ್ತ ಮೇಲೆ ಮೋಕ್ಷ ಸಿಗುವುದಿಲ್ಲ ಎಂಬುದು ಮೂಢನಂಬಿಕೆ. ನಮ್ಮ ಕಣ್ಣು ಬೆಂಕಿ, ಮಣ್ಣಿನ ಪಾಲಾಗುವ ಬದಲು ಕಣ್ಣು ಕಾಣದವರಿಗೆ ಬೆಳಕಾಗಲಿ ಎಂದು ಹರಪನಹಳ್ಳಿ ಸಾರ್ವಜನಿಕ ಆಸ್ಪತ್ರೆಯ ನೇತ್ರತಜ್ಞೆ ಡಾ. ಸಂಗೀತಾ ಕೊಲ್ಹಾಪುರಿ ಹೇಳಿದರು.

ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿದೋಷ ನಿಯಂತ್ರಣಾಧಿಕಾರಿ ಹಾಗೂ ಜಿಲ್ಲಾ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಸಹಯೋಗದಲ್ಲಿ 33ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆಯ ಪ್ರಯುಕ್ತ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಗುರುವಾರ ನಡೆದ ನೇತ್ರದಾನ ಜಾಗೃತಿ ಜಾಥಾದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.

ಮೃತಪಟ್ಟವರ ಕಣ್ಣುದಾನ ಮಾಡಲು ನಿರ್ಧರಿಸಿದರೆ ಅವರ ಕುಟುಂಬದವರು ಫ್ಯಾನ್‌, ಎ.ಸಿ. ಆಫ್‌ ಮಾಡಬೇಕು. ಕಿಟಕಿ ಮುಚ್ಚಬೇಕು. ಮುಚ್ಚಿರುವ ಕಣ್ಣಿನ ಮೇಲೆ ಒದ್ದೆಬಟ್ಟೆ ಹಾಕಿರಬೇಕು ಎಂದು ತಿಳಿಸಿದರು.

ಡಿಬಿಸಿಎಸ್‌ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ. ಶ್ರೀಮಂತ ಸಿದ್ದಪ್ಪ ಕೋಳ್‌ಕೂರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ‘ಆಗಸ್ಟ್‌ 25ರಿಂದ ಸೆ.8ರವರೆಗೆ ನೇತ್ರದಾನ ಪಾಕ್ಷಿಕ ಆಚರಣೆ ನಡೆಯುತ್ತಿದೆ. ಈವರೆಗೆ ಸುಮಾರು 200 ಮಂದಿ ನೇತ್ರದಾನ ಮಾಡಲು ಮುಂದೆ ಬಂದಿದ್ದಾರೆ’ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ತ್ರಿಪುಲಾಂಭ ಕಾರ್ಯಕ್ರಮ ಉದ್ಘಾಟಿಸಿದರು. ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕಿ ಡಾ. ಎಚ್‌.ಡಿ. ನೀಲಾಂಬಿಕೆ, ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆಯ ಕಣ್ಣಿನ ವಿಭಾಗದ ಮುಖ್ಯಸ್ಥೆ ಡಾ. ಶಾಂತಲಾ ಅರುಣ್‌ ಕುಮಾರ್‌, ಜಿಲ್ಲಾ ಕೀಟಜನ್ಯ ರೋಗ ನಿಯಂತ್ರಣಾಧಿಕಾರಿ ಮೀನಾಕ್ಷಿ, ಸಂತಾನಾಭಿವೃದ್ಧಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮದ ಅನುಷ್ಠಾನ ಅಧಿಕಾರಿ ಡಾ. ಶಿವಕುಮಾರ್‌ ಉಪಸ್ಥಿತರಿದ್ದರು. ಬಾಪೂಜಿ ಆಸ್ಪತ್ರೆಯ ನೇತ್ರ ತಜ್ಞೆ ಡಾ. ಮೇಘನಾ ಪಾಟೀಲ್‌ ಕಣ್ಣುದಾನದ ನಂತರದ ಬಳಕೆಯ ಬಗ್ಗೆ ಮಾಹಿತಿ ನೀಡಿದರು.

ಕೆ.ಎಂ. ಪರಮೇಶ್ವರಪ್ಪ ಸ್ವಾಗತಿಸಿದರು. ಪಿ.ಜಿ. ಮಹೇಶ್‌ ವಂದಿಸಿದರು. ಎಸ್‌.ಕೆ. ರಂಗನಾಥ ಕಾರ್ಯಕ್ರಮ ನಿರೂಪಿಸಿದರು.

ಅಂಕಿ ಅಂಶ

ಭಾರತದಲ್ಲಿ ವರ್ಷಕ್ಕೆ 25,000 ಕಣ್ಣು ದಾನ, 62,389 ಪ್ರತಿದಿನ ಸಾಯುವವರ ಸಂಖ್ಯೆ 86,853 ಭಾರತದಲ್ಲಿ ಪ್ರತಿದಿನ ಹುಟ್ಟುವವರ ಸಂಖ್ಯೆ, 2.5 ಲಕ್ಷ ವರ್ಷಕ್ಕೆ ಅವಶ್ಯಕತೆ ಇರುವ ಕಣ್ಣುಗಳು.

ದಾನಕ್ಕೆ ಭೇದವಿಲ್ಲ

ಕಣ್ಣುದಾನ ಮಾಡಲು ಯಾವ ಭೇದಗಳೂ ಇಲ್ಲ. ಸಣ್ಣ ಮಕ್ಕಳಿಂದ ಮುದುಕರವರೆಗೆ ಎಲ್ಲರೂ ದಾನ ಮಾಡಬಹುದು. ಜಾತಿ, ಧರ್ಮ, ಲಿಂಗಗಳ ಭೇದವೂ ಇಲ್ಲ. ರಕ್ತದೊತ್ತಡ, ಸಕ್ಕರೆ ಕಾಯಿಲೆ ಇದ್ದರೂ, ಕನ್ನಡಕ ಧರಿಸುತ್ತಿದ್ದರೂ ಕಣ್ಣು ದಾನ ಮಾಡಲು ಯಾವುದೇ ತೊಂದರೆಗಳಿರುವುದಿಲ್ಲ. ಮೃತಪಟ್ಟವರ ಕಣ್ಣಿನ ದಾನ ಮಾಡುವುದಿದ್ದಲ್ಲಿ ಆ ಕುಟುಂಬದವರು ತಕ್ಷಣಕ್ಕೆ 104ಕ್ಕೆ ಕರೆ ಮಾಡಬೇಕು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು