ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಂಡಾಯ’ ದಮನಕ್ಕೆ ನಾಯಕರ ಕಸರತ್ತು

ಪಾಲಿಕೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ಎರಡೇ ದಿನ ಬಾಕಿ * ಪಕ್ಷಗಳ ಅಭ್ಯರ್ಥಿ ಇಂದು ಘೋಷಣೆ
Last Updated 29 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ದಾವಣಗೆರೆ: ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಎರಡು ದಿನಗಳು ಮಾತ್ರ ಬಾಕಿ ಉಳಿದಿವೆ. ಹಲವು ಆಕಾಂಕ್ಷಿಗಳು ಟಿಕೆಟ್‌ ಗಿಟ್ಟಿಸಿಕೊಳ್ಳಲು ಪಕ್ಷದ ನಾಯಕರಿಗೆ ದುಂಬಾಲು ಬಿದ್ದಿದ್ದರೆ, ಇನ್ನು ಕೆಲವರು ಉಮೇದುವಾರಿಕೆ ಸಲ್ಲಿಸುವ ಮುನ್ನವೇ ವಾರ್ಡ್‌ಗಳಿಗೆ ತೆರಳಿ ಸದ್ದಿಲ್ಲದೇ ಪ್ರಚಾರ ಆರಂಭಿಸಿದ್ದಾರೆ.

ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಮುಖಂಡರು ಈಗಾಗಲೇ ಮತದಾರರ ಪಟ್ಟಿಯನ್ನು ತರಿಸಿಕೊಂಡು ಯಾವ ಯಾವ ವಾರ್ಡ್‌ಗಳಲ್ಲಿ ಯಾವ ಜಾತಿ ಹಾಗೂ ಧರ್ಮದ ಮತದಾರರು ಎಷ್ಟಿದ್ದಾರೆ ಎಂಬುದನ್ನು ಲೆಕ್ಕಹಾಕಿದ್ದಾರೆ. ಯಾರಿಗೆ ಟಿಕೆಟ್‌ ನೀಡಿದರೆ ಮತದಾರರು ಪಕ್ಷದ ಅಭ್ಯರ್ಥಿಯ ‘ಕೈ’ ಹಿಡಿಯಬಹುದು ಎಂದು ಅಳೆದೂ ತೂಗಿ ನೋಡುತ್ತಿದ್ದಾರೆ.

ಹಲವು ವಾರ್ಡ್‌ಗಳಿಗೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಈಗಲೇ ಅಭ್ಯರ್ಥಿಯ ಹೆಸರನ್ನು ಘೋಷಿಸಿದರೆ, ‘ಬಂಡಾಯ’ದ ಬಾವುಟ ಹಾರಿಸಬಹುದು ಎಂಬ ಕಾರಣಕ್ಕೆ ನಾಯಕರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಪ್ರಬಲ ಆಕಾಂಕ್ಷಿಗಳೊಂದಿಗೆ ಮಾತುಕತೆ ನಡೆಸಿ, ಪಕ್ಷದ ಅಭ್ಯರ್ಥಿ ಪರ ನಿಲ್ಲುವಂತೆ ಮನವೊಲಿಸುತ್ತಿದ್ದಾರೆ. ಬುಧವಾರ ಸಂಜೆ ವೇಳೆಗೆ ಟಿಕೆಟ್‌ ಅಂತಿಮಗೊಳಿಸುವ ಮೂಲಕ ‘ಬಂಡಾಯ’ ಏಳುವವರಿಗೆ ಕಡಿವಾಣ ಹಾಕಲು ಯೋಜನೆ ರೂಪಿಸುತ್ತಿದ್ದಾರೆ ಎಂದು ರಾಜಕೀಯ ಪಕ್ಷಗಳ ಮೂಲಗಳು ತಿಳಿಸಿವೆ.

ಸಚಿವ ಕೆ.ಎಸ್‌. ಈಶ್ವರಪ್ಪ ಬುಧವಾರ ಮಧ್ಯಾಹ್ನ ನಗರಕ್ಕೆ ಬರಲಿದ್ದು, ಅವರ ಸಮ್ಮುಖದಲ್ಲೇ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿಗೆ ಒಪ್ಪಿಗೆಯ ಮುದ್ರೆ ಬೀಳಿದೆ. ಇನ್ನೊಂದೆಡೆ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಸಮ್ಮುಖದಲ್ಲಿ ‘ಕಲ್ಲೇಶ್ವರ ಮಿಲ್‌’ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಗೆ ಸಂಜೆ ಅನುಮೋದನೆ ಸಿಗುವ ನಿರೀಕ್ಷೆಯಿದೆ.

ಮಂಗಳವಾರ ರಜೆಯ ದಿನವಾಗಿದ್ದರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ ಇರಲಿಲ್ಲ. ಬುಧವಾರ ಹಲವು ಆಕಾಂಕ್ಷಿಗಳು ನಾಮಪತ್ರ ಸಲ್ಲಿಸುವ ನಿರೀಕ್ಷೆ ಇದೆ. ಕೊನೆಯ ದಿನವಾದ ಗುರುವಾರ ಒಂಬತ್ತು ಚುನಾವಣಾಧಿಕಾರಿಗಳ ಕಚೇರಿಗಳಲ್ಲೂ ನಾಮಪತ್ರ ಸಲ್ಲಿಕೆಯ ಭರಾಟೆ ಕಂಡುಬರಲಿದೆ. ವಿಶೇಷವಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ ಟಿಕೆಟ್‌ ವಂಚಿತರ ಅಸಮಾಧಾನದ ಕಟ್ಟೆ ಒಡೆಯುವ ಸಾಧ್ಯತೆ ಇದ್ದು, ಎಷ್ಟು ಜನ ‘ಬಂಡಾಯ’ಯದ ಬಾವುಟ ಹಾರಿಸಲಿದ್ದಾರೆ ಎಂಬುದರ ಚಿತ್ರಣ ಎರಡು ದಿನಗಳಲ್ಲಿ ಗೊತ್ತಾಗಲಿದೆ.

ಸದ್ದಿಲ್ಲದೇ ಪ್ರಚಾರ: ಕೆಲವು ಆಕಾಂಕ್ಷಿಗಳು ಈಗಾಗಲೇ ಮತದಾರರ ಪಟ್ಟಿಗಳನ್ನು ತರಿಸಿಕೊಂಡು ವಾರ್ಡ್‌ಗಳಿಗೆ ತೆರಳಿ ಸದ್ದಿಲ್ಲದೇ ಪ್ರಚಾರ ಕಾರ್ಯವನ್ನೂ ಆರಂಭಿಸಿದ್ದಾರೆ. ತಾವೇ ಪಕ್ಷದ ಅಭ್ಯರ್ಥಿ ಎಂದೂ ಬಿಂಬಿಸಿಕೊಂಡು, ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ.

ಪಿ.ಜೆ. ಬಡಾವಣೆ (ವಾರ್ಡ್‌–17), ಮಂಡಿಪೇಟೆ, ಶೇಖರಪ್ಪ ನಗರ (ವಾರ್ಡ್‌ 19), ಕೆಟಿಜೆ ನಗರ–1 (ವಾರ್ಡ್‌ 27) ಹಾಗೂ 2 (ವಾರ್ಡ್‌ 26), ಕೆ.ಬಿ. ಬಡಾವಣೆ (ವಾರ್ಡ್‌ 25), ಭಗತ್‌ಸಿಂಗ್‌ ನಗರ (ವಾರ್ಡ್‌ 28), ಎಂ.ಸಿ.ಸಿ. ‘ಬಿ’ ಬ್ಲಾಕ್‌ (ವಾರ್ಡ್‌ 38) ಸೇರಿ ಕೆಲವು ವಾರ್ಡ್‌ಗಳಲ್ಲಿ ತುರುಸಿನ ಪೈಪೋಟಿ ಇದೆ. ಆಕಾಂಕ್ಷಿಗಳು ಈಗಾಗಲೇ ವಾರ್ಡ್‌ಗಳ ಜನರನ್ನು ಭೇಟಿ ಮಾಡಿ ತಮಗೆ ಬೆಂಬಲ ನೀಡುವಂತೆ ಕೋರುತ್ತಿದ್ದಾರೆ.

ಕೆಲ ಆಕಾಂಕ್ಷಿಗಳು ಸ್ಥಳೀಯ ಪತ್ರಿಕೆಗಳಿಗೆ ‘ದೀಪಾವಳಿ ಶುಭಾಶಯ’ದ ಜಾಹೀರಾತು ನೀಡಿ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿಯೂ ಸಂದೇಶ ರವಾನಿಸಿದ್ದಾರೆ. ಇನ್ನು ಕೆಲವರು ಪಕ್ಷದ ನಾಯಕರೊಂದಿಗೆ ಇರುವ, ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಾಗೂ ದುರ್ಬಲರಿಗೆ ನೆರವು ನೀಡುತ್ತಿರುವ ಫೋಟೊಗಳಿರುವ ಜಾಹೀರಾತು ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಡುವ ಮೂಲಕ ಪ್ರಚಾರ ಆರಂಭಿಸಿದ್ದಾರೆ. ಈಗಾಗಲೇ ಪ್ರಚಾರ ಆರಂಭಿಸಿರುವವರು ಪಕ್ಷದ ಟಿಕೆಟ್‌ ತಪ್ಪಿದರೆ ಬಂಡಾಯ ಅಭ್ಯರ್ಥಿಯಾಗಿಯೂ ಕಣಕ್ಕೆ ಇಳಿಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಮತದಾರರ ಪಟ್ಟಿ ಪಡೆಯಲು ದೌಡು
ಚುನಾವಣೆಗೆ ಅಧಿಸೂಚನೆ ಹೊರಡಿಸಿದ ದಿನದಿಂದಲೇ ಸ್ಪರ್ಧಾ ಆಕಾಂಕ್ಷಿಗಳು ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ವಾರ್ಡ್‌ಗಳಲ್ಲಿನ ಮತದಾರರ ಪಟ್ಟಿ ಪಡೆಯಲು ಪಾಲಿಕೆ ಕಚೇರಿಗೆ ದೌಡಾಯಿಸುತ್ತಿದ್ದಾರೆ.

‘ಅ. 22 ಹಾಗೂ 23ರಂದು ಪಾಲಿಕೆ ಕಚೇರಿಗೆ ಭಾರಿ ಸಂಖ್ಯೆಯಲ್ಲಿ ಜನ ಬಂದು ನೂಕುನುಗ್ಗಲಿನಲ್ಲಿ ಮತದಾರರ ಪಟ್ಟಿಯನ್ನು ತೆಗೆದುಕೊಂಡು ಹೋದರು. ಜನರನ್ನು ನಿಯಂತ್ರಿಸಲು ಈಗ ಚುನಾವಣಾಧಿಕಾರಿಗಳಿಗೆ ಅನುಗುಣವಾಗಿ ಒಂಬತ್ತು ಕೌಂಟರ್‌ ತೆರೆದಿದ್ದೇವೆ. ಬೆಳಿಗ್ಗೆ 9.30ರಿಂದ ಸಂಜೆ 6ರವರೆಗೂ ಮತದಾರರ ಪಟ್ಟಿಯನ್ನು ಕೊಡುತ್ತಿದ್ದೇವೆ. ನೂರಕ್ಕೂ ಹೆಚ್ಚು ಜನ ಬಂದು ಮತದಾರರ ಪಟ್ಟಿಯನ್ನು ತೆಗೆದುಕೊಂಡು ಹೋಗಿದ್ದಾರೆ’ ಎಂದು ಪಾಲಿಕೆಯ ಉಪ ಆಯುಕ್ತ (ಆಡಳಿತ) ಗದಿಗೇಶ ಶಿರಸಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

*
ಬುಧವಾರ ಸಂಜೆಯೊಳಗೆ ಕಾಂಗ್ರೆಸ್‌ ಟಿಕೆಟ್‌ ಅಂತಿಮಗೊಳಿಸುತ್ತೇವೆ. ಕೆಲ ವಾರ್ಡ್‌ಗಳಲ್ಲಿ ಅತೃಪ್ತರು ಬಂಡಾಯ ಎದ್ದರೂ ನಾಮಪತ್ರ ವಾಪಸ್‌ ಪಡೆದುಕೊಳ್ಳುವಂತೆ ಮನವೊಲಿಸುತ್ತೇವೆ.
– ಎಚ್‌.ಬಿ. ಮಂಜಪ್ಪ, ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್‌ ಸಮಿತಿ

*
ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುವಂತೆ ಮನವೊಲಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದೇವೆ. ಟಿಕೆಟ್‌ ವಂಚಿತ ಆಕಾಂಕ್ಷಿಗಳಿಗೆ ಪಕ್ಷದಲ್ಲಿ ಸ್ಥಾನಮಾನ ಕಲ್ಪಿಸಲಾಗುವುದು. ಇಲ್ಲವೇ ನಾಮನಿರ್ದೇಶನ ಮಾಡಲಾಗುವುದು.
– ಯಶವಂತರಾವ್‌ ಜಾಧವ್‌, ಅಧ್ಯಕ್ಷ, ಬಿಜೆಪಿ ಜಿಲ್ಲಾ ಘಟಕ

*
ದಕ್ಷಿಣದ ವಿಧಾನಸಭಾ ಕ್ಷೇತ್ರದ ಎಲ್ಲಾ 20 ವಾರ್ಡ್‌ಗಳು ಸೇರಿ ಕನಿಷ್ಠ 30 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತೇವೆ. ಅ. 31ಕ್ಕೆ ಟಿಕೆಟ್‌ ಅಂತಿಮಗೊಳಿಸಿ ಅಂದೇ ‘ಬಿ’ ಫಾರಂ ಕೊಡಲಾಗುವುದು.
– ಬಿ. ಚಿದಾನಂದಪ್ಪ, ಅಧ್ಯಕ್ಷ ಜೆಡಿಎಸ್‌ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT