ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದವಾಡ ಕೆರೆಗೆ ಪ್ಲಾಸ್ಟಿಕ್‌ ಹೊದಿಕೆ: ಧರಣಿ ನಡೆಸುವ ಎಚ್ಚರಿಕೆ

ಕುಂದವಾಡ ಕೆರೆಗೆ ಪ್ಲಾಸ್ಟಿಕ್‌ ಹೊದಿಕೆಗೆ ಪರಿಸರ ಸಂರಕ್ಷಣಾ ವೇದಿಕೆ ವಿರೋಧ
Last Updated 30 ಮಾರ್ಚ್ 2021, 11:45 IST
ಅಕ್ಷರ ಗಾತ್ರ

ದಾವಣಗೆರೆ: ಸ್ಮಾರ್ಟ್‌ ಸಿಟಿ ಯೋಜನೆಯಡಿ ಕುಂದವಾಡ ಕೆರೆಯ ದಂಡೆಗೆ ಪ್ಲಾಸ್ಟಿಕ್‌ ಹೊದಿಕೆ ಹಾಕುತ್ತಿರುವುದರಿಂದ ಜೀವವೈವಿಧ್ಯಕ್ಕೆ ಮಾರಕವಾಗಲಿದೆ. ವಾರದೊಳಗೆ ಕಾಮಗಾರಿಯನ್ನು ನಿಲ್ಲಿಸದೇ ಇದ್ದರೆ ಕೆರೆಯ ಆವರಣದಲ್ಲೇ ಧರಣಿ ನಡೆಸಲಾಗುವುದು ಎಂದು ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್‌ ಎಸ್‌.ದೇವರಮನೆ ಎಚ್ಚರಿಕೆ ನೀಡಿದರು.

‘ಕೆರೆಗೆ ಪ್ಲಾಸ್ಟಿಕ್‌ ಹೊದಿಕೆ ಹಾಕುವುದರಿಂದ ಪ್ಲಾಸ್ಟಿಕ್‌ ತ್ಯಾಜ್ಯದ ವಿಷಕಾರಿ ಅಂಶ ಕುಡಿಯುವ ನೀರಿಗೆ ಸೇರಿಕೊಳ್ಳಲಿದೆ. ಶುದ್ಧೀಕರಣ ಘಟಕದಲ್ಲಿ ಪ್ಲ್ಯಾಸ್ಟಿಕ್‌ ವಿಷಕಾರಿ ಅಂಶವನ್ನು ತೆಗೆಯುವ ಸಾಮರ್ಥ್ಯವಿಲ್ಲ. ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಕೂಡಲೇ ಪ್ಲಾಸ್ಟಿಕೀಕರಣಗೊಳಿಸುವುದನ್ನು ಕೂಡಲೇ ನಿಲ್ಲಿಸಬೇಕು. ಈ ಬಗ್ಗೆ ಮಠಾಧೀಶರು, ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಚರ್ಚಿಸಿ ಪಕ್ಷಾತೀತವಾಗಿ ಹೋರಾಟ ನಡೆಸಲಾಗುವುದು’ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಜೀವವೈವಿಧ್ಯ ಮಂಡಳಿಗೆ ದೂರು ನೀಡಲಾಗಿತ್ತು. ಮಂಡಳಿಯ ಸೂಚನೆಯಂತೆ ಸ್ಥಳಪರಿಶೀಲಿಸಿದ ಅರಣ್ಯ ಇಲಾಖೆಯು ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿರುವ ಬಗ್ಗೆ ವರದಿ ನೀಡಿದೆ. ಸ್ಮಾರ್ಟ್‌ ಸಿಟಿಯಿಂದ ಸಾರ್ವಜನಿಕ ಅಹವಾಲು ಸ್ವೀಕರಿಸಲು ಸಭೆ ನಡೆಸಿಲ್ಲ. ಪರಿಸರದ ಮೇಲಿನ ಪರಿಣಾಮ ಮೌಲ್ಯಮಾಪನ (ಇ.ಐ.ಎ)ವನ್ನು ಕೈಗೊಂಡಿಲ್ಲ. ಪರಿಸರ ಇಲಾಖೆಯ ತಾತ್ವಿಕ ಒಪ್ಪಿಗೆಯನ್ನು ಪಡೆದುಕೊಂಡಿಲ್ಲ. ಏಕಾಏಕಿ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿರುವುದನ್ನು ಲೋಪವೆಂದು ಪರಿಗಣಿಸಬಹುದು ಎಂದು ಅರಣ್ಯ ಇಲಾಖೆ ವರದಿಯಲ್ಲಿ ಉಲ್ಲೇಖಿಸಿದೆ. ಅವೈಜ್ಞಾನಿಕ ಕಾಮಗಾರಿಯನ್ನು ತಡೆಯುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ. ಅರಣ್ಯ ಇಲಾಖೆಯ ಮೇಲೆ ಜಿಲ್ಲಾಧಿಕಾರಿಗೆ ನಂಬಿಕೆ ಇಲ್ಲವೇ’ ಎಂದು ಪ್ರಶ್ನಿಸಿದರು.

ಯುವ ಹವನಿ ಗ್ರೀನ್‌ ಬ್ರಿಗೇಡ್‌ ಅಧ್ಯಕ್ಷ ಪವನ್‌ ರೇವಣಕರ್‌, ‘ಜನರು, ಪರಿಸರದ ಮೇಲೆ ದುಷ್ಪರಿಣಾಮವಾದರೂ ಪರವಾಗಿಲ್ಲ ಎಂದುಕೊಂಡು ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುವ ಮೂಲಕ ಅನುದಾನವನ್ನು ದುಂದುವೆಚ್ಚ ಮಾಡಲಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಗೋಲ್‌ಮಾಲ್‌ ನಡೆಯುತ್ತಿದ್ದು, ಜಿಲ್ಲಾಧಿಕಾರಿ, ಸಂಸದರು ಹಾಗೂ ಶಾಸಕರು ಮಧ್ಯ ಪ್ರವೇಶಿಸಿ ಕಾಮಗಾರಿಯನ್ನು ತಡೆಯಬೇಕು’ ಎಂದು ಮನವಿ ಮಾಡಿದರು.

ಜನಸಾಮಾನ್ಯ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಸನ್ನ ಬೆಳಕೆರೆ, ‘ಕಮಿಷನ್‌ ಆಸೆಯಿಂದ ನಡೆಯುತ್ತಿರುವ ಕಾಮಗಾರಿಗಳಿಂದ ಜಲಚರಗಳು ನಾಶವಾಗುತ್ತಿವೆ. ಪರಿಸರಕ್ಕೆ ಪೂರಕ ಹಾಗೂ ವೈಜ್ಞಾನಿಕವಾಗಿ ಕಾಮಗಾರಿ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಭುಲಿಂಗಪ್ಪ ಅವರೂ ಇದ್ದರು.

*

ಕುಂದವಾಡ ಕೆರೆಯಲ್ಲಿನ ಅವೈಜ್ಞಾನಿಕ ಕಾಮಗಾರಿಯಿಂದ ಹಲವು ಬಗೆಯ ಜೀವಿಗಳು ನಾಶವಾಗುತ್ತಿವೆ. ಸ್ಮಾರ್ಟ್‌ ಸಿಟಿಯಡಿ ಜೀವಿಗಳಿಗೂ ಬದುಕಲು ಇವರು ಪ್ರತ್ಯೇಕ ನಿವೇಶನಗಳನ್ನು ಮಾಡಿಕೊಡುತ್ತಾರೆಯೇ?

ಗಿರೀಶ ದೇವರಮನೆ, ಅಧ್ಯಕ್ಷ, ಪರಿಸರ ಸಂರಕ್ಷಣಾ ವೇದಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT