ಚಿತ್ರಕಲಾ ಶಿಕ್ಷಕರು ಎಲ್ಲ ವಿಷಯಗಳ ಬೋಧಕರು

ಸೋಮವಾರ, ಮಾರ್ಚ್ 25, 2019
33 °C
ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದ ಶಿಕ್ಷಣ ಇಲಾಖೆಯ ನಿವೃತ್ತ ಸಹ ನಿರ್ದೇಶಕ ಡಿ.ಕೆ. ಶಿವಕುಮಾರ್‌

ಚಿತ್ರಕಲಾ ಶಿಕ್ಷಕರು ಎಲ್ಲ ವಿಷಯಗಳ ಬೋಧಕರು

Published:
Updated:
Prajavani

ದಾವಣಗೆರೆ: ವಿಷಯವಾರು ಶಿಕ್ಷಕರು ಒಂದೊಂದು ವಿಷಯಗಳನ್ನಷ್ಟೇ ಬೋಧನೆ ಮಾಡಿದರೆ ಚಿತ್ರಕಲಾ ಶಿಕ್ಷಕರು ಎಲ್ಲ ವಿಷಯಗಳ ಬೋಧಕರು ಆಗಿರುತ್ತಾರೆ ಎಂದು ಶಿಕ್ಷಣ ಇಲಾಖೆಯ ನಿವೃತ್ತ ಸಹ ನಿರ್ದೇಶಕ ಡಿ.ಕೆ. ಶಿವಕುಮಾರ್‌ ಹೇಳಿದರು.

ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಬುಧವಾರ ನಗರದ ಡಯೆಟ್‌ ಸಭಾಂಗಣದಲ್ಲಿ ಏರ್ಪಡಿಸಿದ್ದ ಚಿತ್ರಕಲಾ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜೀವವಿಜ್ಞಾನದಲ್ಲಿ ಬರುವ ದೇಹದ ಸಂರಚನೆ ಬಗ್ಗೆ ಚಿತ್ರ ಬಿಡಿಸುವುದನ್ನು ವಿದ್ಯಾರ್ಥಿಗಳಿಗೆ ಕಲಾ ಶಿಕ್ಷಕ ಹೇಳಿಕೊಡಬಹುದು. ಹಾಗೇಯೇ ಸಮಾಜದಲ್ಲಿ ನಕಾಶೆಗಳು, ಭೌತ, ರಸಾಯನ ವಿಜ್ಞಾನದ ಚಿತ್ರಗಳು, ಭಾಷಾ ಪಠ್ಯದಲ್ಲಿ ಅಕ್ಷರಗಳನ್ನು ಚೆನ್ನಾಗಿ ಬರೆಯುವುದು ಎಲ್ಲವನ್ನು ಹೇಳಿಕೊಡುವ ಅವಕಾಶ ಇದೆ. ಆದರೆ ಕಲಾ ಶಿಕ್ಷಕರು ಇದನ್ನು ಅರ್ಥ ಮಾಡಿಕೊಳ್ಳದೇ ಸೀಮಿತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಚಿತ್ರಕಲಾ ಸಂಘವು 2012ರ ಈಚೆಗೆ ಚೆನ್ನಾಗಿ ಕೆಲಸ ಮಾಡುತ್ತಿದೆ. ಈ ರೀತಿಯ ಚಿತ್ರಕಲಾ ಪ್ರದರ್ಶನಗಳನ್ನು ಏರ್ಪಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರ ತೆಗೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಒಂದು ಚಿತ್ರ ಸಾವಿರ ಸಂದೇಶಗಳನ್ನು ನೀಡುವ ಸಾಧನ. ಇದು ಪ್ರಾಚೀನ ಕಾಲದಿಂದಲೂ ಇತ್ತು. ಇಂಥ ಚಿತ್ರಗಳನ್ನು ಅಧ್ಯಯನ ಮಾಡುವುದರಿಂದ, ವಿಶ್ಲೇಷಣೆ ಮಾಡುವುದರಿಂದ ಹೊಸತನವನ್ನು ಕಲಿಯಲು ಸಾಧ್ಯವಾಗುತ್ತದೆ ಎಂದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಆಯುಕ್ತರ ಕಚೇರಿಯ ನಿವೃತ್ತ ನಿರ್ದೇಶಕ ಎನ್‌.ಎಸ್‌. ಕುಮಾರ್‌, ‘ಶಿಕ್ಷಕರು ಪಠ್ಯ, ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರ ಜತೆಗೆ ಸಾಮಾಜಿಕ ಕಾರ್ಯಗಳಲ್ಲಿ, ರಾಷ್ಟ್ರೀಯ ಹಬ್ಬಗಳ ಆಚರಣೆಗಳಲ್ಲಿಯೂ ಇರಬೇಕಾಗುತ್ತದೆ. ಚುನಾವಣೆ ಬಂದಾಗ ಸುಲಲಿತವಾಗಿ ನಡೆಸಲು ಶಿಕ್ಷಕರ ಪಾತ್ರ ದೊಡ್ಡದಿರುತ್ತದೆ’ ಎಂದು ಹೇಳಿದರು.

ವಿದ್ಯಾರ್ಥಿಗಳು ವಿಷಯವಾರು ಶಿಕ್ಷಕರನ್ನು ಮರೆತರೂ ಕಲಾ ಶಿಕ್ಷಕರನ್ನು ಮರೆಯುವುದಿಲ್ಲ. ರವಿ ಕಾಣದ್ದನ್ನು ಕವಿ ಮಾತ್ರ ಕಾಣುವುದಲ್ಲ. ಕಲಾವಿದನೂ ಕಾಣುತ್ತಾನೆ. ಸಿಕ್ಕಿದ ಅವಕಾಶಗಳನ್ನು ಬಳಸಿಕೊಂಡು ಸದೃಢ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದರು.

ಡಯಟ್ ಪ್ರಾಚಾರ್ಯ ಎಚ್‌.ಕೆ. ಲಿಂಗರಾಜ್‌ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌, ಶಿಕ್ಷಣಾಧಿಕಾರಿ ಎಂ. ನಿರಂಜನಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಸಿ. ಸಿದ್ಧಪ್ಪ, ಜಿ. ಕೊಟ್ರೇಶ್‌, ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಸೋಮಣ್ಣ ಚಿತ್ರಗಾರ, ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್ಸ್‌ನ ಅಮ್ಜದ್‌ಖಾನ್‌, ಉಮೇಶ್‌, ಸಂಘದ ಅಧ್ಯಕ್ಷ ಆರ್. ನಾಗಭೂಷಣ, ಖಜಾಂಚಿ ವಸಂತ ಎನ್‌. ರಾಟೆ ಅವರೂ ಇದ್ದರು.

ಕಾರ್ಯದರ್ಶಿ ಪಿ. ನಾಗರಾಜ ಭಾನುವಳ್ಳಿ ಸ್ವಾಗತಿಸಿದರು. ಶಾಂತಯ್ಯ ಪರಡಿಮಠ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !