ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೀಟ್‌ ವಿವಾದ: ಹರ್ಷ ಮೊಯಿಲಿಗೆ ನೋಟಿಸ್‌

Last Updated 17 ಮಾರ್ಚ್ 2018, 19:42 IST
ಅಕ್ಷರ ಗಾತ್ರ

ಬೆಂಗಳೂರು: ಪಕ್ಷದ ಟಿಕೆಟ್‌ ಹಂಚಿಕೆ ಕುರಿತಂತೆ ಟ್ವೀಟ್ ಮಾಡಿ ಮುಜುಗರ ಉಂಟು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಮುಖಂಡ ವೀರಪ್ಪ ಮೊಯಿಲಿ ಪುತ್ರ ಹರ್ಷ ಮೊಯಿಲಿಗೆ ರಾಜ್ಯ ಕಾಂಗ್ರೆಸ್‌ ಶನಿವಾರ ರಾತ್ರಿ ನೋಟಿಸ್‌ ಜಾರಿ ಮಾಡಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ನಿರ್ದೇಶನದ ಮೇರೆಗೆ ಕೆಪಿಸಿಸಿ ಈ ನೋಟಿಸ್ ನೀಡಿದ್ದು, ವಾರದೊಳಗೆ ಉತ್ತರಿಸುವಂತೆ ಸೂಚಿಸಿದೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೆ ಮಾಡಲಾಗಿರುವ ಈ ಟ್ವೀಟ್‌ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ ಇದನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಲು
ಪ್ರಯತ್ನಿಸುತ್ತಿವೆ.

ಬುಧವಾರ ನಡೆದ ಚುನಾವಣಾ ಸಮಿತಿ ಸಭೆಯಲ್ಲಿ ವೀರಪ್ಪ ಮೊಯಿಲಿ ಜತೆಗೆ ಜಟಾಪಟಿಗೆ ಇಳಿದ ಲೋಕೋ‍ಪಯೋಗಿ ಸಚಿವ ಎಚ್‌.ಸಿ ಮಹದೇವಪ್ಪ ಅವರಿಗೂ ಎಚ್ಚರಿಕೆ ನೀಡುವಂತೆ ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಅವರಿಗೆ ಸೂಚಿಸಿದ್ದಾರೆ.

ಇವರಿಬ್ಬರ ಜಟಾಪಟಿಯ ಬಳಿಕ ಮೊಯಿಲಿ ಅವರ ಟ್ವೀಟರ್‌ ಖಾತೆಯಲ್ಲಿ ‘ಹಣದ ರಾಜಕೀಯಕ್ಕೆ ಕಾಂಗ್ರೆಸ್‌ ಅಂತ್ಯ ಹಾಡಬೇಕಿದೆ. ರಸ್ತೆ ಗುತ್ತಿಗೆದಾರರು ಮತ್ತು ಅವರೊಂದಿಗೆ ಸಂಬಂಧ ಹೊಂದಿರುವ ರಾಜ್ಯದ ಲೋಕೋ‍ಪಯೋಗಿ ಸಚಿವ ಮುಂಬರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ನಿರ್ಧರಿಸಲಾಗದು’ ಎಂದು ಸ್ಟೇಟಸ್‌ ಇತ್ತು.

ಈ ಟ್ವೀಟ್ ಸಾಕಷ್ಟು ವಿವಾದ ಸೃಷ್ಟಿಸಿದ ಬಳಿಕ ಎಚ್ಚೆತ್ತುಕೊಂಡ ಮೊಯಿಲಿ, ಅದನ್ನು ಡಿಲೀಟ್ ಮಾಡಿ
ದ್ದರು. ಅಲ್ಲದೆ, ಆ ಟ್ವೀಟ್‍ ತಮ್ಮದಲ್ಲ ಎಂಬ ಸ್ಪಷ್ಟನೆಯನ್ನೂ ನೀಡಿದ್ದರು.

ಆದರೆ, ಟಿಕೆಟ್‌ ನಿರೀಕ್ಷೆಯಲ್ಲಿರುವ ಕಾಂಗ್ರೆಸ್‌ನ ಹಲವು ನಿಷ್ಠಾವಂತರು ಈ ಟ್ವೀಟ್‌ನ ಹಿಂದಿನ ವಾಸ್ತವದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.

‘ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷವನ್ನು ಒಂದು ಮಟ್ಟಕ್ಕೆ ತಂದಿದ್ದೆವು. ಎಲ್ಲವೂ ಸರಿ ಆಗಿದೆ ಅಂದುಕೊಂಡಾಗಲೇ ಮೊಯಿಲಿ ಟ್ವೀಟ್‌ನಿಂದ ಪಕ್ಷಕ್ಕೆ ಹಾನಿಯಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರ ಬಳಿ ಅಲವತ್ತುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ನಾವು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಕಷ್ಟಪಡುತ್ತಿದ್ದೇವೆ. ಪಕ್ಷವನ್ನು ಮೇಲಕ್ಕೆ ಎತ್ತಿದರೆ ಮೊಯಿಲಿ ಪಾತಾಳಕ್ಕೆ ಇಳಿಸಲು ಹೊರಟಿದ್ದಾರೆ’ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT