ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿ ಅಭ್ಯರ್ಥಿಯತ್ತ ಜನರ ಒಲವು: ಶಾಮನೂರು ಬಸವರಾಜ್‌

Last Updated 30 ಏಪ್ರಿಲ್ 2019, 15:38 IST
ಅಕ್ಷರ ಗಾತ್ರ

ದಾವಣಗೆರೆ: ‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಬಿರುಸಿನಿಂದ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಳ್ಳಲಾಗುತ್ತಿದೆ. ಮೈತ್ರಿ ಪಕ್ಷಗಳ ಅಭ್ಯರ್ಥಿ ಎಚ್‌.ಬಿ. ಮಂಜಪ್ಪ ಪರ ಜನ ಒಲವು ತೋರಿಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ನ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಶಾಮನೂರು ಟಿ. ಬಸವರಾಜ್‌ ಹೇಳಿದರು.

‘ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರು ಉತ್ಸಾಹದಿಂದ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಬಾರಿಯ ಚುನಾವಣೆ ಜನ ಬಲ ಮತ್ತು ಹಣ ಬಲದ ನಡುವೆ ನಡೆಯುತ್ತಿದೆ. ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಕೆಲಸ ಮಾಡಿದ ಹಿಂದುಳಿದ ವರ್ಗದ ಸಾಮಾನ್ಯ ವ್ಯಕ್ತಿಗೆ ಪಕ್ಷದ ಟಿಕೆಟ್‌ ಸಿಕ್ಕಿದೆ. ಅಭಿವೃದ್ಧಿ ಕೆಲಸಗಳನ್ನು ಮಂಜಪ್ಪ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ಜನರಲ್ಲಿ ಮೂಡಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಲೆ ಎದ್ದಿದೆ’ ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸಂಸದ ಜಿ.ಎಂ. ಸಿದ್ದೇಶ್ವರ ಅವರು ಐದು ವರ್ಷಗಳಲ್ಲಿ ₹ 10 ಸಾವಿರ ಕೋಟಿ ಅನುದಾನವನ್ನು ತಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಈ ಅನುದಾನ ಅವರು ಮಲಗಿಕೊಂಡಿದ್ದರೂ ವಿವಿಧ ಇಲಾಖೆಗಳಡಿ ಬರುತ್ತಿದ್ದವು. ತಮ್ಮ ಸ್ವಂತ ಪ್ರಯತ್ನದಿಂದ ಹೊಸದಾಗಿ ಏನು ಅನುದಾನ ತಂದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ. ಅವರಂತೆ ಮಾಹಿತಿ ನೀಡಿದರೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ ₹ 40 ಸಾವಿರ ಕೋಟಿ ಅನುದಾನ ಜಿಲ್ಲೆಗೆ ಬಂದಿದೆ’ ಎಂದ ಅವರು, ಬೀರೂರು–ಸಮ್ಮಸಗಿ ರಸ್ತೆ, ಜಲಸಿರಿ ಯೋಜನೆ, ಆಶ್ರಯ ಮನೆಗಳ ನಿರ್ಮಾಣ, ರೈಲ್ವೆ ಮೇಲ್ಸೇತುವೆ ನಿರ್ಮಾಣ, ಭೂಗತ ಕೇಬಲ್‌ ಅಳವಡಿಕೆ, ಗಾಜಿನ ಮನೆ ನಿರ್ಮಾಣ, 22 ಕೆರೆಗಳ ನಿರ್ಮಾಣ ಸೇರಿ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ಪ್ಟಟಿ ನೀಡಿದರು.

ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್‌, ‘ಸಿದ್ದೇಶ್ವರ ಅವರು ಕಾಂಗ್ರೆಸ್‌ನವರು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಅವರ ಬಗ್ಗೆ ಪ್ರಚಾರ ಮಾಡಲು ಯಾವುದೇ ಸಾಧನೆಯೇ ಇಲ್ಲವಾಗಿದೆ. 25 ವರ್ಷಗಳಿಂದ ದಾವಣಗೆರೆ ಲೋಕಸಭಾ ಕ್ಷೇತ್ರ ಅಭಿವೃದ್ಧಿ ಕಂಡಿಲ್ಲ. ಸ್ಥಳೀಯ ಆಡಳಿತ ಹಾಗೂ ಶಾಸಕರು ಸಹಕಾರ ನೀಡಿಲ್ಲ ಎಂದು ಮಕ್ಕಳಂತೆ ದೂರುವುದನ್ನು ಸಿದ್ದೇಶ್ವರ ಬಿಡಬೇಕು’ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ಆರ್‌.ಎಚ್‌. ನಾಗಭೂಷಣ, ಮುಖಂಡರಾದ ಬಿ.ಎಲ್‌. ಜಗದೀಶ್‌, ಜಯಪ್ರಕಾಶ್‌, ಎನ್‌. ಚಂದ್ರು, ಲಿಯಾಕತ್‌ ಅಲಿ, ಎಚ್‌. ಹರೀಶ್‌ ಇದ್ದರು.

‘ಚುನಾವಣಾ ಆಯೋಗ ಬಿಜೆಪಿ ಅಂಗ ಸಂಸ್ಥೆಯಾಗದಿರಲಿ’

‘ಸೈನಿಕರ ಹೆಸರನ್ನು ಪ್ರಚಾರಕ್ಕೆ ಬಳಸಿಕೊಳ್ಳಬಾರದು ಎಂದು ಸೂಚನೆ ನೀಡಿದ್ದರೂ ಪ್ರಧಾನಿ ನರೇಂದ್ರ ಮೋದಿ ಮತ್ತೆ ಮತ್ತೆ ಅದೇ ವಿಷಯವನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಮೋದಿಯನ್ನು ನಿಯಂತ್ರಿಸದಿದ್ದರೆ ಚುನಾವಣಾ ಆಯೋಗವೂ ಬಿಜೆಪಿಯ ಅಂಗಸಂಸ್ಥೆಯಾಗಲಿದೆ’ ಎಂದು ಬಸವರಾಜ್‌ ಅಭಿಪ್ರಾಯಪಟ್ಟರು.

‘ಸಿಬಿಐ ಹಾಗೂ ಆದಾಯ ತೆರಿಗೆ ಇಲಾಖೆ ಮೋದಿ ಅವರ ಆಣತಿಯಂತೆ ನಡೆದುಕೊಳ್ಳುವ ಮೂಲಕ ವಿಶ್ವ ಹಿಂದೂ ಪರಿಷತ್‌, ಬಜರಂಗದಳ, ಆರ್‌.ಎಸ್‌.ಎಸ್‌ನಂತೆ ಬಿಜೆಪಿಯ ಅಂಗಸಂಸ್ಥೆಗಳಾಗಿವೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT