ಪೊಲೀಸರಿಗೆ ನಾಗರಿಕರ ಸಹಕಾರ ಅಗತ್ಯ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೇತನ್‌

ಶುಕ್ರವಾರ, ಏಪ್ರಿಲ್ 26, 2019
21 °C
ಧ್ವಜ ದಿನಾಚರಣೆ

ಪೊಲೀಸರಿಗೆ ನಾಗರಿಕರ ಸಹಕಾರ ಅಗತ್ಯ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೇತನ್‌

Published:
Updated:
Prajavani

ದಾವಣಗೆರೆ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪೊಲೀಸ್‌ ಇಲಾಖೆಗೆ ತನ್ನ ಕತ್ವವ್ಯವನ್ನು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ನಾಗರಿಕರ ಸಹಾಯ ಮತ್ತು ಸಹಕಾರ ಅತ್ಯಗತ್ಯ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೊಲೀಸ್‌ ಧ್ವಜ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಸಾರ್ವಜನಿಕರ ಸಹಾಯ ಮತ್ತು ಸಹಕಾರದಿಂದ ಪೊಲೀಸರು ತಮ್ಮ ಕರ್ತವ್ಯವನ್ನು ಅತಿ ಜವಾಬ್ದಾರಿಯುತವಾಗಿ ನಿಭಾಯಿಸಲು ಸಾಧ್ಯವಾಗಲಿದೆ. ಸಾರ್ವಜನಿಕರ ಮತ್ತು ಪೊಲೀಸರ ನಡುವಿನ ಸಂಬಂಧ ನಿಕಟವಾಗಿರಲು ಇಂಥ ಸಭೆ–ಸಮಾರಂಭಗಳನ್ನು ನಡೆಸುವುದು ಅಗತ್ಯವಾಗಿದೆ’ ಎಂದರು.

‘ಭಾರತಾದ್ಯಂತ ರಕ್ಷಣಾ ಪಡೆಯ ನಿವೃತ್ತ ಸೈನಿಕರ ಕ್ಷೇಮಾಭಿವೃದ್ಧಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಾಗುತ್ತಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಪೊಲೀಸ್ ಇಲಾಖೆಯಿಂದ ನಿವೃತ್ತಿ ಹೊಂದಿದ ಅಧಿಕಾರಿಗಳ ಮತ್ತು ಸಿಬ್ಬಂದಿಯ ಕ್ಷೇಮಾಭಿವೃದ್ಧಿಗಾಗಿ ಪೊಲೀಸ್ ಧ್ವಜ ದಿನಾಚರಣೆ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

‘1965 ಏಪ್ರಿಲ್‌ 2ರಂದು ಪೊಲೀಸ್‌ ಕಾಯ್ದೆ ಜಾರಿಗೊಂಡಿದೆ. ಈ ದಿನದಿಂದ ಕರ್ನಾಟಕ ರಾಜ್ಯ ಪೊಲೀಸ್ ಕಾಯ್ದೆ ಅಸ್ತಿತ್ವಕ್ಕೆ ಬಂದಿದೆ. ಇದರ ಅಂಗವಾಗಿ ಏಪ್ರಿಲ್‌ 2ರಂದು ಪ್ರತಿ ವರ್ಷ ಪೊಲೀಸ್‌ ಧ್ವಜ ದಿನವನ್ನು ಆಚರಿಸಲಾಗುತ್ತಿದೆ. ಇಂದು ಪೊಲೀಸ್ ಧ್ವಜವನ್ನು ಸಾರ್ವಜನಿಕರಿಗೆ ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ ಶೇ 50ರಷ್ಟನ್ನು ನಿವೃತ್ತ ಪೊಲೀಸ್‌ ಅಧಿಕಾರಿಗಳ ಕ್ಷೇಮಾಭಿವೃದ್ಧಿ ನಿಧಿಗೆ, ಶೇ 25ರಷ್ಟನ್ನು ಘಟಕದ ಪೊಲೀಸ್‌ ಕಲ್ಯಾಣ ನಿಧಿಗೆ ಹಾಗೂ ಉಳಿದ ಭಾಗವನ್ನು ಕೇಂದ್ರ ಕ್ಷೇಮಾಭಿವೃದ್ಧಿ ನಿಧಿಗೆ ಜಮಾ ಮಾಡಲಾಗುತ್ತದೆ’ ಎಂದು ವಿವರ ನೀಡಿದರು.

ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಕುಟುಂಬವರಿಗೆ ಎಲ್ಲಾ ರೀತಿಯ ಸಹಾಯವನ್ನು ಒದಗಿಸಲಾಗುತ್ತದೆ. ಅವರ ಆರೋಗ್ಯಕ್ಕೆ ಸಂಬಂಧಪಟ್ಟ ವೈದ್ಯಕೀಯ ಧನ ಸಹಾಯ, ಅಗತ್ಯವಾದ ಸೇವೆ ನೀಡುವುದು ಈ ದಿನದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ನಿವೃತ್ತ ಪಿಎಸ್‌ಐ ಕೆ. ಮರಿಸ್ವಾಮಿ, ‘ಪೊಲೀಸರ ಕ್ಷೇಮಾಭಿವೃದ್ಧಿಗೆ ಸಾರ್ವಜನಿಕರಿಂದ ನಿಧಿ ಸಂಗ್ರಹಿಸುವುದು ಪೊಲೀಸ್‌ ಧ್ವಜ ದಿನಾಚರಣೆಯ ಉದ್ದೇಶವಾಗಿದೆ. ಕರ್ತವ್ಯ ನಿರತ ಹಾಗೂ ನಿವೃತ್ತ ನೌಕರರಿಗೆ ಸಹಾಯ ಮಾಡುವ ಮೂಲಕ ಅವರ ಉನ್ನತಿಗೆ ಸಹಕಾರ ನೀಡಲಾಗುತ್ತದೆ’ ಎಂದರು.

‘ಆರೋಗ್ಯಕರ ಜೀವನ ನಡೆಸಬೇಕು. ನಿಮ್ಮ ಆರೋಗ್ಯದ ಬಗೆಗೂ ಕಾಳಜಿ ವಹಿಸಿ. ಮಾನಸಿಕ ಮತ್ತು ಶಾರೀರಿಕ ಆರೋಗ್ಯ ಇದ್ದಾಗ ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಜಿಲ್ಲೆಯ ಪೊಲೀಸ್‌ ಅಧಿಕಾರಿಗಳು ಆರೋಗ್ಯದ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು’ ಎಂದರು.

ಪೂರ್ವ ವಲಯದ ಐಜಿಪಿ ಸೌಮೆಂದು ಮುಖರ್ಜಿ ಅಧ್ಯಕ್ಷತೆ ವಹಿಸಿದ್ದರು. 21 ನಿವೃತ್ತ ನೌಕರರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಜೆ. ಉದೇಶ್‌ ವಂದಿಸಿದರು. ಮುಖ್ಯ ಸಮಾದೇಶಕ ಎಸ್‌.ವಿ. ದಿಲೀಪ್‌ಕುಮಾರ್‌ ನೇತೃತ್ವದಲ್ಲಿ ಆರು ತಂಡಗಳು ಪಥ ಸಂಚಲನ ನಡೆಸಿದವು.

ಕಳೆದ ವರ್ಷ ಪೊಲೀಸ್‌ ಧ್ವಜದಿಂದ ₹ 4.39 ಲಕ್ಷ ಸಂಗ್ರಹ

2018–19ನೇ ಸಾಲಿನಲ್ಲಿ ಪೊಲೀಸ್‌ ಧ್ವಜ ದಿನಾಚರಣೆಗೆ ಪ್ರಧಾನ ಕಚೇರಿಯಿಂದ ₹ 4.31 ಲಕ್ಷ ಮೊತ್ತದ ಪೊಲೀಸ್‌ ಧ್ವಜಗಳನ್ನು ಕಳುಹಿಸಲಾಗಿತ್ತು. ಧ್ವಜಗಳನ್ನು ಮಾರಾಟ ಮಾಡಿ ಒಟ್ಟು ಮೊತ್ತ ₹ 4.39 ಲಕ್ಷ ಸಂಗ್ರಹಿಸಲಾಗಿದೆ ಎಂದು ಆರ್‌. ಚೇತನ್‌ ಮಾಹಿತಿ ನೀಡಿದರು.

ಧ್ವಜ ಮಾರಾಟ ಮಾಡಿ ಬಂದ ಹಣದಲ್ಲಿ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿಗೆ ₹ 2.19 ಲಕ್ಷ, ಘಟಕದ ಕಲ್ಯಾಣ ನಿಧಿ ಹಾಗೂ ಕೇಂದ್ರ ಪೊಲೀಸ್‌ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ನಿಧಿಗೆ ತಲಾ ₹ ₹ 1.09 ಲಕ್ಷ ಜಮಾ ಮಾಡಲಾಗಿದೆ. ಒಂದು ವರ್ಷದ ಅವಧಿಯಲ್ಲಿ ನೂರಾರು ನಿವೃತ್ತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ₹ 2.33 ಲಕ್ಷವನ್ನು ವೈದ್ಯಕೀಯ ಧನಸಹಾಯ ನೀಡಲಾಗಿದೆ. ಪೊಲೀಸ್‌ ನಿವೃತ್ತ ಅಧಿಕಾರಿಗಳ ನಿಶ್ಚಿತ ಠೇವಣಿಯಲ್ಲಿ ₹ 13.35 ಲಕ್ಷ ಹಾಗೂ ಉಳಿತಾಯ ಖಾತೆಯಲ್ಲಿ ₹ 1,658 ಇದೆ ಎಂದು ಅವರು ವರದಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !