ಶುಕ್ರವಾರ, ಮಾರ್ಚ್ 31, 2023
25 °C
ಸರ್ಕಾರದ ನಿಯಮದಡಿ ಗಣೇಶೋತ್ಸವ ಆಚರಿಸಿ: ಶಾಸಕ ಎಸ್‌.ಎ. ರವೀಂದ್ರನಾಥ್ ಮನವಿ

ಹಿಂದೂ ಮಹಾಗಣಪತಿ ಉತ್ಸವಕ್ಕೆ ಹಂದರ ಕಂಬ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನಗರದ ಹಿಂದೂ ಮಹಾ ಗಣಪತಿ ಸಮಿತಿಯಿಂದ ಹೈಸ್ಕೂಲ್ ಮೈದಾನದಲ್ಲಿ ಗಣೇಶ ಮಹೋತ್ಸವ ಆಚರಣೆಗಾಗಿ ಮಂಗಳವಾರ ಹಂದರ ಕಂಬದ ಪೂಜೆ ನೆರವೇರಿಸಲಾಯಿತು.

ಶಾಸಕ ಎಸ್.ಎ. ರವೀಂದ್ರನಾಥ್‌ ಹಂದರ ಕಂಬ ಪೂಜೆ ನೆರವೇರಿಸಿ, ‘ಸರ್ಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಐದು ದಿನಗಳ ಕಾಲಾವಕಾಶ ನೀಡಿದೆ. ಈ ಸಂದರ್ಭದಲ್ಲಿ ಮೆರವಣಿಗೆಗೆ ಅವಕಾಶ ನೀಡಿಲ್ಲ. ಜನರು ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಬೇಕು’ ಎಂದು ಮನವಿ ಮಾಡಿದರು.

ಗಣೇಶ ಮೂರ್ತಿ ನಾಲ್ಕರಿಂದ ಆರು ಅಡಿಯಷ್ಟು ಮಾತ್ರ ಪ್ರತಿಷ್ಠಾಪನೆ ಸರ್ಕಾರ ಆದೇಶ ನೀಡಿದೆ. ಆದರೆ, ಇಲ್ಲಿ ಮೊದಲೇ 8 ಅಡಿಯ ಗಣಪತಿ ಮೂರ್ತಿಗೆ ಆರ್ಡರ್‌ ಮಾಡಲಾಗಿತ್ತು. ಅದೇ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

‘ಸಾರ್ವಜನಿಕ ಗಣೇಶ ಮೂರ್ತಿಯನ್ನು 3ರಿಂದ 5 ದಿನಗಳ ಒಳಗೆ ವಿಸರ್ಜನೆ ಮಾಡಬೇಕು ಎಂದು ಕಾಲ ಮಿತಿ ನಿಗದಿ ಮಾಡಿರುವುದು ಸರಿಯಲ್ಲ. ಬಸ್ಸು, ರೈಲು ಸಂಚಾರಕ್ಕೆ ಅವಕಾಶ ಇದೆ. ಶಾಲಾ, ಕಾಲೇಜುಗಳನ್ನು ತೆರೆದಿದ್ದಾರೆ. ಗಣೇಶೋತ್ಸವಕ್ಕೆ ಮಾತ್ರ ನಿರ್ಬಂಧ ಯಾಕೆ? ಹಿಂದೆ 21 ದಿನಗಳ ಕಾಲ ಉತ್ಸವ ಮಾಡಲಾಗುತ್ತಿತ್ತು. ಕಾಲಮಿತಿಯನ್ನು ಸಡಿಲಿಸಬೇಕು’ ಎಂದು ಹಿಂದೂ ಮಹಾ ಗಣಪತಿ ಸಮಿತಿಯ ಜೊಳ್ಳಿಗುರು ಆಗ್ರಹಿಸಿದರು.

‘ಕೋವಿಡ್‌ 3ನೇ ಅಲೆ ಬರಲಿದೆ ಎಂಬ ತಜ್ಞರ ವರದಿ ಅನುಸರಿಸಿ ಸರ್ಕಾರ ಗಣೇಶೋತ್ಸವಕ್ಕೆ ನಿಬಂಧನೆಗಳನ್ನು ವಿಧಿಸಿದೆ. ಆ ನಿಬಂಧನೆಗಳನ್ನು ಪಾಲನೆ ಮಾಡಲಾಗುವುದು’ ಎಂದು ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್ ತಿಳಿಸಿದರು.

ಮೇಯರ್‌ ಎಸ್.ಟಿ. ವೀರೇಶ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ, ಧೂಡಾ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಕಾಂಗ್ರೆಸ್‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ. ಪಾಲಿಕೆ ಸದಸ್ಯರಾದ ಬಿ.ಜೆ. ಅಜಯ ಕುಮಾರ್, ಪೈಲ್ವಾನ್‌ ವೀರೇಶ್, ಶಿವನಗೌಡ ಪಾಟೀಲ್, ಮುಖಂಡರಾದ ಮಾಲತೇಶ್ ರಾವ್ ಜಾಧವ್, ಸತೀಶ್ ಪೂಜಾರಿ, ಟಿಂಕರ್ ಮಂಜಣ್ಣ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು