ಗುರುವಾರ , ಮಾರ್ಚ್ 23, 2023
31 °C

ಭ್ರಷ್ಟ ಸಂಸದರಿಂದ ಕಾರ್ಪೊರೇಶನ್‌ ರಾಜಕೀಯ: ಕಾಂಗ್ರೆಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೇಂದ್ರದ ಮೇಲೆ ಒತ್ತಡ ತಂದು ಜಿಲ್ಲೆಗೆ ವಿಮಾನ ನಿಲ್ದಾಣ, ಕೈಗಾರಿಕೆಗಳನ್ನು ತರಬೇಕಿದ್ದ ಸಂಸದರು, ಪಾಲಿಕೆ ರಾಜಕೀಯ ಮಾಡಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ. ಶೆಟ್ಟಿ ಆರೋಪಿಸಿದರು.

‘ಜಿಲ್ಲೆಯ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಅದಕ್ಕೆ ಸಂಸದರೇ ಕಾರಣ. ಶಾಸಕ ಶಾಮನೂರು ಶಿವಶಂಕರ‍ಪ್ಪ, ಎಸ್‌.ಎಸ್‌. ಮಲ್ಲಿಕಾರ್ಜುನ, ಆಗಿನ ಪಾಲಿಕೆ ಆಯುಕ್ತ ನಾರಾಯಣಪ್ಪ, ನಾವೆಲ್ಲ ದೆಹಲಿ, ಕೋಲ್ಕತ, ಬೆಂಗಳೂರು ಸುತ್ತಿ ಒತ್ತಡ ತಂದಿದ್ದರಿಂದ ದಾವಣಗೆರೆಗೆ ಸ್ಮಾರ್ಟ್‌ಸಿಟಿ ಯೋಜನೆ ಬಂತು. ಈಗ ನಾನೇ ಮಾಡಿಸಿದ್ದು ಎಂದು ಹೇಳಿಕೊಳ್ಳುತ್ತಿರುವ ಸಂಸದರು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ಕಾಮಗಾರಿಗಳು ಕಳಪೆಯಾಗುತ್ತಿವೆ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆಡಳಿತ ನಡೆಸುವವರು ಎಲ್ಲ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಆದರೆ ಜಿ.ಎಂ. ಸಿದ್ದೇಶ್ವರ ಅವರು ಕಾಂಗ್ರೆಸ್‌ ‍ಪಕ್ಷದ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಬಿಡಿ, ಕನಿಷ್ಠ ಅವರದ್ದೇ ಪಕ್ಷದ ಶಾಸಕರಾದ ರವೀಂದ್ರನಾಥ್‌, ಮಾಡಾಳ್‌ ವಿರೂಪಾಕ್ಷಪ್ಪ ಮುಂತಾದವರನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಟೀಕಿಸಿದರು.

ಮೇಯರ್‌, ಆಯುಕ್ತರು ಸರ್ವಾಧಿಕಾರಿಗಳು: ಮೇಯರ್‌ ಮತ್ತು ಆಯುಕ್ತರ ನಡುವೆ ಒಪ್ಪಂದ ಏರ್ಪಟ್ಟಂತಿದೆ. ಗುತ್ತಿಗೆದಾರರು ಮತ್ತು ಪೂರೈಕೆದಾರರಿಂದ ಕಮಿಷನ್‌ ಪಡೆಯುತ್ತಿದ್ದಾರೆ. ಪಾಲಿಕೆ ಸದಸ್ಯರಿಗೆ ಯಾವುದೇ ಮಾಹಿತಿ ನೀಡದೇ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ ಎಂದರು.

‘ಹಿಂದೆ ಯಶವಂತರಾವ್‌ ಅವರು ನಗರಸಭೆ ಅಧ್ಯಕ್ಷರಾಗಿದ್ದ ವೇಳೆ ಅಕ್ರಮವಾಗಿ ಡೋರ್‌ನಂಬರ್‌ ನೀಡಿದ್ದರು. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರಿಂದ ಡೋರ್‌ ನಂಬರ್‌ ರದ್ದಾಗಿತ್ತು. ಈಗ ಮತ್ತೆ ನಗರಾಭಿವೃದ್ಧಿ ಇಲಾಖೆಯ ನಿಯಮ ಮೀರಿ ಡೋರ್‌ನಂಬರ್‌ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಅದು ನಿಜವಾದರೆ ಮತ್ತೆ ಲೋಕಾಯುಕ್ತಕ್ಕೆ ದೂರು ನೀಡುತ್ತೇವೆ’ ಎಂದು ಎಚ್ಚರಿಸಿದರು.

‘ಜಿಎಸ್‌ಟಿ ಅವರ ಅಪ್ಪನ ಮನೆಯ ದುಡ್ಡಲ್ಲ. ನಮ್ಮ ತೆರಿಗೆ ಹಣ ಎಂದು ಮನಮೋಹನ್‌ಸಿಂಗ್‌ ಪ್ರಧಾನಿ ಆಗಿರುವಾಗ ಕೆ.ಎಸ್‌. ಈಶ್ವರಪ್ಪ ಹೇಳಿಕೆ ನೀಡಿದ್ದರು. ಈಗ ಸುಮ್ಮನಿದ್ದಾರೆ. ಅವರು ರಾಜ್ಯದ ಪಾಲನ್ನು ತರಲು ಪ್ರಯತ್ನಿಸಬೇಕು’ ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಅಯೂಬ್‌ ಪೈಲ್ವಾನ್‌, ಚಂದ್ರ, ಗಡಿಗುಡಾಳ್‌ ಮಂಜುನಾಥ್‌ಮ ಅಬ್ದುಲ್‌ ಜಬ್ಬಾರ್‌, ರಾಜಾಭಕ್ತಿ, ಮುಜಾಹಿದ್‌, ಕವಿತಾ ಚಂದ್ರಶೇಖರ್‌ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು