ದಾವಣಗೆರೆ: ಪಾರ್ಶ್ವವಾಯು ಬಾಧಿಸಿದ ಮೊದಲ ನಾಲ್ಕೂವರೆ ಗಂಟೆ ರೋಗಿಯ ಪಾಲಿಗೆ ‘ಗೋಲ್ಡನ್’ ಕಾಲ. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಧಾವಿಸಿ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ರೋಗಿ ತ್ವರಿತವಾಗಿ ಗುಣಮುಖರಾಗಲು ಸಾಧ್ಯವಿದೆ. ರೋಗಲಕ್ಷಣ ಕಾಣಿಸಿಕೊಂಡ ತಕ್ಷಣ ಸಮಯ ವ್ಯರ್ಥ ಮಾಡಬೇಡಿ…

ದಾವಣಗೆರೆಯ ಎಸ್.ಎಸ್.ನಾರಾಯಣ ಆಸ್ಪತ್ರೆಯ ಮಿದುಳು ಮತ್ತು ನರರೋಗ ವಿಭಾಗದ ಡಾ.ವೀರಣ್ಣ ಮೋಹನ್ ಗಡಾದ ಹಾಗೂ ಡಾ.ಗುರುಪ್ರಸಾದ್ ಎಸ್.ಪೂಜಾರ್ ಅವರ ಕಿವಿಮಾತು ಇದು.

ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ ‘ಪ್ರಜಾವಾಣಿ’ ನಡೆಸಿದ ‘ಫೋನ್ ಇನ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೂರವಾಣಿ ಕರೆ ಮಾಡಿದ ರೋಗಿಗಳು ಹಾಗೂ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು. ರೋಗಿಯ ಆರೈಕೆ, ಚಿಕಿತ್ಸಾ ವಿಧಾನ, ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ತಿಳಿವಳಿಕೆ ನೀಡಿದರು. ರೋಗ ಲಕ್ಷಣಗಳನ್ನು ವಿವರಿಸುತ್ತ, ಜನರಲ್ಲಿ ಆಳವಾಗಿ ಬೇರೂರಿರುವ ತಪ್ಪು ಕಲ್ಪನೆಗಳನ್ನು ನಿವಾರಿಸುವ ಪ್ರಯತ್ನ ಮಾಡಿದರು.

‘ಪಾರ್ಶ್ವವಾಯು ಪೀಡಿತರಿಗೆ ಆಸ್ಪತ್ರೆಯ ಹೊರತಾಗಿ ಪ್ರಥಮ ಚಿಕಿತ್ಸೆ ಇಲ್ಲ. ರೋಗಲಕ್ಷಣ ದೃಢಪಟ್ಟ ಬಳಿಕ ತ್ವರಿತವಾಗಿ ಆಸ್ಪತ್ರೆಗೆ ಬರುವುದೊಂದೇ ಪರಿಹಾರ. ಆರಂಭದ ನಾಲ್ಕೂವರೆ ಗಂಟೆಯ ಒಳಗೆ ಆಸ್ಪತ್ರೆ ತಲುಪಿದರೆ ಚುಚ್ಚುಮದ್ದು ನೀಡಿ ರಕ್ತಸಂಚಲನಕ್ಕೆ ಅನುವು ಮಾಡಿಕೊಡುವ ಚಿಕಿತ್ಸೆ ನೀಡಲಾಗುತ್ತದೆ. 6 ಗಂಟೆಯವರೆಗೂ ಈ ಕಾಲಾವಕಾಶ ಇದೆಯಾದರೂ ನಾಲ್ಕೂವರೆ ಗಂಟೆ ಅಮೂಲ್ಯ ಸಮಯ’ ಎಂದು ಡಾ.ವೀರಣ್ಣ ಮೋಹನ್ ಗಡಾದ ವಿವರಿಸಿದರು.

ಪಾರ್ಶ್ವವಾಯು ಮಿದುಳು ಸಂಬಂಧಿ ರೋಗ

ಪಾರ್ಶ್ವವಾಯು ಒಂದು ಮಿದುಳು ಸಂಬಂಧಿ ಕಾಯಿಲೆ. ರಕ್ತ ಸಂಚಾರದಲ್ಲಿ ಏರುಪೇರು ಉಂಟಾದರೆ ಮಿದುಳಿನ ನಿರ್ದಿಷ್ಟ ಭಾಗದ ಕಾರ್ಯನಿರ್ವಹಣೆ ಸ್ಥಗಿತಗೊಳ್ಳುತ್ತದೆ. ಮಿದುಳಿನ ರಕ್ತನಾಳಗಳು ಹೆಪ್ಪುಗಟ್ಟಿ ಅಥವಾ ಒಡೆದು ರಕ್ತಸ್ರಾವ ಉಂಟಾಗಿ ಈ ಕಾಯಿಲೆಗೆ ತುತ್ತಾಗುತ್ತಾರೆ.

ಅನಿಯಂತ್ರಿತ ರಕ್ತದೊತ್ತಡ, ಮಧುಮೇಹ, ಬೊಜ್ಜು, ಧೂಮಪಾನ, ಮಧ್ಯಪಾನ, ತಂಬಾಕು ಸೇವನೆ ಹಾಗೂ ಅನುವಂಶೀಯ ಕಾರಣಗಳಿಂದ ಈ ಕಾಯಿಲೆ ಬರುತ್ತದೆ. ಸಾಂಕ್ರಾಮಿಕವಲ್ಲದ ಈ ಕಾಯಿಲೆ ಮಾರಣಾಂತಿಕವಾಗಿದ್ದು, ಶಾಶ್ವತ ಅಂಗವೈಕಲ್ಯ ಉಂಟು ಮಾಡುತ್ತದೆ.

‘ರಕ್ತದೊತ್ತಡ ಸಮಸ್ಯೆಯಿಂದ ಬಳಲುವವರು ನಿಯಮಿತವಾಗಿ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಬೇಕು. ವೈದ್ಯರ ಸಲಹೆ ಇಲ್ಲದೇ ಔಷಧ ಸೇವನೆಯನ್ನು ಸ್ಥಗಿತಗೊಳಿಸಬಾರದು’ ಎನ್ನುತ್ತಾರೆ ವೈದ್ಯ ಡಾ.ವೀರಣ್ಣ ಮೋಹನ್ ಗಡಾದ.

ಕೊಬ್ಬರಿ ಎಣ್ಣೆ ಕುಡಿಸಬಾರದು

ಪಾರ್ಶ್ವವಾಯು ಪೀಡಿತರಿಗೆ ಕೊಬ್ಬರಿ ಎಣ್ಣೆ ಕುಡಿಸುವ ತಪ್ಪು ರೂಢಿಯೊಂದು ಮಧ್ಯ ಕರ್ನಾಟಕ ಭಾಗದಲ್ಲಿದೆ. ಇದರಿಂದ ಪಾರ್ಶ್ವವಾಯು ಗುಣಮುಖವಾಗುವ ಬದಲು ಆರೋಗ್ಯ ಸಮಸ್ಯೆಗಳನ್ನು ಸಂಕೀರ್ಣಗೊಳಿಸುತ್ತದೆ. ನ್ಯುಮೋನಿಯಾದಂತಹ ಕಾಯಿಲೆಗೆ ಕಾರಣವಾಗುತ್ತದೆ. ಪಾರ್ಶ್ವವಾಯು ಪೀಡಿತರಿಗೆ ಕೊಬ್ಬರಿ ಎಣ್ಣೆ ಕುಡಿಸಬಾರದು ಎನ್ನುತ್ತಾರೆ ವೈದ್ಯರು.

‘ಕೊಬ್ಬರಿ ಎಣ್ಣೆ ಕುಡಿಸುವುದರಿಂದ ಪಾರ್ಶ್ವವಾಯು ಗುಣಮುಖವಾಗುತ್ತದೆ ಎಂಬ ತಪ್ಪು ಕಲ್ಪನೆ ಗ್ರಾಮೀಣ ಪ್ರದೇಶದಲ್ಲಿ ಬಲವಾಗಿದೆ. ರೋಗಿಗೆ ಇದನ್ನು ಒತ್ತಾಯಪೂರ್ವಕವಾಗಿ ಕುಡಿಸಲಾಗುತ್ತಿದೆ. ಅನ್ನನಾಳದ ಮೂಲಕ ಇಳಿಯುವ ಬದಲು ಶ್ವಾಸಕೋಶಕ್ಕೆ ಹೋಗುವ ಸಾಧ್ಯತೆ ಹೆಚ್ಚು. ಇಂತಹ ಸಂದರ್ಭದಲ್ಲಿ ಪಾರ್ಶ್ವವಾಯು ಪೀಡಿತರು ನ್ಯುಮೋನಿಯಾದಂತಹ ಕಾಯಿಲೆಗೆ ತುತ್ತಾಗುತ್ತಾರೆ. ಆರೋಗ್ಯ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ. ಎರಡೂ ಚಿಕಿತ್ಸೆಗೆ ರೋಗಿ ಸ್ಪಂದಿಸುವುದು ಕಷ್ಟ’ ಎನ್ನುತ್ತಾರೆ ವೈದ್ಯ ಡಾ.ಗುರುಪ್ರಸಾದ್ ಎಸ್.ಪೂಜಾರಿ.

ಪಾರ್ಶ್ವವಾಯು ಲಕ್ಷಣ ಹೀಗೆ ಗುರುತಿಸಿ

ಪಾರ್ಶ್ವವಾಯು ಗುರುತಿಸಲು ವೈದ್ಯಕೀಯ ಲೋಕ ಸೂತ್ರವೊಂದನ್ನು ರಚಿಸಿದೆ. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ‘BEFAST’ ಎಂದು ಕರೆಯಲಾಗುತ್ತಿದೆ. ಪ್ರತಿಯೊಂದು ಅಕ್ಷರಕ್ಕೂ ಒಂದೊಂದು ಅರ್ಥವಿದೆ. ಇದನ್ನು ಅರ್ಥಮಾಡಿಕೊಂಡರೆ ಪಾರ್ಶ್ವವಾಯು ಸುಲಭವಾಗಿ ಗುರುತಿಸಲು ಸಾಧ್ಯವಿದೆ.

ಬಿ – ದೇಹದ ಸಮತೋಲನ ತಪ್ಪುವುದು. ನಡೆಯುವಾಗ ಸಮತೋಲನ ಕಳೆದುಕೊಳ್ಳುವುದು

ಇ– ಕಣ್ಣುಗಳ ದೃಷ್ಟಿ ಮಂದವಾಗುವುದು ಅಥವಾ ಏಕಾಏಕಿ ಕಣ್ಣಿನ ಸಮಸ್ಯೆ ಬಾಧಿಸುವುದು

ಎಫ್ – ಮುಖದಲ್ಲಿ ಬದಲಾವಣೆಗಳು ಉಂಟಾಗುತ್ತವೆ. ವಿಪರೀತ ಆಯಾಸ ಅಥವಾ ಬಾಯಿ ಒಂದೆಡೆ ವಾಲುವುದು

ಎ – ದೇಹದ ಅಂಗಗಳಾದ ಕೈ–ಕಾಲುಗಳು ಸ್ವಾಧೀನ ಕಳೆದುಕೊಳ್ಳುವುದು ಅಥವಾ ನಿಶ್ಯಕ್ತಿ ಕಾಣಿಸಿಕೊಳ್ಳುವುದು

ಎಸ್ – ಮಾತುಗಳು ತೊದಲುವುದು ಅಥವಾ ಬಾಯಿಯಿಂದ ಮಾತು ಹೊರಬರಲು ಸಾಧ್ಯವಾಗದೇ ಇರುವುದು

ಟಿ – ಸಮಯ ತುಂಬಾ ಮುಖ್ಯವಾದದ್ದು. ಸಕಾಲಕ್ಕೆ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಬೇಕು

3 ಆಂಬುಲೆನ್ಸ್ ಸೇವೆ ಲಭ್ಯ

ಪಾರ್ಶ್ವವಾಯು ಹಾಗೂ ಹೃದಯಾಘಾತ ಸಂಬಂಧಿ ರೋಗಿಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ಎಸ್.ಎಸ್.ನಾರಾಯಣ ಆಸ್ಪತ್ರೆ 3 ಆಂಬುಲೆನ್ಸ್ ಮೀಸಲಿಟ್ಟಿದೆ. ದಾವಣಗೆರೆ, ಚಿತ್ರದುರ್ಗ, ಹಾವೇರಿ ಹಾಗೂ ವಿಜಯನಗರ ಜಿಲ್ಲೆಯ ಜನರಿಗೆ ‘NEAR’ (ನಾರಾಯಣ ಎಮರ್ಜೆನ್ಸಿ ಆಂಬುಲೆನ್ಸ್ ರೆಸ್ಪಾನ್ಸ್) ಹೆಸರಿನಲ್ಲಿ ಈ ಸೇವೆ ಒದಗಿಸಲಾಗುತ್ತಿದೆ.

ಈ ಆಂಬುಲೆನ್ಸ್ಗಳ ಸೇವೆಗಾಗಿ 18003090309 ಸಂಖ್ಯೆಗೆ ಕರೆ ಮಾಡಬೇಕು. ನಿಗದಿತ ಸ್ಥಳಕ್ಕೆ ತೆರಳಿ ರೋಗಿಯನ್ನು ಆಸ್ಪತ್ರೆಗೆ ಕರೆತರಲಾಗುತ್ತದೆ. ಆದಷ್ಟು ಬೇಗ ರೋಗಿಯನ್ನು ಆಸ್ಪತ್ರೆಗೆ ಕರೆತಂದರೆ ಚಿಕಿತ್ಸೆ ಅನುಕೂಲವಾಗಲಿದ್ದು, ಗುಣಮುಖ ಸಾಧ್ಯತೆ ಹೆಚ್ಚು.

ಆಸ್ಪತ್ರೆ ಆಯ್ಕೆ ಹೀಗಿರಲಿ

ಪಾರ್ಶ್ವವಾಯುಗೆ ಅಲೋಪತಿ ಹೊರತುಪಡಿಸಿ ಬೇರೆ ಯಾವುದೇ ಚಿಕಿತ್ಸಾ ವಿಧಾನ ವೈಜ್ಞಾನಿಕವಾಗಿ ದೃಢಪಟ್ಟಿಲ್ಲ. ನಾಟಿ ಔಷಧ ಪದ್ಧತಿಗೆ ಮಾರುಹೋಗಿ ರೋಗಿಯ ‘ಗೋಲ್ಡನ್’ ಸಮಯ ವ್ಯರ್ಥ ಮಾಡಿಕೊಳ್ಳಬಾರದು ಎಂಬುದು ವೈದ್ಯರ ಸಲಹೆ.

‘ಪಾರ್ಶ್ವವಾಯು ಲಕ್ಷಣ ಕಾಣಿಸಿಕೊಂಡ ತಕ್ಷಣ ಅಲೋಪತಿ ಚಿಕಿತ್ಸೆಗೆ ಸುಸಜ್ಜಿತ ಆಸ್ಪತ್ರೆಗೆ ಕರೆತರುವುದು ಉತ್ತಮ. ಸಿ.ಟಿ, ಎಂಆರ್ಐ ಸ್ಕ್ಯಾನಿಂಗ್, ನರರೋಗ ವಿಭಾಗ, ತೀವ್ರ ನಿಗಾ ಘಟಕ (ಐಸಿಯು) ಸೌಲಭ್ಯ ಇರುವ ಆಸ್ಪತ್ರೆ ಇದ್ದರೆ ರೋಗಿ ಶೀಘ್ರ ಗುಣಮುಖರಾಗಲು ಸಾಧ್ಯ. ಕ್ಲಿನಿಕ್, ನಾಟಿ ಔಷಧ ಕೇಂದ್ರಗಳನ್ನು ಆದ್ಯತೆಯಾಗಿ ಪರಿಗಣಿಸಿದರೆ ರೋಗಿಯ ಅತ್ಯಮೂಲ್ಯ ಸಮಯ ವ್ಯರ್ಥವಾಗುತ್ತದೆ’ ಎನ್ನುತ್ತಾರೆ ಡಾ.ಗುರುಪ್ರಸಾದ್ ಎಸ್.ಪೂಜಾರ್.

ಪಾರ್ಶ್ವವಾಯು ಚಿಕಿತ್ಸೆಗೆ ದಾವಣಗೆರೆಯ ಎಸ್.ಎಸ್.ನಾರಾಯಣ ಹೆಲ್ತ್ ಆಸ್ಪತ್ರೆಯಲ್ಲಿ ಈ ಎಲ್ಲ ಸೌಲಭ್ಯಗಳು ಲಭ್ಯ ಇವೆ. ಡಾ. ವೀರಣ್ಣ ಮೋಹನ್ ಗಡಾದ, ಡಾ.ಗುರುಪ್ರಸಾದ್ ಎಸ್.ಪೂಜಾರಿ, ಡಾ.ಕೃಷ್ಣಮೂರ್ತಿ ಹಾಗೂ ಡಾ.ರಚಿತಾ ಅವರಂತಹ ತಜ್ಞ ವೈದ್ಯರ ತಂಡ ಹಾಗೂ 8 ಜನ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು, ವೈದ್ಯಕೀಯ ಸಿಬ್ಬಂದಿ ತುರ್ತು ಚಿಕಿತ್ಸೆಗೆ ಸದಾ ಸಜ್ಜಾಗಿರುತ್ತಾರೆ. 2017ರಲ್ಲಿ ಶುರುವಾಗಿರುವ ಈ ಆಸ್ಪತ್ರೆಯಲ್ಲಿ 500ಕ್ಕೂ ಹೆಚ್ಚು ರೋಗಿಗಳಿಗೆ ತುರ್ತುಚಿಕಿತ್ಸೆ ನೀಡಲಾಗಿದ್ದು, 350 ಜನರು ಸಂಪೂರ್ಣ ಗುಣಮುಖರಾಗಿದ್ದಾರೆ. 5,000 ರೋಗಿಗಳು ನಿರಂತರವಾಗಿ ವೈದ್ಯಕೀಯ ಸೇವೆ ಪಡೆಯುತ್ತಿದ್ದಾರೆ.

ಯುವಜನರು ಎಚ್ಚರ ವಹಿಸಬೇಕು

ಶೇ 10ರಷ್ಟು ಜನರಿಗೆ ಪಾರ್ಶ್ವವಾಯು ಮುನ್ಸೂಚನೆಗಳನ್ನು ನೀಡುತ್ತದೆ. ಇದನ್ನು ನಿರ್ಲಕ್ಷಿಸಿದರೆ ದೊಡ್ಡ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು ಎಂಬುದು ವೈದ್ಯರ ಕಳವಳ.

‘ದೇಹದ ಅಂಗಗಳಲ್ಲಿ ಸಾಮಾನ್ಯವಾಗಿ ಮುನ್ಸೂಚನೆ ಕಾಣಿಸಿಕೊಳ್ಳುತ್ತದೆ. ಕೈ–ಕಾಲುಗಳಲ್ಲಿ ಕೆಲ ಹೊತ್ತು ನಿಶ್ಯಕ್ತಿ ಕಾಣಿಸಿಕೊಳ್ಳುತ್ತದೆ. ದೃಷ್ಟಿ ಮಂದವಾಗುವುದು ಹಾಗೂ ಮಾತು ತೊದಲುವುದು ಸಣ್ಣ ಪ್ರಮಾಣದ ಪಾರ್ಶ್ವವಾಯು. ಈ ಮುನ್ಸೂಚನೆಯನ್ನು ಉಪೇಕ್ಷೆ ಮಾಡದೇ ವೈದ್ಯರನ್ನು ಸಂಪರ್ಕಿಸಬೇಕು’ ಎನ್ನುತ್ತಾರೆ ಡಾ.ಗುರುಪ್ರಸಾದ್ ಎಸ್.ಪೂಜಾರ್.

ಹಿರಿಯರಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ರೋಗ ಜೀವನಶೈಲಿ ಬದಲಾವಣೆಯಿಂದಾಗಿ 45 ವರ್ಷದ ಒಳಗಿನವರನ್ನೂ ಬಾಧಿಸುತ್ತಿದೆ. ಯುವ ಸಮೂಹ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕು. ನಿತ್ಯ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು. ದುಶ್ಚಟಗಳಿಂದ ದೂರವಿರಬೇಕು. 40 ವರ್ಷ ಮೇಲ್ಪಟ್ಟವರು ಪ್ರತಿ ವರ್ಷ ಆರೋಗ್ಯ, ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ಕಾರ್ಯಕ್ರಮದಲ್ಲಿನ ಆಯ್ದ ಪ್ರಮುಖ ಪ್ರಶ್ನೆಗಳು ಹಾಗೂ ಉತ್ತರಗಳು

* ಬೆಳಿಗ್ಗೆ ಎದ್ದ ತಕ್ಷಣ ಎರಡೂ ಕೈಗಳು ಬಿಗಿದಂತಾಗುತ್ತವೆ. ಒಂದೂವರೆ ವರ್ಷದಿಂದ ಈ ಸಮಸ್ಯೆ ಕಂಡುಬರುತ್ತಿದೆ. ಇದು ಪಾರ್ಶ್ವವಾಯು ಇರಬಹುದು ಎಂಬ ಆತಂಕ ಇದೆ. ಪಾರ್ಶ್ವವಾಯು ಬರದಂತೆ ಏನೆಲ್ಲ ಎಚ್ಚರಿಕೆ ವಹಿಸಬಹುದು ತಿಳಿಸಿ - ರವಿಕಿರಣ್, ಚನ್ನಗಿರಿ

ನೀವು ಹೇಳಿದ ಲಕ್ಷಣಗಳು ಖಂಡಿತ ಪಾರ್ಶ್ವವಾಯುಗೆ ಸಂಬಂಧಿಸಿದ್ದಲ್ಲ. ಪೌಷ್ಟಿಕಾಂಶದ ಕೊರತೆಯಿಂದ ನರಗಳಲ್ಲಿ ಈ ಸಮಸ್ಯೆ ಉಂಟಾಗಿರಬಹುದು. ಆದರೂ, ಈ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ. ಹತ್ತಿರದ ಆಸ್ಪತ್ರೆಗೆ ತೆರಳಿ ತಜ್ಞ ವೈದ್ಯರ ಬಳಿ ಸಮಸ್ಯೆ ಹೇಳಿಕೊಳ್ಳಿ. ಅವರು ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ, ಸಲಹೆ ನೀಡುತ್ತಾರೆ.

ಪಾರ್ಶ್ವವಾಯು ತಡೆಗೆ ಮುನ್ನೆಚ್ಚರಿಕೆ ವಹಿಸುವುದು ಅತಿ ಮುಖ್ಯ. 45 ವರ್ಷದ ನಂತರ ವರ್ಷಕ್ಕೊಮ್ಮೆಯಾದರೂ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ಸೊಪ್ಪು, ತರಕಾರಿಗಳನ್ನು ಹೆಚ್ಚಾಗಿ ಬಳಸಬೇಕು. ಕೋಳಿ ಹಾಗೂ ಮೀನಿನ ಖಾದ್ಯವನ್ನು ನಿಯಮಿತವಾಗಿ ಸೇವಿಸಬಹುದು. ಕುರಿ ಮಾಂಸದ ಊಟ ಕಡಿಮೆ ಮಾಡುವುದು ಸೂಕ್ತ. ಯೋಗ, ವ್ಯಾಯಾಮ ಮಾಡಬೇಕು. ವಾರದಲ್ಲಿ 150 ನಿಮಿಷವಾದರೂ ದೈಹಿಕ ಚಟುವಟಿಕೆ ಅಗತ್ಯ. ತಂಬಾಕು ಹಾಗೂ ಮದ್ಯಪಾನದಿಂದ ದೂರವಿರಿ.

* ಪಾರ್ಶ್ವವಾಯು ಆಗಿದೆ ಎಂಬುದನ್ನು ಹೇಗೆ ಅರಿಯುವುದು? ಪಾರ್ಶ್ವವಾಯು ಆದಾಗ ಕೂಡಲೇ ಏನು ಮಾಡಬೇಕು ಎಂಬ ಬಗ್ಗೆ ತಿಳಿಸಿ –ಚಿದಾನಂದ (ಭಾನುವಳ್ಳಿ), ನಯನಾ (ದಾವಣಗೆರೆ), ಸಂದೇಶ್ (ಕುಕ್ಕುವಾಡ)

ಕೈಕಾಲುಗಳು ಸ್ವಾಧೀನ ಕಳೆದುಕೊಳ್ಳುವುದು, ಮಾತಾಡುವಾಗ ತೊದಲುವುದು, ನಿಲ್ಲಲು ಹಾಗೂ ನಡೆಯಲು ಸಾಧ್ಯವಾಗದಿರುವುದು (ಬ್ಯಾಲೆನ್ಸ್ ತಪ್ಪುವುದು), ಸ್ಪಷ್ಟವಾಗಿ ಕಣ್ಣು ಕಾಣದಿರುವುದು.. ಪಾರ್ಶ್ವವಾಯು ಆದಾಗ ಕಂಡುಬರುವ ಮುಖ್ಯ ಲಕ್ಷಣಗಳಿವು. ಪಾರ್ಶ್ವವಾಯು ಆದಾಗ ಕೂಡಲೇ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಬೇಕು. ಪಾರ್ಶ್ವವಾಯು ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಸ್ಪತ್ರೆಯಲ್ಲಿ ತಲೆಯ ಸ್ಕ್ಯಾನ್ ಮಾಡಬೇಕಾಗುತ್ತದೆ. ಪಾರ್ಶ್ವವಾಯು ಖಚಿತವಾದ ಬಳಿಕ ತಜ್ಞವೈದ್ಯರು ಚಿಕಿತ್ಸೆ ಮುಂದುವರಿಸುತ್ತಾರೆ.

* ಪಾರ್ಶ್ವವಾಯು ಸಂಭವಿಸಿದವರಿಗೆ ಕೊಬ್ಬರಿ ಎಣ್ಣೆ ಕುಡಿಸುವ ಪದ್ಧತಿ ಇದೆ. ಇದು ವೈಜ್ಞಾನಿಕವಾಗಿದೆಯಾ?– ಬಸವರಾಜಪ್ಪ, ದಾವಣಗೆರೆ

ಖಂಡಿತಾ ಈ ಪದ್ಧತಿ ಸರಿ ಅಲ್ಲ. ಕೊಬ್ಬರಿ ಎಣ್ಣೆ ಕುಡಿಸುವುದರಿಂದ ಯಾವುದೇ ಪರಿಹಾರ ದೊರಕುವುದಿಲ್ಲ. ಬದಲಾಗಿ ಮತ್ತಷ್ಟು ಸಮಸ್ಯೆ ಉಂಟಾಗುತ್ತದೆ. ನ್ಯುಮೋನಿಯಾಕ್ಕೂ ಇದು ದಾರಿ ಮಾಡಿಕೊಡಬಹುದು. ಇಂತಹ ಯಾವುದೇ ಪದ್ಧತಿಗಳನ್ನು ಅನುಸರಿಸಬಾರದು. ಅಂತರ್ಜಾಲದಲ್ಲಿ ಪರಿಶೀಲಿಸಿ ಮನೆಯಲ್ಲೇ ಔಷಧಿ ನೀಡುವಂತಹ ಕಾರ್ಯವನ್ನೂ ಮಾಡಬಾರದು. ಪಾರ್ಶ್ವವಾಯು ಸಂಭವಿಸಿದ ಕೂಡಲೇ ಸಿಟಿ ಸ್ಕ್ಯಾನ್, ಎಂಆರ್ಐ ಸ್ಕ್ಯಾನ್ ಸೌಲಭ್ಯ ಇರುವ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು.

* 2022ರಲ್ಲಿ ನನಗೆ ಪಾರ್ಶ್ವವಾಯು ಆಗಿತ್ತು. ಚಿಕಿತ್ಸೆ ಪಡೆದು ಆರೋಗ್ಯವಾಗಿದ್ದೇನೆ. ಬಾಳೆ ಎಲೆಯಲ್ಲಿ ಊಟ ಮಾಡಬಾರದು, ಬಾಳೆಹಣ್ಣು ತಿನ್ನಬಾರದು ಎಂಬ ಮಾತುಗಳು ಕೇಳಿಬಂದವು. ಇವು ನಿಜವೇ? ಪಾರ್ಶ್ವವಾಯು ರೋಗಿಗಳು ಯಾವ ಆಹಾರ ಪದ್ಧತಿಯನ್ನು ಪಾಲಿಸಬೇಕು? –ಮುನೀರ್, ಮತ್ತಿ, ದಾವಣಗೆರೆ

ಪಾರ್ಶ್ವವಾಯು ಪೀಡಿತರು ಬಾಳೆ ಎಲೆಯಲ್ಲಿ ಊಟ ಮಾಡಬಹುದು. ಬಾಳೆ ಹಣ್ಣನ್ನೂ ತಿನ್ನಬಹುದು. ಉಪ್ಪಿನ ಪದಾರ್ಥಗಳನ್ನು ಹೆಚ್ಚು ಬಳಸಬಾರದು. ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಕುರಿ ಹಾಗೂ ದನದ ಮಾಂಸದಲ್ಲಿ ಹೆಚ್ಚು ಕೊಬ್ಬಿನ ಅಂಶ ಇರುವುದರಿಂದ ಅವುಗಳನ್ನು ಸೇವಿಸದಿರುವುದು ಸೂಕ್ತ. ಸಾಧ್ಯವಾದಷ್ಟು ಮನೆಯ ಊಟ ಮಾಡುವುದು ಉತ್ತಮ.

* ಪಾರ್ಶ್ವವಾಯು ಸಂಭವಿಸಿದಾಗ ನೀಡುವ ಪ್ರಥಮ ಚಿಕಿತ್ಸೆ ಯಾವುದು? ವಯಸ್ಕರಿಗೂ ಪಾರ್ಶ್ವವಾಯು ಸಂಭವಿಸುವ ಅಪಾಯ ಇದೆಯಾ?– ರಾಜು, ಜಗಳೂರು, ಆನಂದ್–ದಾವಣಗೆರೆ

ಪಾರ್ಶ್ವವಾಯು ಘಟಿಸಿದಾಗ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವುದೇ ಪ್ರಥಮ ಚಿಕಿತ್ಸೆಯಾಗಿದೆ. ಮಿದುಳಿನ ಚಿಕಿತ್ಸೆಗೆ ಸಮಯವೇ ಮುಖ್ಯ. ಹೀಗಾಗಿ ಸಮೀಪದಲ್ಲಿರುವ ಅತ್ಯಾಧುನಿಕ ಸೌಲಭ್ಯಗಳಿರುವ ಆಸ್ಪತ್ರೆಗೆ ಕರೆದೊಯ್ಯಬೇಕು. ಸಾಮಾನ್ಯವಾಗಿ 50 ರಿಂದ 60 ವರ್ಷದವರಿಗೇ ಹೆಚ್ಚು ಪಾರ್ಶ್ವವಾಯು ಉಂಟಾಗುತ್ತಿದೆ. 45 ವರ್ಷದೊಳಗಿನವರಿಗೆ ಪಾರ್ಶ್ವವಾಯು ಆಗುವುದನ್ನು ‘ಸ್ಟ್ರೋಕ್ ಇನ್ ಯಂಗ್’ ಎಂದು ಕರೆಲಾಗುತ್ತದೆ. ಅಧಿಕ ರಕ್ತದೊತ್ತಡ (ಬಿ.ಪಿ), ಮಧುಮೇಹ (ಶುಗರ್) ಬಗ್ಗೆ ನಿರ್ಲಕ್ಷ್ಯ ಸಲ್ಲದು. ಯುವಜನರು ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳುವುದು ಬಹಳ ಮುಖ್ಯ. ನಿಯಮಿತವಾಗಿ ದೈಹಿಕ ಚಟುವಟಿಕೆ ನಡೆಸಬೇಕು.

* ಎರಡೂವರೆ ವರ್ಷದ ಹಿಂದೆ 2 ಕಾಲುಗಳ ಸ್ವಾಧೀನ ಕಳೆದುಕೊಂಡೆ. ಫಿಸಿಯೊಥೆರಪಿ ಮಾಡಿಸಿದ್ದೆ. ಆದರೂ, ಈಗ ಓಡಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪರಿಹಾರ ಏನು?–ಪಾಲಾಕ್ಷಪ್ಪ, ಹೊಸಳ್ಳಿ (ಸೂಳೆಕೆರೆ ಹತ್ತಿರ)

ಪಾರ್ಶ್ವವಾಯು ಕಾಣಿಸಿಕೊಂಡಾಗ ದೇಹದ ಒಂದು ಭಾಗ ಮಾತ್ರ ಸ್ವಾಧೀನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ನಿಮ್ಮದು ಬೆನ್ನುಹುರಿ ಸಮಸ್ಯೆ ಇರಬಹುದು. ಎಸ್.ಎಸ್.ನಾರಾಯಣ ಹೈಟೆಕ್ ಆಸ್ಪತ್ರೆಗೆ ಬನ್ನಿ. ನಿಮ್ಮನ್ನು ಪರೀಕ್ಷಿಸಿ, ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಚಿಕಿತ್ಸೆ, ಸಲಹೆ ನೀಡಲಾಗುವುದು.

* ಪಾರ್ಶ್ವವಾಯು ಸಂಭವಿಸಿದ ಬಳಿಕ ರಕ್ತದೊತ್ತಡದ ಮಾತ್ರೆ ತೆಗೆದುಕೊಳ್ಳುವುದನ್ನು ನಿಲ್ಲಿಸಬಹುದೇ? ಇದರಿಂದ ಏನಾದರೂ ಸಮಸ್ಯೆ ಆಗುತ್ತದೆಯಾ? –ಪರಶುರಾಮ್, ಬೂದಾಳ್, ದಾವಣಗೆರೆ

ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಮಾತ್ರೆ ತೆಗೆದುಕೊಳ್ಳುವುದನ್ನು ನಿಲ್ಲಿಸುವುದರಿಂದ ಮತ್ತೆ ಪಾರ್ಶ್ವವಾಯು ಸಂಭವಿಸುವ ಸಾಧ್ಯತೆ ಇರುತ್ತದೆ. ಪಾರ್ಶ್ವವಾಯು ಕಾಣಿಸಿಕೊಳ್ಳಲು ಅಧಿಕ ರಕ್ತದೊತ್ತಡವೂ ಕಾರಣ. ಹೀಗಾಗಿ ಯಾವುದೇ ಕಾರಣಕ್ಕೂ ವೈದ್ಯರು ಸೂಚಿಸುವವರೆಗೂ ರಕ್ತದೊತ್ತಡದ ಮಾತ್ರೆ ಸೇವಿಸುವುದನ್ನು ನಿಲ್ಲಿಸಬಾರದು. ಮಾತ್ರೆ ತೆಗೆದುಕೊಳ್ಳುವುದನ್ನು ನಿಲ್ಲಿಸಿದ ವಾರ ಅಥವಾ ತಿಂಗಳಲ್ಲಿ ಪಾರ್ಶ್ವವಾಯು ಆಗಬಹುದು.

* ರಕ್ತದೊತ್ತಡ (ಬಿ.ಪಿ.) ಎಷ್ಟಿದ್ದರೆ ಆರೋಗ್ಯಯುತ ಎಂದು ಪರಿಗಣಿಸಬಹುದು?– ಅರುಣ್, ದಾವಣಗೆರೆ

140 - 90 ಬಿ.ಪಿ ಇದ್ದರೆ ಆರೋಗ್ಯಯುತ ಎಂದು ಭಾವಿಸಲಾಗುತ್ತಿದೆ. ಇದಕ್ಕಿಂತ ಹೆಚ್ಚು ಇದ್ದರೆ ಅಗತ್ಯವಾಗಿ ಚಿಕಿತ್ಸೆ ಪಡೆಯಬೇಕು. ಆಗಾಗ ಬಿ.ಪಿ ಪರೀಕ್ಷೆ ಮಾಡಿಸಬೇಕು. ಪ್ರತೀ ಬಾರಿಯೂ ಜಾಸ್ತಿ ಬಂದರೆ ವೈದ್ಯರ ಸಲಹೆಯಂತೆ ಮಾತ್ರೆ ತೆಗೆದುಕೊಳ್ಳುವುದು ಸೂಕ್ತ.

* ನನ್ನ ಸಹೋದರಿಗೆ ದೇಹದ ಬಲಭಾಗಕ್ಕೆ ಪಾರ್ಶ್ವವಾಯು ಆಗಿತ್ತು. ₹ 35,000 ವ್ಯಯಿಸಿ ಇಂಜೆಕ್ಷನ್ ಕೊಡಿಸಲಾಗಿತ್ತು. ಆದರೂ, ಗುಣಮುಖವಾಗಿಲ್ಲ – ಬಸವರಾಜ್, ಹರಿಹರ

ಯಾಕೆ ಕಡಿಮೆ ಆಗಿಲ್ಲ ಎಂಬುದರ ಬಗ್ಗೆ ಆಸ್ಪತ್ರೆಯ ವೈದ್ಯರನ್ನು ಕೇಳಬೇಕಿತ್ತು. ಪಾರ್ಶ್ವವಾಯು ಆದಾಗ ವಿಳಂಬವಾಗಿ ಚಿಕಿತ್ಸೆ ಕೊಡಿಸಿದ್ದರೆ ಅಥವಾ ಗಂಭೀರವಾದ ಸ್ಟ್ರೋಕ್ ಆದಾಗಲೂ ಕೆಲವೊಮ್ಮೆ ಹೀಗಾಗುತ್ತದೆ. ನಾಟಿ ವೈದ್ಯಕೀಯ ಪದ್ಧತಿ ಎಂಬುದು ಇಲ್ಲವೇ ಇಲ್ಲ. ನಾಟಿ ಔಷಧಿ ಕೊಡಿಸುವುದು ಬೇಡ. ತಜ್ಞ ವೈದ್ಯರು ಸೂಚಿಸಿದ ಔಷಧಿಯನ್ನೇ ಮುಂದುವರಿಸಿ.

* ಸಂಬಂಧಿಕರೊಬ್ಬರಿಗೆ ಪಾರ್ಶ್ವವಾಯು ಆಗಿತ್ತು. ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೆ ಪಾರ್ಶ್ವವಾಯು ಆಗುವ ಸಾಧ್ಯತೆ ಇದೆಯಾ?– ನಾಗರಾಜ್, ದಾವಣಗೆರೆ

ಅವರ ಆರೋಗ್ಯ ಸ್ಥಿತಿ ಈಗ ಹೇಗಿದೆ ಎಂಬುದನ್ನು ತಿಳಿಯಬೇಕಿದೆ. ಒಮ್ಮೆ ಆಸ್ಪತ್ರೆಗೆ ಬಂದರೆ, ಆರೋಗ್ಯ ಪರಿಶೀಲಿಸಿ ಸೂಕ್ತ ಚಿಕಿತ್ಸೆ ನೀಡಬಹುದು. ಔಷಧಿ ಪಡೆಯದಿದ್ದರೆ ಅಥವಾ ಮುಂಜಾಗ್ರತೆ ವಹಿಸದಿದ್ದರೆ ಖಂಡಿತವಾಗಿಯೂ ಮತ್ತೆ ಪಾರ್ಶ್ವವಾಯು ಘಟಿಸುವ ಅಪಾಯ ಇರುತ್ತದೆ.

* 15 ದಿನಗಳ ಹಿಂದೆ ಪತ್ನಿ ನಿಯಂತ್ರಣ ತಪ್ಪಿ ಉರುಳಿಬಿದ್ದರು. ವೈದ್ಯರು ಪಾರ್ಶ್ವವಾಯು ಲಕ್ಷಣ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಇದು ಮರುಕಳುಹಿಸಬಹುದೇ? – ಶ್ರೀಧರ್, ಸಂತೇಬೆನ್ನೂರು

ಭಯ, ಆತಂಕದ ಸಂದರ್ಭದಲ್ಲಿ ರಕ್ತದೊತ್ತಡ ಏರುಪೇರಾಗಿ ಪಾರ್ಶ್ವವಾಯ ಲಕ್ಷಣಗಳು ಗೋಚರಿಸುತ್ತವೆ. ನಿಮ್ಮ ಪತ್ನಿಗೂ ಇದೇ ರೀತಿ ಆಗಿರುವ ಸಾಧ್ಯತೆ ಇದೆ. ಅವರ ಆರೋಗ್ಯವನ್ನು ಒಮ್ಮೆ ಕೂಲಂಕಷವಾಗಿ ತಪಾಸಣೆಗೆ ಒಳಪಡಿಸುವುದು ಒಳಿತು.

* ತಾಯಿಗೆ ಪಾರ್ಶ್ವವಾಯು ಬಾಧಿಸಿದ್ದು, ಚಿಕಿತ್ಸೆ ಕೊಡಿಸಿದ್ದೇವೆ. ಅವರಲ್ಲಿ ಆತಂಕ ಹೆಚ್ಚಾಗಿದ್ದು, ಸರಿಯಾಗಿ ನಿದ್ದೆ ಮಾಡುತ್ತಿಲ್ಲ, ಪರಿಹಾರ ಏನು? – ಹೇಮಂತ್, ಹಿರೇಮಳಲಿ, ಚನ್ನಗಿರಿ ತಾಲ್ಲೂಕು

ಚಿಕಿತ್ಸೆಯ ಹಂತದಲ್ಲಿ ಪಾರ್ಶ್ವವಾಯು ಮರುಕಳುಹಿಸುವ ಸಾಧ್ಯತೆ ಇರುತ್ತದೆ. ತುಂಬಾ ಎಚ್ಚರದಿಂದ ಅವರನ್ನು ಆರೈಕೆ ಮಾಡಬೇಕು. ಸಮಯಕ್ಕೆ ಸರಿಯಾಗಿ ಔಷಧಗಳನ್ನು ನೀಡಿ. ತಾಯಿಗೆ ನೀವೇ ಧೈರ್ಯ ಹೇಳಿ.

ಪಾರ್ಶ್ವಾವಾಯು ಪೀಡಿತರು ಮಾನಸಿಕ ಖಿನ್ನತೆಗೆ ಜಾರುವ ಸಂಭವ ಇರುತ್ತದೆ. ಕುಟುಂಬದ ಸದಸ್ಯರು ಎಚ್ಚರವಹಿಸಬೇಕು. ಅವರು ಸದಾ ಉಲ್ಲಾಸದಿಂದ ಇರುವ ವಾತಾವರಣ ನಿರ್ಮಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.