ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಂದಣಿ ಫಲಕ ಸರಿಯಿಲ್ಲದಿದ್ದರೆ ದಂಡ :ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ

Last Updated 26 ಡಿಸೆಂಬರ್ 2019, 16:38 IST
ಅಕ್ಷರ ಗಾತ್ರ

ದಾವಣಗೆರೆ: ವಾಹನಗಳ ನೋಂದಣಿ ಸಂಖ್ಯೆಯ ಫಲಕ ನಿಯಾಮಾನುಸಾರ ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಎಚ್ಚರಿಸಿದ್ದಾರೆ.

ವಾಹನ ನೋಂದಣಿ ಫಲಕಗಳ ಕಾನೂನು ರೀತಿ ತಯಾರಿಸುವ ಕುರಿತ ಕರಪತ್ರವನ್ನು ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.

ನಿರ್ದಿಷ್ಟ ಅಳತೆ ಹಾಗೂ ನಂಬರ್ ಪ್ಲೇಟ್‌ನ ಮೂರನೇ ಒಂದು ಭಾಗದಲ್ಲಿ ಸರ್ಕಾರದ ಹಾಲೋಗ್ರಾಮ್ ಮತ್ತು ಐಎನ್‌ಡಿ ಎಂದು ನಮೂದಾಗಿರಬೇಕು. ಫಲಕಗಳ ಮೇಲೆ ಯಾವುದೇ ವ್ಯಕ್ತಿಯ, ದೇವರ ಹೆಸರು, ಯಾವುದೇ ಚಿಹ್ನೆ, ಚಿತ್ರ, ಅನಧಿಕೃತವಾಗಿ ನಿಗಮ, ಆಯೋಗ, ಸಂಸ್ಘ ಸಂಸ್ಥೆಗಳ ಹೆಸರು, ಲಾಂಛನ ಬಳಸುವಂತಿಲ್ಲ ಎಂದು ಮಾಹಿತಿ ನೀಡಿದರು.

ನಿಯಮಾನುಸಾರ ಇರದಿದ್ದರೆ ಅಪಘಾತದ ಸಂದರ್ಭದಲ್ಲಿ ಮತ್ತು ಅಪರಾಧ ಎಸಗಿದಾಗ ವಾಹನಗಳ ನೋಂದಣಿ ಸಂಖ್ಯೆಯನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ ಎಂದರು.

ವಾಹನ ನೋಂದಣಿ ಸಂಖ್ಯೆಯ ಫಲಕದ ಗುರುತಿನ ಅಕ್ಷರಗಳು ಇಂಗ್ಲಿಷ್‌ ಭಾಷೆ ಮತ್ತು ಅಂಕಿಗಳು ಹಿಂದೂ ಅರೇಬಿಕ್ ಸಂಖ್ಯೆಯಲ್ಲಿರಬೇಕು. ವಾಹನವು ಹಿಂಬದಿ ಮತ್ತು ಮುಂಬದಿ ನೋಂದಣಿ ಫಲಕ ಹೊಂದಿರಬೇಕು. ನೋಂದಣಿ ಫಲಕದ ಅಳತೆ 1ಎಂಎಂ ಇರಬೇಕು. ಅಲ್ಯೂಮಿನಿಯಂ ಲೋಹದಿಂದ ಮಾಡಿದ್ದಾಗಿರಬೇಕು. ಐಎಸ್ಒ 759 ಮಾದರಿಯಲ್ಲಿ ರಚಿತವಾಗಿರಬೇಕು. ಅದರ ಅಂಚುಗಳು ಹಾಳಾಗದಂತೆ 10 ಎಂಎಂ ದುಂಡಾಕಾರವಾಗಿ ಮಾಡಿಸಬೇಕು. 2 ಮತ್ತು 3 ಚಕ್ರದ ವಾಹನಗಳು 200X100 ಎಂ.ಎಂ ಗಾತ್ರದ ಫಲಕ ಹೊಂದಿರಬೇಕು ಎಂದು ವಿವರಿಸಿದರು.

ಪ್ರಯಾಣಿಕರ ಕಾರುಗಳ ನಂಬರ್ ಪ್ಲೇಟ್ ಅಳತೆ 500X200 ಎಂಎಂ, ಲಘು ಮತ್ತು ಭಾರಿ ಗಾತ್ರದ ವಾಹನಗಳಿಗೆ 340X200 ಎಂಎಂ ಗಾತ್ರದ ಫಲಕ ಇರಬೇಕು. 2,3 ಮತ್ತು 4 ಚಕ್ರದ ವಾಹನಗಳಲ್ಲಿ ಮುಂಭಾಗದಲ್ಲಿ ಅಕ್ಷರಗಳು 35 ಎಂಎಂ ಎತ್ತರ ಹಾಗು 7 ಎಂಎಂ ದಪ್ಪ, ಹಿಂಭಾಗದಲ್ಲಿ 40 ಎಂಎಂ ಎತ್ತರ ಹಾಗೂ 7 ಎಂಎಂ ದಪ್ಪ ಇರಬೇಕು. ಮಧ್ಯದ ಅಂತರ 5 ಎಂಎಂ ಅಳತೆ ಇರಬೇಕು ಎಂದರು.

ನಿಗದಿತ ಅಳತೆಯ ನಂಬರ್‌ ಪ್ಲೇಟ್‌ಗಳನ್ನು ವಾಹನ ತಯಾರಿಕಾ ಕಂಪನಿಗಳೇ ನೀಡಲು ಹಿಂದೆಯೇ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಹಾಗಾಗಿ ಅದೇ ಅಳತೆಯಲ್ಲಿ ಬರುತ್ತಿದೆ. ನಂಬರ್‌ ಬರೆಯುವ ಅಂಗಡಿಗಳಿಗೂ ಈ ಬಗ್ಗೆ ಜಾಗೃತಿ ಮುಡಿಸಲಾಗುವುದು. ಸಾರ್ವಜನಿಕರಿಗೆ ಒಂದು ವಾರ ಅರಿವು ಮೂಡಿಸಲಾಗುವುದು. ಬಳಿಕ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ಇನ್‌ಸ್ಪೆಕ್ಟರ್‌ ಸತೀಶ್‌ ಕುಮಾರ್‌, ಸಂಚಾರ ಪೋಲೀಸ್ ಠಾಣೆ ಎಸ್‌ಐ ಮಂಜುನಾಥ ಲಿಂಗಾರೆಡ್ಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT