ದಾವಣಗೆರೆಯಲ್ಲಿ ಹಂದಿ ಕಾಟ: ಸಂಖ್ಯೆಯೊಟ್ಟಿಗೆ ಏರಿದ ಸಮಸ್ಯೆ, ಜನರಿಗೆ ತೊಂದರೆ

7
ಸ್ಪಂದಿಸದ ಹಂದಿ ಮಾಲೀಕರು

ದಾವಣಗೆರೆಯಲ್ಲಿ ಹಂದಿ ಕಾಟ: ಸಂಖ್ಯೆಯೊಟ್ಟಿಗೆ ಏರಿದ ಸಮಸ್ಯೆ, ಜನರಿಗೆ ತೊಂದರೆ

Published:
Updated:
Deccan Herald

ದಾವಣಗೆರೆ: ನಗರದಲ್ಲಿ ಹಂದಿಗಳ ಸಂಖ್ಯೆ ಒಂದೇ ಸಮನೆ ಏರುತ್ತಿದೆ. ಇದರಿಂದ ಸಮಸ್ಯೆಗಳೂ ಅಧಿಕವಾಗುತ್ತಿದೆ. ಪಾಲಿಕೆಯ ಮನವಿಗಾಗಲೀ, ಕಾರ್ಯಾಚರಣೆಗಾಗಲೀ ಹಂದಿ ಮಾಲೀಕರಿಂದ ಸ್ಪಂದನೆ ದೊರೆಯುತ್ತಿಲ್ಲ.

ಕಳೆದ ವರ್ಷ ಮಾರ್ಚ್‌ನಲ್ಲಿ ಶೇಖರಪ್ಪ ನಗರದಲ್ಲಿ ಕೃತಿಕಾ ಮತ್ತು ಒವಿಯಾ ಎಂಬ ಪುಟ್ಟ ಮಕ್ಕಳಿಗೆ ಹಂದಿ ಕಚ್ಚಿ ಗಾಯ ಮಾಡಿತ್ತು. ಇದಾಗಿ ಆರು ತಿಂಗಳ ಬಳಿಕ ಸೆಪ್ಟೆಂಬರ್‌ನಲ್ಲಿ ಹೊಸ ಕುಂದವಾಡದಲ್ಲಿ ಕೌಶಿಕ್‌ ಎಂಬ ಮೂರು ವರ್ಷದ ಬಾಲಕನ ಮೇಲೆ ಹಂದಿ ದಾಳಿ ಮಾಡಿತ್ತು. ಈ ಎರಡೂ ಸಂದರ್ಭಗಳಲ್ಲಿ ಸ್ಥಳೀಯರು ಅಲ್ಲೇ ಇದ್ದಿದ್ದರಿಂದ ಮಕ್ಕಳು ಜೀವಾಪಾಯದಿಂದ ಪಾರಾಗಿದ್ದರು. ಈ ವರ್ಷ ಸೆ. 1ರಂದು ಪಾಲಿಕೆಯ ನೌಕರ ಕೆ.ಎಚ್‌. ಮಂಜುನಾಥ ಜಾಲಿನಗರದಲ್ಲಿ ನೀರು ಸರಬರಾಜಿಗಾಗಿ ವಾಲ್ವ್‌ ತಿರುಗಿಸಲು ಹೋದಾಗ ಹಂದಿ ದಾಳಿ ಮಾಡಿ ತೊಡೆ ಹಾಗೂ ಮರ್ಮಾಂಗಕ್ಕೆ ಕಚ್ಚಿತ್ತು. ಇದಿಷ್ಟು 2017ರ ಈಚಿನ ಘಟನೆಗಳು. ಅದಕ್ಕಿಂತ ಮೊದಲು ಹಳ್ಳಿಯಿಂದ ಬಂದಿದ್ದ ರೈತರೊಬ್ಬರಿಗೆ ಬಂಬೂ ಬಜಾರ್‌ ಬಳಿ ಹಂದಿ ಕಚ್ಚಿತ್ತು.

ಈ ರೀತಿ ಹಂದಿಗಳ ದಾಳಿ ನಡೆದಾಗ ಮಾತ್ರ ಹಂದಿ ಮಾಲೀಕರ ವಿರುದ್ಧ ಆಕ್ರೋಶ ಕೇಳಿ ಬರುತ್ತದೆ. ಗಾಯ ಮಾಯವಾಗುತ್ತಿದ್ದಂತೆ ಆಕ್ರೋಶವೂ ತಣ್ಣಗಾಗಿ ಬಿಡುತ್ತದೆ. ಹಂದಿಗಳು ಬೀದಿಯಲ್ಲೇ ಅಲೆದಾಡುತ್ತಿರುತ್ತವೆ.

ಸ್ಥಳಾಂತರಕ್ಕೂ ವಿರೋಧ:

ಕಳೆದ ವರ್ಷ ಆಗಸ್ಟ್‌ನಲ್ಲಿ ಜಿಲ್ಲಾಡಳಿತದ ಸೂಚನೆ ಮೇರೆಗೆ ನಗರದಲ್ಲಿ ಹಂದಿ ಹಿಡಿಯಲು ಬಂದಿದ್ದ ತಮಿಳುನಾಡು ತಂಡದ ಮೇಲೆ ಹೊಂಡದ ಸರ್ಕಲ್‌ ಬಳಿ ಕಲ್ಲು ತೂರಲಾಗಿತ್ತು. ಹಂದಿ ಕಾರ್ಯಾಚರಣೆ ಮಾಡಲು ಬಿಡುವುದಿಲ್ಲ ಎಂದು ಅಧಿಕಾರಿಗಳ ಜತೆಗೆ ವಾಗ್ವಾದ ಮಾಡಿದ್ದ ಹಂದಿ ಮಾಲೀಕರು ಹಲ್ಲೆಗೆ ಮುಂದಾಗಿದ್ದರು. ಹಿಡಿದು ಲಾರಿಯಲ್ಲಿ ಹಾಕಲಾಗಿದ್ದ 52 ಹಂದಿಗಳನ್ನು ಬಿಟ್ಟಿದ್ದರು. ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿ ಅಧಿಕಾರಿಗಳ ವಾಹನಕ್ಕೆ ಕಲ್ಲು ತೂರಿ ಗಾಜು ಪುಡಿ ಮಾಡಲಾಗಿತ್ತು.

ಸಾರ್ವಜನಿಕರಿಂದ ಪ್ರೋತ್ಸಾಹ ದೊರೆಯದೇ ಹೋದರೆ ಹಂದಿಗಳನ್ನು ಸ್ಥಳಾಂತರಿಸುವುದು ಕಷ್ಟ. ಈ ಬಾರಿಯೂ ಹಂದಿ ಹಿಡಿಯಲು ತಮಿಳುನಾಡಿನ ತಂಡವನ್ನು ಕರೆಸಿ 11 ಬಾರಿ ಕಾರ್ಯಾಚರಣೆ ಮಾಡಲಾಗಿತ್ತು. ಹಲ್ಲೆ, ಕಲ್ಲು ತೂರಾಟ ಈ ಬಾರಿ ನಡೆಯದೇ ಇದ್ದರೂ ಹಂದಿ ಹಿಡಿಯುವವರು ಬರುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದ್ದಂತೆ ಅಲ್ಲಿಂದ ಹಂದಿಗಳನ್ನು ಬೇರೆಡೆಗೆ ಓಡಿಸಿದ್ದಾರೆ ಎನ್ನುತ್ತಾರೆ ಪಾಲಿಕೆಯ ಆರೋಗ್ಯ ಅಧಿಕಾರಿ ಚಂದ್ರಶೇಖರ ಸುಂಕದ.

ಹಂದಿಗಳನ್ನು ಸ್ಥಳಾಂತರ ಮಾಡಬೇಕು. ನಿಮ್ಮ ಸುಪರ್ದಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಈಗಾಗಲೇ ಹಂದಿ ಮಾಲೀಕರಿಗೆ ಪ್ರಕಟಣೆಗಳ ಮೂಲಕ ತಿಳಿಸಲಾಗಿದೆ. ಗಣೇಶೋತ್ಸವ ಕಳೆದ ಕೂಡಲೇ ಪೊಲೀಸರ ಬೆಂಗಾವಲಿನಲ್ಲಿ ಮತ್ತೆ ಹಂದಿ ಹಿಡಿದು ಬೇರೆಡೆಗೆ ಸಾಗಿಸುವ ಕಾರ್ಯಾಚರಣೆಯನ್ನು ಪಾಲಿಕೆ ಮಾಡಲಿದೆ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !