ಶನಿವಾರ, ಜುಲೈ 2, 2022
26 °C

ವ್ಯಂಗ್ಯ ಕಾಲದ ಸವಾಲಿನಲ್ಲಿ ಸುದ್ದಿಮಿತ್ರರು: ಪತ್ರಕರ್ತ ಪಿ. ಸಾಯಿನಾಥ್ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೋವಿಡ್‌ ಕಾಲದಲ್ಲಿ ನಾಗರಿಕರಿಗೆ ಅತಿ ಜರೂರಾಗಿದ್ದ ಮಾಧ್ಯಮ ಸಂಸ್ಥೆಗಳಲ್ಲಿ 2500ಕ್ಕೂ ಹೆಚ್ಚು ಪತ್ರಕರ್ತರು ಕೆಲಸ ಕಳೆದುಕೊಂಡರು. ಹತ್ತು ಸಾವಿರಕ್ಕೂ ಹೆಚ್ಚು ಪತ್ರಕರ್ತರಲ್ಲದವರೂ ಈ ಕ್ಷೇತ್ರದಿಂದ ಹೊರದಬ್ಬಿಸಿಕೊಂಡರು. ತುರ್ತು ಅಗತ್ಯ ಸೇವೆಗಳಲ್ಲಿ ಒಂದು ಎಂದು ಪ್ರಧಾನಿಯೇ ಘೋಷಿಸಿದ್ದ ಮಾಧ್ಯಮಕ್ಕೆ ಇಂಥ ಪರಿಸ್ಥಿತಿ ಬಂದೊದಗಿದ್ದು ದೊಡ್ಡ ವ್ಯಂಗ್ಯ ಎಂದು ಪತ್ರಕರ್ತ ಪಿ. ಸಾಯಿನಾಥ್ ವಿಷಾದಿಸಿದರು.

ಜಿಲ್ಲಾ ವರದಿಗಾರರ ಕೂಟ ಶುಕ್ರವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾಧ್ಯಮದ ಸ್ಥಿತಿ–ಗತಿಯ ಮೇಲೆ ಬೆಳಕು ಚೆಲ್ಲಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಅಮಿತ್‌ ಷಾ ಇಬ್ಬರೂ ಮಾಧ್ಯಮದ ದೊಡ್ಡ ಮಾಲೀಕರಾದ ಅಂಬಾನಿ ಹಾಗೂ ಅದಾನಿಯ ಸ್ನೇಹಿತರು. ಹೀಗಾಗಿ ಎಲ್ಲವನ್ನೂ ತಮ್ಮ ಮೂಗಿನ ನೇರಕ್ಕೇ ತಿರುಗಿಸಿಕೊಳ್ಳಬಲ್ಲ ಚಾಕಚಕ್ಯತೆ ತೋರುತ್ತಿದ್ದಾರೆ ಎಂದು ಟೀಕಿಸಿದರು.

‘ಉತ್ತರ ಪ್ರದೇಶದಲ್ಲಿ ಕೋವಿಡ್‌ ಕಾಲದಲ್ಲಿ ಒಂದು ತಿಂಗಳು ಉತ್ತಮ ವರದಿಗಾರಿಕೆ ಕಂಡಿತು. ಆಮೇಲೆ ಅಲ್ಲಿನ ಮುಖ್ಯಮಂತ್ರಿ ಆದಿತ್ಯನಾಥ್ ಜಾಹೀರಾತು ನೀಡದೆ ಒತ್ತಡ ಹೇರಿ ಅದನ್ನೂ ದಮನಗೊಳಿಸಲಾಯಿತು. ರಫೆಲ್‌ ಬಗೆಗೆ ‘ದಿ ಹಿಂದೂ’ ಪತ್ರಿಕೆಯಲ್ಲಿ ರಾಮ್ ಅವರು ಬರೆದ ಮೂರು ಲೇಖನಗಳು ಉಂಟುಮಾಡಿದ ವ್ಯತಿರಿಕ್ತ ಪರಿಣಾಮವನ್ನೂ ನಾವು ಕಂಡಿದ್ದೇವೆ’ ಎಂದು ಉದಾಹರಿಸಿದರು.

ಸೈಬರ್ ದಾದಾಗಿರಿ: ‘ಸಾಮಾಜಿಕ ಜಾಲತಾಣದಲ್ಲಿ ಸಾಮಾಜಿಕವಾದುದೇ ಇಲ್ಲ. ಹಣ ಕೊಟ್ಟು ಟ್ರೋಲ್ ಮಾಡುವ ಪದ್ಧತಿ ಅಲ್ಲಿದೆ. ಅದು ರೊಮ್ಯಾಂಟಿಕ್ ಮಿಥ್‌ಗಳ ತಾಣ. ಟ್ವಿಟ್ಟರ್‌ನಲ್ಲಿ 70 ಸಾವಿರ ಫಾಲೋವರ್‌ಗಳು ನನಗೆ ಇದ್ದಾರೆ. ಅವರಲ್ಲಿ ಶೇ 2ರಷ್ಟು ಜನರಿಗೂ ನಾನು ಹೇಳಬೇಕಾದದ್ದು ಮುಟ್ಟುವುದಿಲ್ಲ. ಸಾಮಾಜಿಕ ಜಾಲತಾಣಗಳು ಕೂಡ ಸರ್ಕಾರದ ಮುಖವಾಣಿಯನ್ನೇ ಬಿಂಬಿಸುವುದರಲ್ಲಿ ಸುಖಿಸುತ್ತಿದೆ. ಅಲ್ಲಿ ನಡೆಯುತ್ತಿರುವುದು ಸೈಬರ್‌ ದಾದಾಗಿರಿ’ ಎಂದು ಅಭಿಪ್ರಾಯಪಟ್ಟರು.

ಸದಾ ಕಾಲ ಪರ್ಯಾಯವಾಗಿ ಸತ್ಯವನ್ನು ಹೇಳುವ ಕೆಲಸ ಆಗುತ್ತಿರುತ್ತದೆ ಎನ್ನುವುದಕ್ಕೆ ವೈರ್‌, ಫ್ರಂಟ್‌ಲೈನ್ ತರಹದ ಮಾಧ್ಯಮಗಳ ನಿರ್ಭಿಡೆಯ ಪತ್ರಿಕೋದ್ಯಮವನ್ನು ಉದಾಹರಿಸಿದರು. ಬಾಲಗಂಗಾಧರ ತಿಲಕ್, ರಾಜಾರಾಂ ಮೋಹನರಾಯ್, ಅಂಬೇಡ್ಕರ್‌ ತರಹದವರ ಪತ್ರಿಕೋದ್ಯಮ ಯಾವತ್ತೂ ಮಾದರಿಯಾಗಿರುವುದು ಆ ಬದ್ಧತೆಯ ಕಾರಣಕ್ಕೇ ಎಂದರು.

ಇಪ್ಪತ್ತಮೂರನೇ ವಯಸ್ಸಿನೊಳಗೇ ಭಗತ್‌ ಸಿಂಗ್‌ ಚುರುಕಾಗಿದ್ದ ಪತ್ರಕರ್ತ. ನಾಲ್ಕು ಭಾಷೆಗಳಲ್ಲಿ ಅವರು ಬರೆದರು. ಪಂಜಾಬಿ, ಉರ್ದು, ಹಿಂದಿ ಭಾಷೆಗಳಲ್ಲಿ ಅಷ್ಟೆ ಅಲ್ಲದೆ ಜೈಲಿನಲ್ಲಿದ್ದಾಗ ಪರ್ಷಿಯನ್ ಕೂಡ ಕಲಿತಿದ್ದರು ಎಂದು ನೆನಪಿಸಿಕೊಂಡರು.

ಪಂಜಾಬ್‌ನ ಜಿಡಿಪಿಗಿಂತ ಹೆಚ್ಚು ಶ್ರೀಮಂತಿಕೆ ಅಂಬಾನಿ ಅವರಲ್ಲಿದೆ ಎನ್ನುವುದನ್ನು ಯಾವ ಮಾಧ್ಯಮವೂ ದಿಟ್ಟತನದಿಂದ ಹೇಳುತ್ತಿಲ್ಲ ಎಂದೂ ಟೀಕಿಸಿದರು. 1980ರ ದಶಕದಲ್ಲಿ ತಾವು ಪತ್ರಿಕೋದ್ಯಮ ಪ್ರಾರಂಭಿಸಿದಾಗ ಕಾರ್ಮಿಕ, ಕೃಷಿ ವರದಿಗಾರಿಕೆಯನ್ನೇ ವಿಶೇಷ ಬೀಟ್‌ ಎಂದು ಪರಿಗಣಿಸಲಾಗಿತ್ತು. ಆಮೇಲೆ ಅವು ಆದಾಯ ತರುವುದಿಲ್ಲ ಎಂದು ಹಿನ್ನೆಲೆಗೆ ಸರಿದವು ಎಂದು ವಿಷಾದಿಸಿದರು.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ಇಲ್ಲದ ಭಯವನ್ನು ಮಾಧ್ಯಮದವರು ಈಗ ಎದುರಿಸುತ್ತಿದ್ದಾರೆ. ಕೋವಿಡ್‌ ಕಾಲದಲ್ಲಿ ನಡೆದ ಮರುವಲಸೆಯ ಬೆನ್ನುಹತ್ತಿ, ಮೂಲ ವಲಸೆ ಯಾಕೆ ಆಯಿತು ಎಂದು ಹುಡುಕಿದವರೇ ಕಡಿಮೆ. ಎಲ್ಲದರ ಮೂಲ ಕೃಷಿ ಕ್ಷೇತ್ರದ ಸಮಸ್ಯೆಯಲ್ಲಿದೆ ಎಂದು ಮಾರ್ಮಿಕವಾಗಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು