ಬುಧವಾರ, ಆಗಸ್ಟ್ 4, 2021
ಜಿಲ್ಲಾ ಪಂಚಾಯಿತಿ ಎದುರು ಮಂಗಳವಾರ ಪ್ರತಿಭಟನೆ

ವೇತನ ಬಿಡುಗಡೆಗೆ ಹೊರಗುತ್ತಿಗೆ ನೌಕರರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಹಾಸ್ಟೆಲ್, ವಸತಿಶಾಲೆ, ಆಶ್ರಮಶಾಲೆಗಳ ಹೊರಗುತ್ತಿಗೆ ಕಾರ್ಮಿಕರಿಗೆ ಲಾಕ್‍ಡೌನ್ ಅವಧಿಯ ವೇತನ ಮತ್ತು ಜೂನ್ ತಿಂಗಳಿನ ವೇತನ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಕಾರ್ಮಿಕರು ಜಿಲ್ಲಾ ಪಂಚಾಯಿತಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್‍ಡೌನ್ ಅವಧಿಯಲ್ಲಿ ಎಲ್ಲಾ ಗುತ್ತಿಗೆ ಕಾರ್ಮಿಕರಿಗೂ ವೇತನ ನೀಡಬೇಕೆಂದು ಸುತ್ತೋಲೆ ಹೊರಡಿಸಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ಅಧಿಕಾರಿಗಳು ವೇತನ ನೀಡಿದರೆ ಇನ್ನೂ ಕೆಲವು ಜಿಲ್ಲೆಗಳಲ್ಲಿ ನಿರಾಕರಿಸುತ್ತಿದ್ದಾರೆ. ಕೆಲವು ಕಡೆ ಮೆಟ್ರಿಕ್ ನಂತರದ ಹಾಸ್ಟೆಲ್ ಕಾರ್ಮಿಕರಿಗೆ ಮಾತ್ರ ವೇತನ ನೀಡುತ್ತಿದ್ದು, ಮೆಟ್ರಿಕ್ ಪೂರ್ವ, ವಸತಿ ಶಾಲೆ ಮತ್ತು ಆಶ್ರಮ ಶಾಲೆಗಳ ಕಾರ್ಮಿಕರಿಗೆ ವೇತನ ನೀಡಲು ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿದರು.

ಸರ್ಕಾರವು ಯಾವ ಸಂಧರ್ಭದಲ್ಲಾದರೂ ಶೈಕ್ಷಣಿಕ ವರ್ಷ ಪ್ರಾರಂಭಿಸುವ ಸಾಧ್ಯತೆ ಇರುವುದರಿಂದ ಜೂನ್ ತಿಂಗಳಿನಿಂದ ಹಾಸ್ಟೆಲ್, ವಸತಿಶಾಲೆ ಮತ್ತು ಆಶ್ರಮಶಾಲೆಗಳ ಸ್ಯಾನಿಟೈಜೇಷನ್ ಕೆಲಸ, ನಿರ್ವಹಣೆ ಮತ್ತು ಪೂರ್ವ ಸಿದ್ಧತಾ ಕೆಲಸಗಳನ್ನು ಆರಂಭಿಸಿ ಎಂದಿನಂತೆ ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಬಿಸಿಎಂ ಇಲಾಖೆಯಲ್ಲಿ ಹೆಚ್ಚುವರಿ ನೌಕರರಿಗೆ ಫೆಬ್ರುವರಿ ತಿಂಗಳಲ್ಲಿ 6 ತಿಂಗಳ ವೇತನ ಬಿಡುಗಡೆಯಾಗಿದ್ದು, ಈ ಬಾಕಿ ಇರುವ ವೇತನದ ಹಣವನ್ನು ಪಾವತಿಸಬೇಕು. ಕ್ವಾರಂಟೈನ್ ಕೇಂದ್ರಗಳಾಗಿ ಪರಿವರ್ತಿಸಿರುವ ಹಾಸ್ಟೆಲ್, ವಸತಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಲಾಖೆಯ ಹೊರಗುತ್ತಿಗೆ ಸಿಬ್ಬಂದಿಗೆ ವಿಶೇಷ ಭತ್ಯೆ ನೀಡಬೇಕು ಎಂದು ಒತ್ತಾಯಿಸಿದರು.

ಹೊರಗುತ್ತಿಗೆ ಕಾರ್ಮಿಕರು ಮತ್ತು ಅವರ ಕುಟುಂಬದವರು ಕೋವಿಡ್‌–19ನಿಂದ ಬಳಲಿದರೆ ಅದರ ಚಿಕಿತ್ಸೆಯನ್ನು ಉಚಿತವಾಗಿ ನೀಡಬೇಕು. ಆಶಾ,ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿರುವ ವಿಶೇಷ ಜೀವ ವಿಮೆ ಸೌಲಭ್ಯವನ್ನು ಇವರಿಗೂ ವಿಸ್ತರಿಸಬೇಕು. ನೇರ ನೇಮಕಾತಿಯಿಂದ ತೊಂದರೆಗೊಳಗಾದ ಗುತ್ತಿಗೆ ಕಾರ್ಮಿಕರನ್ನು ಸೇವಾ ಹಿರಿತನಕ್ಕನುಗುಣವಾಗಿ ಇತರೆ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ಕೈದಾಳೆ, ಉಪಾಧ್ಯಕ್ಷ ತಿಪ್ಪೇಸ್ವಾಮಿ ಅಣಬೇರು, ಜಿಲ್ಲಾ ಕಾರ್ಯದರ್ಶಿ ಸ್ವಾಮಿ ನಿಂಗಪ್ಪ ಅವರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು