ಮಂಗಳವಾರ, ನವೆಂಬರ್ 19, 2019
23 °C
ಒಂದು ದೇಶ, ಒಂದು ಸಂವಿಧಾನ ವಿಚಾರಸಂಕಿರಣದಲ್ಲಿ ಸಚಿವ ಈಶ್ವರಪ್ಪ

ಪಾಕಿಸ್ತಾನ ಸೇರಿಸಿದರೆ ಅಖಂಡ ಭಾರತದ ಕನಸು ನನಸು

Published:
Updated:
Prajavani

ದಾವಣಗೆರೆ: ಅಖಂಡ ಭಾರತವಾಗಬೇಕಿದ್ದರೆ ಜಮ್ಮು ಕಾಶ್ಮೀರದ ಕಲಂ 370 ರದ್ದು ಮಾಡಿದರೆ ಸಾಲದು, ಪಾಕ್‌ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಂಡರೂ ಸಾಕಾಗದು. ಪಾಕಿಸ್ತಾನವನ್ನೇ ಭಾರತಕ್ಕೆ ಸೇರಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

370ನೇ ವಿಧಿ ರದ್ದತಿ ಅಂಗವಾಗಿ ಜಿಲ್ಲಾ ಬಿಜೆಪಿ ಘಟಕ ರೇಣುಕ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಒಂದು ದೇಶ, ಒಂದು ಸಂವಿಧಾನ’ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಿದ್ದನ್ನು ವಿರೋಧಿಸಿದ ಶ್ಯಾಮಪ್ರಸಾದ ಮುಖರ್ಜಿ ಕಾಶ್ಮೀರದ ಗಡಿ ದಾಟಿದ್ದಕ್ಕಾಗಿ ಅವರನ್ನು ಜೈಲಿಗೆ ಹಾಕಲಾಯಿತು. ಜೈಲಲ್ಲೇ ಅವರು ಮೃತಪಟ್ಟರು. ಅಂಥವರ ಆತ್ಮಕ್ಕೆ ಶಾಂತಿ ಸಿಗಬೇಕಿದ್ದರೆ ಪಾಕಿಸ್ತಾನವು ಭಾರತಕ್ಕೆ ಸೇರಬೇಕು ಎಂದು ಪ್ರತಿಪಾದಿಸಿದರು.

ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ತಂದು ಕೊಡಲು ಯಾರೂ ಹೋರಾಟ ಮಾಡಿಲ್ಲ. ರಸ್ತೆ, ಚರಂಡಿ, ಮನೆ, ಕೈಗಾರಿಕೆ ಕಟ್ಟಲು ಹೋರಾಟ ಮಾಡಿದ್ದಲ್ಲ. ಬ್ರಿಟಿಷರು ಇರುವಾಗಲೂ ಆ ಕೆಲಸಗಳು ಆಗುತ್ತಿದ್ದವು. ಅಖಂಡ ಭಾರತವೆಂಬ ಜಗತ್‌ಜನನಿಗಾಗಿ ಹೋರಾಟ ಮಾಡಿದರು. ಅವರೆಲ್ಲರ ಕನಸು ನನಸು ಮಾಡಲು ನರೇಂದ್ರ ಮೋದಿ ಎಂಬ ಗಂಡುಗಲಿ ಬಂದಿದ್ದಾರೆ. ಸರ್ಧಾರ್‌ ವಲ್ಲಭ ಭಾಯಿ ಪಟೇಲರಂಥ ಗೃಹಸಚಿವ ಅಮಿತ್‌ಶಾ ಈಗ ಇದ್ದಾರೆ. ಕಾಶ್ಮೀರವನ್ನು ಭಾರತದೊಂದಿಗೆ ವಿಲೀನ ಮಾಡಲು ಆಗಿನ ಪ್ರಧಾನಿ ವಿಫಲರಾಗಿದ್ದರು. 370 ವಿಧಿಯನ್ನು ಕಿತ್ತು ಹಾಕಲು ಈಗಿನ ಪ್ರಧಾನಿ ಸಫಲರಾದರು ಎಂದರು.

ಹಿಂದೂ, ಮುಸ್ಲಿಮರನ್ನು ಕಾಂಗ್ರೆಸ್‌ ಬೇರೆ ಬೇರೆ ಮಾಡಿತು. ಬಿಜೆಪಿ ಜತೆ ಹೋದರೆ ನಿಮ್ಮನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಾರೆ ಎಂದು ಮುಸ್ಲಿಮರನ್ನು ಹೆದರಿಸಿಟ್ಟರು. ಒಂದು ದೇಶ ಅಂದ ಮೇಲೆ ಒಂದೇ ಕಾನೂನು ಇರಬೇಕು. ಹಿಂದೂಗಳಿಗೆ ‘ನಾವಿಬ್ಬರು ನಮಗಿಬ್ಬರು’ ಎಂಬ ಕಾನೂನು, ಮುಸ್ಲಿಮರಿಗೆ ‘ಹಮ್‌ ಪಾಂಚ್ ಹಮ್ಕೊ ಪಚ್ಚೀಸ್‌’ ಇದು ಯಾವ ಕಾನೂನು? ಮೂರು ಸಲ ತಲಾಖ್‌ ಅಂದರೆ ಹೆಂಡ್ತಿಯನ್ನು ಬಿಡಬಹುದಂತೆ. ಆ ಹೆಣ್ಣು ಮಗುವಿಗೆ ನ್ಯಾಯ ಕೊಡಬೇಕು ಎಂಬ ಕಾರಣಕ್ಕೆ ತಲಾಖ್‌ ಕಿತ್ತು ಹಾಕಲಾಯಿತು ಎಂದರು.

ತಲಾಖ್‌ ಕಾನೂನು ತೆಗೆದಾಗ ಮುಸ್ಲಿಂ ಗಂಡಸರು, ಮಹಿಳೆಯರು ವಿರೋಧಿಸಲಿಲ್ಲ. ಈ ಕಾಂಗ್ರೆಸಿಗರು ವಿರೋಧಿಸಿದರು. ಅವರನ್ನು ಏನೆಂದು ಕರೆಯಲಿ ಎಂದು ಪ್ರಶ್ನಿಸಿದರು.

ಗಾಂಧೀಜಿಯ ರಾಮರಾಜ್ಯದ ಕನಸು, ಪಟೇಲರ ಪೌರುಷ, ಶ್ಯಾಮಪ್ರಸಾದ ಮುಖರ್ಜಿ, ದೀನ್‌ ದಯಾಳ್‌ ಉಪಾಧ್ಯಾಯರ ಬಲಿದಾನದ ಪ್ರತೀಕವಾಗಿ ನರೇಂದ್ರ ಮೋದಿ ಇದ್ದಾರೆ. 370 ವಿಧಿ ಯಾಕೆ ರದ್ದು ಮಾಡಲಾಯಿತು ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಊರಲ್ಲಿ ಪಕ್ಕದವರಿಗೂ ತಿಳಿಸಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕ್ಯಾ. ಗಣೇಸ್‌ ಕಾರ್ಣಿಕ್‌, ಸಂಸದ ಜಿ.ಎಂ. ಸಿದ್ದೇಶ್ವರ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಶಾಸಕರಾದ ಎಸ್‌.ಎ. ರವೀಂದ್ರನಾಥ, ಎಸ್‌.ವಿ. ರಾಮಚಂದ್ರ, ಪ್ರೊ. ಎನ್‌. ಲಿಂಗಣ್ಣ, ಮಾಜಿ ಶಾಸಕ ಬಸವರಾಜ ನಾಯ್ಕ್‌, ಬಿಜೆಪಿ ರಾಜ್ಯ ಸಂಚಾಲಕ ಡಾ. ರಮೇಶ್‌ ಕುಮಾರ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್‌, ಉಪಾಧ್ಯಕ್ಷ ಸುರೇಂದ್ರ ನಾಯ್ಕ್ ಇದ್ದರು.

ವಾಗೀಶ ಸ್ವಾಮಿ ಸ್ವಾಗತಿಸಿದರು. ಬಿ.ಎಂ. ಸತೀಶ್‌ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಕ್ರಿಯಿಸಿ (+)