ಮಂಗಳವಾರ, ನವೆಂಬರ್ 30, 2021
22 °C
ಸುರೆಹೊನ್ನೆಯಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ

ರಾಜ್ಯ ಸರ್ಕಾರವಲ್ಲ, ಜನರು ಶ್ರೀಮಂತರಾಗಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಹೊನ್ನೆ/ಕುಂದೂರು (ನ್ಯಾಮತಿ/ಹೊನ್ನಾಳಿ): ಸರ್ಕಾರ ಶ್ರೀಮಂತ ವಾಗಬೇಕು ಎಂಬ ಪರಿಕಲ್ಪನೆ ಇಲ್ಲಿವರೆಗೆ ಇತ್ತು. ಈ ಪರಿಕಲ್ಪನೆಯನ್ನೇ ನಾವು ಬದಲಾಯಿಸುತ್ತಿದ್ದೇವೆ. ಸರ್ಕಾರವಲ್ಲ. ರಾಜ್ಯ ಶ್ರೀಮಂತವಾಗಬೇಕು. ಅಂದರೆ ರಾಜ್ಯದ ಜನರು ಶ್ರೀಮಂತರಾಗಬೇಕು. ಅದಕ್ಕೆ ಬೇಕಾದ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನ್ಯಾಮತಿ ತಾಲ್ಲೂಕಿನ ಸುರಹೊನ್ನೆ ಯಲ್ಲಿ ಮತ್ತು ಹೊನ್ನಾಳಿ ತಾಲ್ಲೂಕಿನ ಕುಂದೂರಿನಲ್ಲಿ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

‘ಜನರು ಶ್ರೀಮಂತರಾದರೆ ಸರ್ಕಾರಕ್ಕೆ ತನ್ನಿಂತಾನೆ ತೆರಿಗೆ ರೂಪ ದಲ್ಲಿ ಹಣ ಹರಿದು ಬರುತ್ತದೆ. ಅದಕ್ಕಾಗಿ ಉದ್ಯಮಗಳನ್ನು ಮಾತ್ರ ಪ್ರೋತ್ಸಾಹಿಸುವುದಲ್ಲ. ಉದ್ಯೋಗ ವನ್ನೂ ಪ್ರೋತ್ಸಾಹಿಸಬೇಕು. ಒಂದು ಮನೆಯಲ್ಲಿ ಒಬ್ಬ ನೌಕರ ಇದ್ದರೆ ಆ ಮನೆ ಟೇರೆಸ್‌ ಆಗುತ್ತದೆ. ನೌಕರನಿಲ್ಲದ ಮನೆ ಹೆಂಚಿನಲ್ಲೇ ಉಳಿಯುತ್ತದೆ. ಇದು ಬದಲಾಗಬೇಕು ಎಂಬ ಕಾರಣಕ್ಕೇ ಹಳೆಯ ಎಲ್ಲ ಜಾಡ್ಯಗಳನ್ನು ತೊರೆದು ಬದಲಾಣೆಯ ಪರ್ವವನ್ನು, ಅಭಿವೃದ್ಧಿಯ ಪರ್ವವನ್ನು ಆರಂಭಿಸಿದ್ದೇವೆ’ ಎಂದು ವಿವರಿಸಿದರು.

ಅಭಿವೃದ್ಧಿಯ ಸುತ್ತ ಜನರು ಓಡಾಡುತ್ತಿದ್ದಾರೆ. ಅಂದರೆ ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ್‌ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಜನರ ಸುತ್ತ ಅಭಿವೃದ್ಧಿಯಾಗಬೇಕು. ಜನರ ಅಲೆದಾಟ ನಿಂತಾಗ ಸ್ಥಿರವಾದ ಬದುಕು ಕಟ್ಟಿಕೊಳ್ಳಲು ಸಾಧ್ಯ. ಜತೆಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು. ಈ ಎಲ್ಲದರ ಭಾಗವಾಗಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಆದರ್ಶ ಗ್ರಾಮ ಪಂಚಾಯಿತಿ ಎಂಬ ಯೋಜನೆ ಮಾಡಲಾಗಿದೆ. ಪ್ರತಿ ವಿಧಾನ ಸಭಾ ಕ್ಷೇತ್ರ 8 ಗ್ರಾಮ ಪಂಚಾಯಿತಿಗಳನ್ನು ಈ ರೀತಿ ಆಯ್ಕೆ ಮಾಡಿಕೊಂಡು ಅಮೃತ್‌ ಯೋಜನೆಯಡಿ ₹ 2 ಕೋಟಿ ಅನುದಾನ ಒದಗಿಸಲಾಗುತ್ತದೆ. ಮನೆ, ನಿವೇಶನ ಇಲ್ಲದವರಿಗೆ ಅವೆಲ್ಲವನ್ನು ಒದಗಿಸಿ ಗುಡಿಸಲು ಮುಕ್ತಮಾಡಬೇಕು. ರಸ್ತೆ, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಎಲ್ಲ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಿದ ಗ್ರಾಮ ಪಂಚಾಯಿತಿಗೆ ಬೋನಸ್‌ ಆಗಿ ಮತ್ತೆ ₹ 25 ಲಕ್ಷ ಅನುದಾನ ನೀಡಲಾಗುವುದು’ ಎಂದು ಹೇಳಿದರು.

750 ಸ್ತ್ರಿಶಕ್ತಿ ಸಂಘಗಳಿಗೆ ಉದ್ದಿಮೆ ಮಾಡಲು ₹ ತಲಾ 1 ಲಕ್ಷ ಸಾಲ ನೀಡಲಾಗುವುದು. ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ವಿದ್ಯಾರ್ಥಿಗಳು ಸ್ಪರ್ಧೆ ಮಾಡಬೇಕು ಎಂಬ ಪರಿಕಲ್ಪನೆ ಇಟ್ಟುಕೊಂಡು ಹೊಸ ಶಿಕ್ಷಣ ನೀತಿ ಜಾರಿ ಮಾಡಲಾಗುತ್ತಿದೆ ಎಂದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರ ಬೇಡಿಕೆಯ ಮೇರೆಗೆ ನ್ಯಾಮತಿಗೆ ಮಿನಿ ವಿಧಾನಸೌಧವನ್ನು ಮಂಜೂರು ಮಾಡುವುದಾಗಿ ಘೋಷಿಸಿದರು. ಕುಂದೂರಿನಲ್ಲಿ 120 ವರ್ಷಗಳ ಇತಿಹಾಸ ಇರುವ ಶಾಲೆಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಿನ ಬಜೆಟಲ್ಲಿ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.

‘ಯೋಜನೆ ಘೋಷಿಸಿ ಮನೆ ಕಟ್ಟಿಸಿಕೊಡದ ಹಿಂದಿನ ಸರ್ಕಾರ’

ಬಿಜೆಪಿ ಸರ್ಕಾರ ಒಂದೇ ಒಂದು ಮನೆ ಕಟ್ಟಿಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸುತ್ತಿದ್ದಾರೆ. ಆದರೆ ಅವರು ಮುಖ್ಯಮಂತ್ರಿ ಆಗಿದ್ದಾಗ 9 ಲಕ್ಷ ಮನೆ ಕಟ್ಟಿಕೊಡುವುದಾಗಿ ಘೋಷಣೆ ಮಾಡಿದ್ದರು. ಆದರೆ, ಯಾವುದೇ ಅನುದಾನ ಮೀಸಲಿಟ್ಟಿರಲಿಲ್ಲ. ಮೂರು ವರ್ಷ ಆ ಯೋಜನೆಗೆ ಹಣ ಒದಗಿಸುವುದೇ ನಮಗೆ ಕೆಲಸವಾಯಿತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.

‘ಮುಂದಿನ ಒಂದೂವರೆ ವರ್ಷಗಳ ಅವಧಿಯಲ್ಲಿ 4 ಲಕ್ಷ ಮಂದಿಗೆ ಮನೆ ಕಟ್ಟಿಕೊಡಲಿದ್ದೇವೆ. ಇದಲ್ಲದೇ ಶಹರಗಳಲ್ಲಿ (ಪಟ್ಟಣಗಳಲ್ಲಿ) 1 ಲಕ್ಷ ಮನೆ ನಿರ್ಮಿಸಿ ಕೊಡಲಿದ್ದೇವೆ’ ಎಂದು ತಿಳಿಸಿದರು.

ಸರ್ಕಾರಿ ಕಾರ್ಯಕ್ರಮದಲ್ಲಿ ಪಕ್ಷದ ಅಧ್ಯಕ್ಷರು !

ಕಂದಾಯ ಇಲಾಖೆಯಿಂದ ಹಮ್ಮಿಕೊಂಡಿದ್ದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ ಭಾಗವಹಿಸಿ ಅಚ್ಚರಿ ಮೂಡಿಸಿದರು.

ಕಾಣದ ಉಸ್ತುವಾರಿ ಸಚಿವರು: ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರ ಗೈರು ಎದ್ದು ಕಾಣುತ್ತಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು