ಭಾನುವಾರ, ಸೆಪ್ಟೆಂಬರ್ 22, 2019
25 °C
ಜನರ ಬಳಿಗೇ ಆಡಳಿತ ಒಯ್ಯಲು ಕ್ರಮ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ತಹಶೀಲ್ದಾರ್ ಕಚೇರಿಗಳಲ್ಲಿ ನಾಗರಿಕ ಮಿತ್ರ ಕೇಂದ್ರ

Published:
Updated:
Prajavani

ದಾವಣಗೆರೆ: ‘ಜಿಲ್ಲೆಯಲ್ಲಿ ಜನರ ಬಳಿಗೇ ಆಡಳಿತವನ್ನು ತೆಗೆದುಕೊಂಡು ಹೋಗಲು ಬಯಸಿದ್ದೇನೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ತಹಶೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಚೇರಿಗಳಲ್ಲಿ ನಾಗರಿಕ ಮಿತ್ರ ಕೇಂದ್ರ ಆರಂಭಿಸಲು ಉದ್ದೇಶಿಸಿದ್ದೇನೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

‘ರೋಟರಿಯಂತಹ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಸಂಸ್ಥೆಗಳ 8-10 ಕಾರ್ಯಕರ್ತರಿಗೆ ಸರ್ಕಾರಿ ಯೋಜನೆಗಳ ಬಗ್ಗೆ ತರಬೇತಿ ನೀಡಲಾಗುವುದು. ಇವರು ನಾಗರಿಕ ಮಿತ್ರ ಕೇಂದ್ರಗಳಲ್ಲಿ ಜನರಿಂದ ಅರ್ಜಿ ಸ್ವೀಕರಿಸಿ ಫಲಾನುಭವಿಗಳಿಗೆ ನೇರವಾಗಿ ಸೌಲಭ್ಯ ತಲುಪಿಸಲು ನೆರವಾಗಲಿದ್ದಾರೆ. ಧಾರವಾಡದಲ್ಲಿ ನಾನು ಉಪವಿಭಾಗಾಧಿಕಾರಿ ಆಗಿದ್ದಾಗ ಮಾಡಿದ್ದ ಈ ವ್ಯವಸ್ಥೆಯಿಂದ ನಾಗರಿಕರಿಗೆ ಅನುಕೂಲವಾಗಿತ್ತು. ಇದನ್ನು ಇಲ್ಲಿಯೂ ಆರಂಭಿಸಲು ಉದ್ದೇಶಿಸಿದ್ದೇನೆ’ ಎಂದು ಜಿಲ್ಲಾಧಿಕಾರಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಮ್ಮ ವಿಷನ್‌ ಹಂಚಿಕೊಂಡರು.

‘ಸರ್ವೆ, ಖಾತೆ, ಪಿಂಚಣಿ ವಿಚಾರದಲ್ಲಿ ವಿಶೇಷವಾಗಿ ರೈತರಿಗೆ ಕಿರುಕುಳ ಆಗುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಸೆ. 1ರಿಂದಲೇ ಗ್ರಾಮ ಲೆಕ್ಕಾಧಿಕಾರಿಗಳಿಂದ ಪ್ರತಿ ಗ್ರಾಮದಲ್ಲೂ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲಾಗುತ್ತಿದೆ. ಸರ್ಕಾರಿ ಯೋಜನೆಯಿಂದ ವಂಚಿತ ಫಲಾನುಭವಿಗಳಿಂದ ಅರ್ಜಿ ಪಡೆದು, ಗ್ರಾಮ ಲೆಕ್ಕಾಧಿಕಾರಿಗಳೇ ಮಂಜೂರಾತಿ ಪತ್ರವನ್ನು ಮನೆಗೆ ತಲುಪಿಸುವಂತೆ ಆದೇಶಿಸಿದ್ದೇನೆ. ಮುಂದಿನ ಮೂರು ತಿಂಗಳಲ್ಲಿ ಎಲ್ಲಾ ಅರ್ಹ ಫಲಾನುಭವಿಗಳಿಗೂ ಸರ್ಕಾರಿ ಸೌಲಭ್ಯ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

‘ಜನಪ್ರತಿನಿಧಿಗಳ ಸಹಕಾರ ಪಡೆದು ಮೂಲಸೌಲಭ್ಯಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ನಗರದ ಎಸ್‌ಟಿಪಿಗೆ ಒಳಚರಂಡಿ ನೀರು ಬಂದು ಸೇರುವ ಸಂಪರ್ಕ ಜಾಲವನ್ನು ಸರಿಪಡಿಸಲಾಗುವುದು. ಮಳೆನೀರು ಚರಂಡಿಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲಾಗುವುದು’ ಎಂದು ಭರವಸೆ ನೀಡಿದರು.

ವಿಮಾನನಿಲ್ದಾಣ ಬೇಡಿಕೆ ಪರಿಶೀಲನೆ

‘ದಾವಣಗೆರೆಯಲ್ಲಿ ವಿಮಾನನಿಲ್ದಾಣ ನಿರ್ಮಿಸಬೇಕು ಎಂಬ ಜನಪ್ರತಿನಿಧಿಗಳ ಆಶಯಕ್ಕೆ ಪೂರಕವಾಗಿ ಇದಕ್ಕೆ ಅಗತ್ಯವಿರುವ 500 ಎಕರೆ ಭೂಮಿಯನ್ನು ಹುಡುಕುವಂತೆ ಉಪವಿಭಾಗಾಧಿಕಾರಿಗೆ ಸೂಚಿಸಿದ್ದೇನೆ. ಜಾಗ ಲಭ್ಯವಾದ ಬಳಿಕ ಈ ಬಗ್ಗೆ ಮುಖ್ಯಮಂತ್ರಿ ಗಮನಕ್ಕೂ ತರಲಾಗುವುದು. ರಸ್ತೆ ಮಾರ್ಗದಲ್ಲಿ ಮೂರು ಗಂಟೆಗಳಲ್ಲಿ ಕ್ರಮಿಸಬಹುದಾದಷ್ಟು ದೂರದ ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಈಗಾಗಲೇ ವಿಮಾನನಿಲ್ದಾಣ ಇದೆ. ಹೀಗಾಗಿ ದಾವಣಗೆರೆಯಲ್ಲಿ ನಿರ್ಮಿಸುವುದು ಕಾರ್ಯಸಾಧುವಾಗಲಿದೆಯೇ ಎಂಬುದನ್ನೂ ಪರಿಶೀಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಋಣಮುಕ್ತ: 500 ಅರ್ಜಿ ಸಲ್ಲಿಕೆ

‘ಋಣಮುಕ್ತ ಕಾಯ್ದೆಯಡಿ ಇದುವರೆಗೆ ಸುಮಾರು 500 ಅರ್ಜಿಗಳು ಸಲ್ಲಿಕೆಯಾಗಿವೆ. ಅಕ್ಟೋಬರ್‌ 20ರವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಖಾಸಗಿ ಲೇವಾದೇವಿದಾರರ ಬಳಿ ಜಮೀನು ಹಾಗೂ ಚಿನ್ನಾಭರಣಗಳನ್ನು ಅಡವಿಟ್ಟು ಸಾಲ ಪಡೆದವರು ಈ ಕಾಯ್ದೆಯಡಿ ಸೌಲಭ್ಯ ಪಡೆಯಬಹುದಾಗಿದೆ. ಈಗಾಗಲೇ ಅರ್ಜಿಗಳನ್ನು ಪರಿಶೀಲಿಸಲು ಆರಂಭಿಸಿದ್ದೇವೆ. ಒಂದು ವರ್ಷದೊಳಗೆ ಅರ್ಹರನ್ನು ಋಣಮುಕ್ತರನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಉಪವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮಾಹಿತಿ ನೀಡಿದರು.

Post Comments (+)