ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ ಪಂಚಮಸಾಲಿ ವಿರಾಟ್‌ ಸಮಾವೇಶ ಡಿ.22ಕ್ಕೆ

ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಶ್ರೀ ಹೇಳಿಕೆ
Last Updated 12 ಡಿಸೆಂಬರ್ 2022, 6:23 IST
ಅಕ್ಷರ ಗಾತ್ರ

ದಾವಣಗೆರೆ: ಬೆಳಗಾವಿಯಲ್ಲಿ 25 ಲಕ್ಷ ಪಂಚಮಸಾಲಿಗಳು ಸೇರಿ ವಿರಾಟ್‌ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ರಾಜ್ಯ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಘೋಷಿಸಿದರೆ ಅದು ಅಭಿನಂದನಾ ಸಮಾರಂಭವಾಗಲಿದೆ. ಘೋಷಿಸದೇ ಇದ್ದರೆ ವಿರಾಟ್‌ ಹೋರಾಟದ ಸಮಾವೇಶವಾಗಲಿದೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

‘ಡಿ. 12ಕ್ಕೆ ವಿಧಾನಸೌಧಕ್ಕೆ ಮಹಾಮುತ್ತಿಗೆ ಹಾಕಲು ನಿರ್ಧರಿಸಲಾಗಿತ್ತು. ಆಗ ಮುಖ್ಯಮಂತ್ರಿಯವರೇ ನಮ್ಮನ್ನು ಕರೆದು ಮಾತುಕತೆ ಮಾಡಿದರು. ಡಿ. 12ರ ಒಳಗೆ 2ಎ ಮೀಸಲಾತಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಬಳಿಕ ಡಿ.19ರಿಂದ ಬೆಳಗಾವಿ ಅಧಿವೇಶನ ನಡೆಯುತ್ತದೆ. ಅಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮತ್ತೆ ಮುಖ್ಯಮಂತ್ರಿಯವರೇ ತಿಳಿಸಿದರು. ಹಾಗಾಗಿ ಈ ಬಾರಿ 2ಎ ಮೀಸಲಾತಿ ಸಿಗುವ ವಿಶ್ವಾಸ ಇದೆ’ ಎಂದು ಸ್ವಾಮೀಜಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡಿ.22ರಂದು ಅಭಿನಂದನೆ ಇಲ್ಲವೇ ವಿರಾಟ್‌ ಸಮಾವೇಶ ಮಾಡಲು ತೀರ್ಮಾನಿಸಲಾಗಿದೆ. ಇದರ ರೂಪುರೇಷೆಗಳು ಹೇಗಿರಬೇಕು ಎಂಬ ಬಗ್ಗೆ ಡಿ.12ರಂದು ಬೆಳಗಾವಿ ಗಾಂಧಿ ಭವನದಲ್ಲಿ ಸಮುದಾಯದ ಪ್ರತಿನಿಧಿಗಳು, ಪದಾಧಿಕಾರಿಗಳು, ಸಮುದಾಯದ ಸದಸ್ಯರು ಸೇರಿ ಚರ್ಚೆ ನಡೆಸಲಾಗುವುದು ಎಂದರು.

‘ಲಿಂಗಾಯತದ ಎಲ್ಲ ಸಮುದಾಯಗಳಿಗೆ ಕೇಂದ್ರ ಸರ್ಕಾರವು ಒಬಿಸಿ ಸ್ಥಾನಮಾನ ನೀಡಬೇಕು. ರಾಜ್ಯ ಸರ್ಕಾರವು ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡಬೇಕು ಎಂಬ ಹೋರಾಟ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಲಿಂಗಾಯತ ಸಮುದಾಯದ 32 ಒಳಪಂಗಡಗಳಿಗೆ ಈಗಾಗಲೇ 2ಎ ಮೀಸಲಾತಿ ಇದೆ. ನಮಗೂ ಕೊಡಿ ಎಂದು ಕೇಳುತ್ತಾ ಬಂದಿದ್ದೇವೆ. ಬೇರೆ ಪಂಗಡಗಳಿಗೆ ಕೊಡಬೇಡಿ ಎನ್ನುವುದು ನಮ್ಮ ಉದ್ದೇಶವಲ್ಲ’ ಎಂದು ಸ್ಪಷ್ಟಪಡಿಸಿದರು.

‘ಯಾವುದೇ ಹೋರಾಟ ಯಶಸ್ವಿಯಾಗುವ ಹಂತಕ್ಕೆ ಬಂದಾಗ ಚೂರಿ ಹಾಕುವವರು, ಅದರ ಯಶಸ್ಸಿನ ಪಾಲು ತೆಗೆದುಕೊಳ್ಳಲು ಹವಣಿಸುವವರು ಇದ್ದೇ ಇರುತ್ತಾರೆ. ಪಂಚಮಸಾಲಿ ಸಮುದಾಯದ ಹೋರಾಟವೂ ಅಷ್ಟೇ. ತಾರ್ಕಿಕ ಅಂತ್ಯಕ್ಕೆ ಬಂದಾಗ ಬೇರೆಯವರು ನಾವೇ ಮಾಡಿದ್ದು ಎಂದು ಹೇಳಿಕೊಳ್ಳುತ್ತಾರೆ. ಯಾರು ಹೋರಾಟ ಮಾಡಿದ್ರು ಎಂಬುದು ಜನರಿಗೆ ಗೊತ್ತು. ಜನರಿಗೆ ಒಳ್ಳೆಯದಾದರೆ ಸಾಕು’ ಎಂದು ಹೇಳಿದರು.

‘ಮೀಸಲಾತಿ ಬಗ್ಗೆ 27 ವರ್ಷಗಳಿಂದ ಬೇಡಿಕೆ, ಬಯಕೆ ಇದೆ. ಆದರೆ ಹೋರಾಟ ಎಂಬ ಮಾತು ಹಿಂದೆ ಇರಲಿಲ್ಲ. 2012ರಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಮೊದಲ ಹೋರಾಟ ನಡೆಯಿತು. 2020ರ ನಂತರ ಮೀಸಲಾತಿ ಹೋರಾಟ ತೀವ್ರಗೊಂಡಿತು. ಮೀಸಲಾತಿ ಬೇಡ ಎಂದು ಹೇಳುವವರ ಬಾಯಲ್ಲಿಯೂ ಈಗ ಮೀಸಲಾತಿ ಬೇಕು ಎಂಬ
ಮಾತು ಬರುತ್ತಿದೆ. ಅಷ್ಟು ಬದಲಾವಣೆಯಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT