ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶ್ರಮ, ಛಲದಿಂದ ಸಾಧನೆ ಸಾಧ್ಯ

ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ನ್ಯಾಯಾಧೀಶ ಸಾಬಪ್ಪ
Last Updated 4 ಡಿಸೆಂಬರ್ 2020, 6:35 IST
ಅಕ್ಷರ ಗಾತ್ರ

ದಾವಣಗೆರೆ: ಸಾಧಿಸುವ ಛಲ ಮತ್ತು ಅದಕ್ಕೆ ಸರಿಯಾದ ಪರಿಶ್ರಮ ಇದ್ದರೆ ಅಂಗವಿಕಲರೂ ಮಹಾನ್‌ ಸಾಧಕರಾಗಬಹುದು. ಅಂಗವೈಕಲ್ಯ ದೇಹಕ್ಕೇ ಹೊರತು ಮನಸ್ಸಿಗಲ್ಲ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಾಬ‍ಪ್ಪ ಹೇಳಿದರು.

ದೇವರಾಜ ಅರಸು ಬಡಾವಣೆಯ ಅಂಧ ಹೆಣ್ಣುಮಕ್ಕಳ ಸರ್ಕಾರಿ ಪಾಠಶಾಲೆ ಆವರಣದಲ್ಲಿ ಗುರುವಾರ ನಡೆದ ವಿಶ್ವ ಅಂಗವಿಕಲರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಂಗವಿಕಲರು ವಿಶಿಷ್ಟ ಶಕ್ತಿ, ಜ್ಞಾನ ಹಾಗೂ ಸಾಮರ್ಥ್ಯ ಹೊಂದಿರುತ್ತಾರೆ. ಮಾನಸಿಕವಾಗಿ ಸದೃಢರಾಗಿ ಇದ್ದಾಗ ಹಿಂಜರಿಕೆ ಇರುವುದಿಲ್ಲ. ನಿಮ್ಮ ಶಕ್ತಿ, ಸಾಮರ್ಥ್ಯ, ಪ್ರತಿಭೆ ಯಾರಿಗೂ ಕಡಿಮೆ ಇರುವುದಿಲ್ಲ ಎಂದು ಶ್ಲಾಘಿಸಿದರು.

ಸ್ಫೂರ್ತಿ ಸಂಸ್ಥೆಯ ರೂಪ್ಲಾನಾಯ್ಕ ಮಾತನಾಡಿ, ‘ಸಂಸದರು, ಶಾಸಕರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಡಿ ಅಂಗವಿಕಲರಿಗೆ ವಾಹನಗಳನ್ನು ವಿತರಿಸಲು ಮಾತ್ರ ಅನುದಾನ ನೀಡಲಾಗುತ್ತಿದೆ. ಅದರ ಜತೆಗೆ ಪುನರ್ವಸತಿ, ಶಿಕ್ಷಣ ನೀಡುವುದಕ್ಕೂ ವಿನಿಯೋಗಿಸಬೇಕು. ಅಂಗವಿಕಲರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರೋತ್ಸಾಹ ದೊರೆಯಬೇಕು. ಅಂಗವಿಕಲ ವಿದ್ಯಾರ್ಥಿಗಳಿಗೆ ₹ 10 ಸಾವಿರದಿಂದ ₹ 2.5 ಲಕ್ಷ ವರೆಗೆ ವಿದ್ಯಾರ್ಥಿವೇತನ ಪಡೆಯಲು ಅವಕಾಶವಿದೆ. ಮಾಹಿತಿಯ ಕೊರತೆಯಿಂದ ಜಿಲ್ಲೆಯಲ್ಲಿ ಪ್ರತಿ ವರ್ಷ ನಾಲ್ಕೈದು ಮಕ್ಕಳಷ್ಟೇ ಈ ಸೌಲಭ್ಯ ಪಡೆಯುತ್ತಿದ್ದಾರೆ’ ಎಂದು ವಿಷಾದಿಸಿದರು.

ಅಂಗವಿಕಲರ ಜಿಲ್ಲಾ ಕಲ್ಯಾಣಾಧಿಕಾರಿ ಜಿ.ಎಸ್. ಶಶಿಧರ್, ‘ಅಂಗವಿಕಲರಿಗೆ ದೇಶದಾದ್ಯಂತ ಯುನಿಕ್ ಐಡಿ ಕಾರ್ಡ್ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಅಂಗವಿಕಲ ವೇತನ ಪಡೆಯುವವರ ಸಂಖ್ಯೆ 22,933 ಇದೆ. ಆದರೆ ಯುನಿಕ್‌ ಐಡಿ ಕಾರ್ಡ್‌ ಅನ್ನು 9,323 ಮಂದಿ ಮಾತ್ರ ಪಡೆದಿದ್ದಾರೆ. ಮುಂದೆ ಎಲ್ಲ ಯೋಜನೆಗಳಿಗೆ ಈ ಐಡಿ ಕಾರ್ಡ್‌ ಅಗತ್ಯ. ಹಾಗಾಗಿ ಅರ್ಹ ಎಲ್ಲರೂ ಪಡೆಯಬೇಕು. ಕೆಎಸ್‌ಆರ್‌ಟಿಸಿ ಬಸ್‌ ರಿಯಾಯಿತಿ ಪಾಸ್‌ಗಾಗಿ ಈವರೆಗೆ ಇಲಾಖೆ ಮೂಲಕ ಅರ್ಜಿ ಸಲ್ಲಿಸಲಾಗುತ್ತಿತ್ತು. ಇನ್ನು ಮುಂದೆ ಕೆಎಸ್‌ಆರ್‌ಟಿಸಿಯವರೇ ನೀಡುತ್ತಾರೆ. ನೇರವಾಗಿ ಅಲ್ಲಿಯೇ ಅರ್ಜಿ ಸಲ್ಲಿಸಬೇಕು’ ಎಂದು ಮಾಹಿತಿ ನೀಡಿದರು.

ಅಧೀಕ್ಷಕ ಕೆ.ಕೆ. ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್. ವಿಜಯಕುಮಾರ್, ವೀರಯ್ಯ ಸ್ವಾಮಿ ಅವರೂ ಇದ್ದರು.

ಕೋವಿಡ್ ಸಂದರ್ಭದಲ್ಲಿ ವಿಶಿಷ್ಟ ಸೇವೆ ನೀಡಿದ ಅಂಗವಿಕಲ ಕೋವಿಡ್ ವಾರಿಯರ್‌ಗಳನ್ನು, ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಂಗವಿಕಲರನ್ನು ಸನ್ಮಾನಿಸಲಾಯಿತು. ಅಂಗವಿಕಲರನ್ನು ಮದುವೆಯಾದ ಸಾಮಾನ್ಯರಿಗೆ ನೀಡುವ ₹ 50 ಸಾವಿರ ಪ್ರೋತ್ಸಾಹಧನದ ಠೇವಣಿ ಬಾಂಡ್‌ಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

‘ಸೌಲಭ್ಯ ವಂಚಿತರು ಇರಬಾರದು’

‘ನಾನು ತಹಶೀಲ್ದಾರ್‌ ಆಗಿ ಕೆಲಸ ಮಾಡಿದ ಸವಣೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ಸೇರಿದಂತೆ ಎಲ್ಲ ತಾಲ್ಲೂಕುಗಳಲ್ಲಿ ಸೌಲಭ್ಯ ವಂಚಿತರು ಇರಬಾರದು ಎಂಬಂತೆ ಕಾಳಜಿಯಿಂದ ಎಲ್ಲ ಅಂಗವಿಕಲರಿಗೆ ಸೌಲಭ್ಯ ಒದಗಿಸಿದ್ದೆ. ಎಲ್ಲೇ ಹೋಗುವಾಗ ಅಂಗವಿಕಲರು ಕಂಡರೆ ಅವರಿಗೆ ಸರ್ಕಾರಿ ಸೌಲಭ್ಯ ಸಿಕ್ಕಿದೆಯೇ ಇಲ್ಲವೇ ಎಂದು ವಿಚಾರಿಸಿ, ಸಿಕ್ಕಿಲ್ಲ ಅಂದ್ರೆ ನನ್ನ ಜೀಪಲ್ಲೇ ಕರೆದುಕೊಂಡು ಹೋಗಿ ಅರ್ಜಿ ಬರೆಸಿಕೊಂಡು ಸೌಲಭ್ಯ ಸಿಗುವಂತೆ ಮಾಡಿದ್ದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ನಿಯಮಾವಳಿಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಅಂಗವಿಕಲರ ಅರ್ಜಿಗಳನ್ನು ತಿರಸ್ಕರಿಸುವ ಕೆಲಸಗಳು ನಡೆಯುತ್ತವೆ. ಹಾಗಾಗ ಬಾರದು. ಅರ್ಹರಿದ್ದರೆ ಮಾನವೀಯ ದೃಷ್ಟಿಯಿಂದ ಸ್ವಲ್ಪ ಸಡಿಲಿಕೆ ಮಾಡಿಕೊಂಡು ಸೌಲಭ್ಯ ಒದಗಿಸಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT