ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ: ಚಿಕಿತ್ಸೆಗಾಗಿ ಪರದಾಡಿದ ರೋಗಿ

7

ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ: ಚಿಕಿತ್ಸೆಗಾಗಿ ಪರದಾಡಿದ ರೋಗಿ

Published:
Updated:

ದಾವಣಗೆರೆ: ಬೈಕ್‌ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ರಕ್ತಸ್ರಾವದಿಂದ ಬಳಲುತ್ತಿದ್ದ ಹೊಸದುರ್ಗ ತಾಲ್ಲೂಕಿನ ರೋಗಿಯೊಬ್ಬರಿಗೆ ವೈದ್ಯರು ಸಕಾಲಕ್ಕೆ ಚಿಕಿತ್ಸೆ ನೀಡದೇ ಇರುವುದರಿಂದ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಅಲೆದಾಡಿ ಕೊನೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿರುವ ಪ್ರಸಂಗ ಭಾನುವಾರ ನಡೆದಿದೆ.

ಹೊಸದುರ್ಗ ತಾಲ್ಲೂಕಿನ ಬೋಕಿನಹಳ್ಳಿಯ ಪರುಶುರಾಮ್ ಶನಿವಾರ ತಡ ರಾತ್ರಿ ಬೈಕ್‌ನಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು.

‘ಚಿಕಿತ್ಸೆಗಾಗಿ ಬೆಳಗಿನ ಜಾವ ಮೂರು ಗಂಟೆಗೆ ಹೊಸದುರ್ಗ ಆಸ್ಪತ್ರೆ ಒಯ್ಯಲಾಯಿತು. ಅಲ್ಲಿನ ವೈದ್ಯರು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಆದರೆ, ಅಲ್ಲಿಯೂ ವೈದ್ಯರು ಚಿಕಿತ್ಸೆ ನೀಡದೆ ದಾವಣಗೆಗೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಭಾನುವಾರ ಬೆಳಿಗ್ಗೆ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಬಂದಾಗ, ರೋಗಿಯ ಮೈಮೇಲಿನ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿಕೊಂಡು ಬಂದ ಬಳಿಕ ಚಿಕಿತ್ಸೆ ನೀಡುವುದಾಗಿ ವೈದ್ಯರು ಹೇಳಿದರು. ಇದರಿಂದ ಬೇಸತ್ತು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮಗನನ್ನು ದಾಖಲಿಸಿದೆವು’ ಎಂದು ಪರಶುರಾಮ್‌ ತಂದೆ ಜಯಣ್ಣ ದೂರಿದ್ದಾರೆ.

ಮದ್ಯದ ನಶೆಯಲ್ಲಿ ಗಲಾಟೆ:  ‘ಮದ್ಯದ ನಶೆಯಲ್ಲಿದ್ದಾಗ ಅಪಘಾತ ಉಂಟಾಗಿ ರೋಗಿ ಗಾಯಗೊಂಡಿದ್ದರು. ಹೀಗಾಗಿ ಅವರಿಗೆ ಹೆಚ್ಚಿನ ಅರಿವಳಿಕೆಯನ್ನೂ ಕೊಡುವುದು ಕಷ್ಟವಾಗಿತ್ತು. ಆಸ್ಪತ್ರೆಗೆ ಬಂದಾಗ ಕರ್ತವ್ಯದಲ್ಲಿದ್ದ ಹೌಸ್‌ ಸರ್ಜನ್‌ ಹಾಗೂ ನರ್ಸ್‌ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೊಲಿಗೆ ಹಾಕಲು ಮುಂದಾದಾಗ ಆತ ಗಲಾಟೆ ಮಾಡಿದ ಪರಿಣಾಮ ವೈದ್ಯರ ಕೈಗೂ ಗಾಯವಾಗಿದೆ. ನಮ್ಮಲ್ಲಿ ತಜ್ಞ ನ್ಯೂರೊಲಾಜಿಸ್ಟ್‌ ಇಲ್ಲದೇ ಇರುವುದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸುವುದು ಒಳಿತು ಎಂದು ಸಲಹೆ ನೀಡಿದ್ದಾರೆ. ಅಷ್ಟರಲ್ಲೇ ಆತನ ಕಡೆಯವರು ಗಲಾಟೆ ಮಾಡಿಕೊಂಡು ರೋಗಿಯನ್ನು ಬೇರೆ ಕಡೆ ಕರೆದುಕೊಂಡು ಹೋಗಿದ್ದಾರೆ’ ಎಂದು ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕಿ ಡಾ. ಡಿ.ಎಚ್‌. ನೀಲಾಂಬಿಕೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೋಗಿಗೆ ಸ್ನಾನ ಮಾಡಿಸಿಕೊಂಡು ಬನ್ನಿ ಎಂದು ಯಾವ ವೈದ್ಯರೂ ಹೇಳಲಿಕ್ಕೆ ಸಾಧ್ಯವೇ ಇಲ್ಲ. ವೈದ್ಯರಿಗೂ ಮಾನವೀಯತೆ ಇದೆ. ಸುಳ್ಳು ಸುದ್ದಿಯನ್ನು ಹರಡಲಾಗಿದೆ’ ಎಂದು ಅವರು ಪ್ರತಿಕ್ರಿಯೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !