ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಗೆ ಸೀಮಿತಗೊಳಿಸಿದ ಜನ: ಸಿದ್ದರಾಮಯ್ಯ ಬೇಸರ

ಕೇಂದ್ರದ ಒಬಿಸಿ ಪಟ್ಟಿಗೆ ಲಿಂಗಾಯತ ಸಮಾಜ ಸೇರಿಸಲು ವಚನಾನಂದ ಸ್ವಾಮೀಜಿ ಒತ್ತಾಯ
Last Updated 15 ಜನವರಿ 2021, 15:00 IST
ಅಕ್ಷರ ಗಾತ್ರ

ದಾವಣಗೆರೆ: ‘ಮುಖ್ಯಮಂತ್ರಿ ಆಗಿದ್ದಾಗ ಎಲ್ಲ ಜನಾಂಗದ ಅಭಿವೃದ್ಧಿಗಾಗಿ ಹಲವು ಭಾಗ್ಯಗಳನ್ನು ನೀಡಿದ್ದರೂ ನನ್ನನ್ನು ಕುರುಬರವನು ಎಂದರೇ ಹೊರತು, ಮನುಷ್ಯನನ್ನಾ‌ಗಿ ಯಾರೂ ನೋಡಲಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಶುಕ್ರವಾರ ನಡೆದ ಹರಜಾತ್ರೆ ಹಾಗೂ ವಚನಾನಂದ ಸ್ವಾಮೀಜಿ ತೃತೀಯ ವರ್ಷದ ಪೀಠಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕಿತ್ತೂರು ರಾಣಿ ಚನ್ನಮ್ಮ ಜಯಂತಿಯನ್ನು ಸರ್ಕಾರದಿಂದ ಆಚರಿಸುವಂತೆ ಘೋಷಿಸಿದ್ದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ ಯಾವುದೋ ಒಂದು ಜಾತಿಗೆ ಮಾಡಿದ್ದಲ್ಲ. ಆದರೂ ಜನರು ನನ್ನನ್ನು ಜಾತಿಗೆ ಸೀಮಿತಗೊಳಿಸಿದರು. ನನ್ನನ್ನು ಮನುಷ್ಯ ಎಂದು ನೋಡಲಿಲ್ಲ. ಮಾನವಕುಲದಲ್ಲಿ ನಾನೂ ಒಬ್ಬ ಮನುಷ್ಯ’ ಎಂದರು.

ಪಂಚಮಸಾಲಿ ಪೀಠಾಧ್ಯಕ್ಷವಚನಾನಂದ ಸ್ವಾಮೀಜಿ, ‘ನಮ್ಮ ಸಮಾಜದ ಕಿತ್ತೂರು ರಾಣಿ ಚನ್ನಮ್ಮ ಅವರ ಜತೆ ಸಂಗೊಳ್ಳಿ ರಾಯಣ್ಣ ಇದ್ದರು. ಅದರಂತೆ ಸಿದ್ದರಾಮಯ್ಯ ಜತೆ ಪಂಚಮಸಾಲಿ ಸಮಾಜ ಸದಾ ಇರುತ್ತದೆ. ಅವರು ಸಿದ್ದರಾಮಯ್ಯ ಅಲ್ಲ. ಯೋಗರಾಮಯ್ಯ. ಅವರಿಗೆ ಮುಂದೆ ಉತ್ತಮ ಯೋಗ ಇದೆ. ಅದು ಶೀಘ್ರ ಬರಲಿ’ ಎಂದು ಆಶಿಸಿದರು.

‘ಪಂಚಮಸಾಲಿ ಸಮಾಜ ಒಂದಾಗಬೇಕು. ಸಮಾಜಕ್ಕೆ 2ಎ ಮೀಸಲಾತಿ ಸಂಬಂಧ ಪಂಚಮಸಾಲಿ ಸಮಾಜದ ಯಾವುದೇ ಪೀಠ ದನಿ ಎತ್ತಿದರೂ ಅದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇರುತ್ತದೆ. ಲಿಂಗಾಯತ ಸಮಾಜವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ಸರ್ಕಾರ ಮುಂದಾಗಬೇಕು’ ಎಂದು ಒತ್ತಾಯಿಸಿದರು.

ಸಮಾಜದ ಸಂಘಟನೆಗೆ ಫೆ.10ರಿಂದ ರಾಜ್ಯದಾದ್ಯಂತ ಗ್ರಾಮ ದರ್ಶನ ಹಮ್ಮಿಕೊಳ್ಳುವುದಾಗಿ ಸ್ವಾಮೀಜಿ ತಿಳಿಸಿದರು.

ಇದಕ್ಕೂ ಮುನ್ನ ಯುವರತ್ನ ಸಮಾವೇಶದಲ್ಲಿ ಮಾತನಾಡಿದವಚನಾನಂದ ಶ್ರೀ, ‘ಮುನಿರತ್ನರಿಂದಲೇ ರಾಜ್ಯ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅವರಿಗೆ ಸ್ಥಾನ ಸಿಗಬೇಕಿತ್ತು. ಮುಂದಿನ ವರ್ಷದ ಹರಜಾತ್ರೆಗೆ ಅವರು ಸಚಿವರಾಗಿ ಬರುತ್ತಾರೆ’ ಎಂದು ಹಾರೈಸಿದರು.

ಬಳಿಕ ವಚನಾನಂದ ಸ್ವಾಮೀಜಿಗೆ ರುದ್ರಾಕ್ಷಿಯ ಕಿರೀಟ ತೊಡಿಸುವ ಮೂಲಕ ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರು ತೃತೀಯ ವರ್ಷದ ಪೀಠಾರೋಹಣ ಕಾರ್ಯಕ್ರಮ ನೆರವೇರಿಸಿಕೊಟ್ಟರು.

ಶಾಸಕರಾದ ಎಂ.ಬಿ. ಪಾಟೀಲ, ಎಸ್‌.ರಾಮಪ್ಪ, ಪಿ.ಟಿ. ಪರಮೇಶ್ವರನಾಯ್ಕ್‌, ವಿಧಾನಸಭಾ ಉಪಸಭಾಪತಿ ಆನಂದ ಮಾಮನಿ ಇದ್ದರು.

ಬಿಎಸ್‌ವೈ ಸರ್ಕಾರ ಪಾಪದ ಕೂಸು:‘ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರ ಪಾಪದ ಕೂಸು. ಅಕ್ರಮವಾಗಿ ಸರ್ಕಾರ ರಚನೆ ಆಗಿದೆ’ ಎಂದು ಸಿದ್ದರಾಮಯ್ಯ ದೂರಿದರು.

ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಸರ್ಕಾರ ರಚನೆ ಕುರಿತ ಗುಟ್ಟುಒಂದೊಂದಾಗಿ ಹೊರಗೆ ಬರುತ್ತಿದೆ. ಅವರದ್ದೇ ಶಾಸಕರು ಹೇಳುವ ಸಿಡಿ ಬಗ್ಗೆ ತನಿಖೆ ಆಗಲಿ’ ಎಂದು ಆಗ್ರಹಿಸಿದರು.

‘ನಾನು ಕುರುಬರ ಎಸ್‌ಟಿ ಮೀಸಲಾತಿ ವಿರೋಧಿಯಲ್ಲ.ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿ ಮೀಸಲಾತಿ ಪಡೆಯಬಹುದಲ್ಲ’ ಎಂದು ಪ್ರಶ್ನಿಸಿದ ಅವರು, ‘ಪಾದಯಾತ್ರೆ ಮಾಡುತ್ತಾರಂತೆ,
ಈಶ್ವರಪ್ಪಗೆ ಧಮ್ ಇದ್ರೆ ಮುಂದಿನ ಮುಖ್ಯಮಂತ್ರಿ ಅಂತ ಹೇಳಲಿ ನೋಡೋಣ’ ಎಂದರು.

ಶಾಸಕ ಮುನಿರತ್ನ ಮಾತನಾಡಿ, ‘ಸಚಿವ ಸ್ಥಾನ ಸದ್ಯಕ್ಕೆ ಮುಗಿದ ಅಧ್ಯಾಯ.ಪಕ್ಷ ಸಂಘಟನೆ, ಕ್ಷೇತ್ರದ ಬಗ್ಗೆ ನಾನು ತಲೆಕಡಿಸಿಕೊಳ್ಳುತ್ತೇನೆ. ಎಲ್ಲದಕ್ಕೂ ದೇವರ ಕೃಪೆ ಬೇಕು. ಸಚಿವ ಸ್ಥಾನಕ್ಕೆ ಯಾವಾಗ ಕಾಲ ಕೂಡಿಬರುತ್ತೆ ನೋಡೋಣ’ ಎಂದು ಹೇಳಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT