ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರುಳಿ ಬಿದ್ದ ಕಬ್ಬಿನ ಟ್ರ್ಯಾಕ್ಟರ್: ತಪ್ಪಿದ ಅನಾಹುತ

ಬೀರೂರು– ಸಮ್ಮಸಗಿ ಹೆದ್ದಾರಿಯಲ್ಲಿ ಘಟನೆ
Last Updated 6 ಡಿಸೆಂಬರ್ 2022, 5:00 IST
ಅಕ್ಷರ ಗಾತ್ರ

ಹರಿಹರ: ಕಬ್ಬು ತುಂಬಿದ್ದ ಡಬಲ್ ಟ್ರ್ಯಾಲಿಯ ಟ್ರ್ಯಾಕ್ಟರ್ ಭಾನುವಾರ ರಾತ್ರಿ ನಗರದ ಲೋಕೋಪಯೋಗಿ ಇಲಾಖೆ ಕಚೇರಿ ಎದುರು ಉರುಳಿ ಬಿದ್ದಿದ್ದು, ಅದೃಷ್ಟವಷಾತ್ ದೊಡ್ಡ ದುರಂತ ತಪ್ಪಿದೆ.

ಕುಮಾರಪಟ್ಟಣಂ ಕಡೆಯಿಂದ ಬೀರೂರು– ಸಮ್ಮಸಗಿ ಹೆದ್ದಾರಿ ಮೂಲಕ ನಗರವನ್ನು ಪ್ರವೇಶಿಸಿದ ಟ್ರ್ಯಾಕ್ಟರ್ ತುಂಗಭದ್ರಾ ಸೇತುವೆಯನ್ನು ದಾಟಿ ಲೋಕೋಪಯೋಗಿ ಇಲಾಖೆ ಕಚೇರಿ ಎದುರಿನ ಗುಂಡಿಮಯ ರಸ್ತೆಯಲ್ಲಿ ಬರುತ್ತಿದ್ದಾಗ ಟ್ರ್ಯಾಕ್ಟರ್‌ಗೆ ಜೋಡಿಸಿದ್ದ ಟ್ರ್ಯಾಲಿ ಉರುಳಿ ಬಿದ್ದಿದೆ.

ಟ್ರ್ಯಾಲಿ ಉರುಳಿ ಬೀಳುವ ಕೆಲ ಕ್ಷಣಗಳ ಮುಂಚೆ ಪಕ್ಕದಲ್ಲೇ ಪ್ರಯಾಣಿಕರು ತುಂಬಿದ್ದ ಒಂದು ಆಟೊ ಮುಂದೆ ಸಾಗಿದೆ. ‘ಆಟೊ ಮೇಲೆ ಕಬ್ಬಿನ ಲೋಡ್ ಬಿದ್ದಿದ್ದರೆ ದೊಡ್ಡ ಅನಾಹುತ ನಡೆಯುತ್ತಿತ್ತು, ಅದೃಷ್ಟವಷಾತ್ ದುರಂತ ತಪ್ಪಿದೆ’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ರಸ್ತೆ ತುಂಬ ಕಬ್ಬು ಬಿದ್ದಿದ್ದರಿಂದ ಇಡೀ ರಾತ್ರಿ ವಾಹನ ಸಂಚಾರಕ್ಕೆ ತೊಡಕುಂಟಾಯಿತು. ಕಬ್ಬಿನ ಮೇಲೆಯೇ ವಾಹನಗಳು ಓಲಾಡುತ್ತಾ ಸಾಗಿದವು. ಸೋಮವಾರ ಬೆಳಿಗ್ಗೆ ಕಬ್ಬನ್ನು ಬೇರೆ ವಾಹನಕ್ಕೆ ಸಾಗಿಸಿ ವಾಹನ ಸಂಚಾರ ಸುಗಮಗೊಳಿಸಲಾಯಿತು.

ಎಚ್ಚರಗೊಳ್ಳದ ಆರ್‌ಟಿಒ: ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಡಿ. 2ರಂದು ‘ಆತಂಕ ಮೂಡಿಸುವ ಕಬ್ಬು ಸಾಗಣೆ ವಾಹನಗಳು’ ಎಂಬ ಶೀರ್ಷಿಕೆಯಡಿ ಕಬ್ಬು ಸಾಗಣೆ ವಾಹನಗಳ ಮಿತಿ ಮೀರಿದ ಲೋಡ್ ಹೇರುವ ಕುರಿತು ವಿಶೇಷ ವರದಿ ಪ್ರಕಟಿಸಲಾಗಿತ್ತು. ಆದರೂ ಸಂಬಂಧಿತ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಅಥವಾ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ.

ಅಮಾಯಕರ ಪ್ರಾಣದ ಬಗ್ಗೆ ಕಾಳಜಿ ಯಾರಿಗೂ ಇಲ್ಲ. ದುರಂತ ನಡೆಯುವವರೆಗೆ ಕಾಯದೆ ಈ ಸಮಸ್ಯೆ ಪರಿಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT