ಮಂಗಳವಾರ, ನವೆಂಬರ್ 12, 2019
19 °C
ಸೆ. 29ರಿಂದ ದಾವಣಗೆರೆಯಲ್ಲಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ

ಧರ್ಮ ಸಮ್ಮೇಳನಕ್ಕೆ ಹಂದರಗಂಬ ಪೂಜೆ

Published:
Updated:
Prajavani

ದಾವಣಗೆರೆ: ಇಲ್ಲಿ ಮುಂದಿನ ತಿಂಗಳು ನಡೆಯಲಿರುವ ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ನಗರದ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಮಹಾಮಂಟಪದ ಹಂದರಗಂಬ ಪೂಜೆ ನೆರವೇರಿಸಲಾಯಿತು.

ಶಾಸಕ ಶಾಮನೂರು ಶಿವಶಂಕರಪ್ಪ ಪೂಜೆ ನೆರವೇರಿಸಿ ಮಾತನಾಡಿ, ‘ದಾವಣಗೆರೆಯಲ್ಲಿ ನಡೆಯಲಿರುವ ಈ ಧರ್ಮ ಸಮ್ಮೇಳನ ಯಶಸ್ವಿಯಾಗಲಿ. ಉತ್ಸವದಿಂದ ಶಾಂತಿ, ನೆಮ್ಮದಿ ಲಭಿಸುತ್ತದೆ. ಅದ್ದೂರಿಯಾಗಿ ನಡೆಯಲಿ’ ಎಂದು ಶುಭ ಹಾರೈಸಿದರು.

ಸೂಡಿ ಜುಕ್ತಿ ಹಿರೇಮಠದ ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ‘ದಾವಣಗೆರೆ ಮಹಾನಗರಕ್ಕೆ ಧರ್ಮ ಸಮ್ಮೇಳನ ನಡೆಸುವ ಅವಕಾಶ ಸಿಕ್ಕಿರುವುದು ಸೌಭಾಗ್ಯ. ರಂಭಾಪುರಿ ಪೀಠಕ್ಕೆ ದಾವಣಗೆರೆ ತವರು ಮನೆ ಇದ್ದಂತೆ. ಒಂದು ತಿಂಗಳಿನಿಂದ ಈ ಭಾಗದಲ್ಲಿ ಆಷಾಢಮಾಸದ ಇಷ್ಟಲಿಂಗಪೂಜೆ ಆರಂಭವಾಗಿರುವುದೇ ಇದಕ್ಕೆ ನಿದರ್ಶನ’ ಎಂದು ಹೇಳಿದರು.

‘ಧರ್ಮದ ವಿಚಾರಗಳು ಕ್ಲಿಷ್ಟಕರವಾಗಿರುವ ಈಗಿನ ಪರಿಸ್ಥಿತಿಯಲ್ಲಿ ಸತ್ಯ ಸಂದೇಶ ತಿಳಿಸುವ, ವೀರಶೈವ ಪರಂಪರೆ ಬಿತ್ತರಿಸುವ ಉದ್ದೇಶದಿಂದ 10 ದಿನಗಳ ದಸರಾ ಉತ್ಸವ ನಡೆಯಲಿದೆ. ದಸರಾ ಉತ್ಸವ ದುಷ್ಟಶಕ್ತಿಗಳ ದಮನ ಮಾಡಿ, ಶಿಷ್ಟಶಕ್ತಿಗಳ ರಕ್ಷಣೆ ಮಾಡುವಂತಹದ್ದು. ಶಿವಶಕ್ತಿಯರ ಆರಾಧನೆ ನೆನಪಿಸುವ ಉತ್ಸವವನ್ನು ದಾವಣಗೆರೆಯಲ್ಲಿ ಆಚರಿಸಲಾಗುತ್ತದೆ’ ಎಂದರು.

‘ಇಂದಿಗೂ ಕೆಲವರು ಧರ್ಮವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಧರ್ಮಕ್ಕೆ ತೊಂದರೆ ಕೊಡುವವರಿಗೆ ಪಾಠ ಕಲಿಸಲು ಈ ಕಾಲಘಟ್ಟದಲ್ಲಿ ಧರ್ಮಧ್ವಜ ಹಾರಿಸುವುದು ಅವಶ್ಯಕವಾಗಿದೆ. ರಂಭಾಪುರಿ ಪೀಠ ಈ ಕೆಲಸವನ್ನು ನೂರಾರು ವರ್ಷಗಳಿಂದ ಮಾಡುತ್ತಾ ಬಂದಿದೆ’ ಎಂದು ಹೇಳಿದರು. 

ಹರಪನಹಳ್ಳಿಯ ವರಸದ್ಯೋಜಾತ ಸ್ವಾಮೀಜಿ, ‘ದಸರಾ ನವರಾತ್ರಿ ಉತ್ಸವ ನಡೆಸುವ ಮುನ್ನ 6ರಿಂದ 7 ಜಿಲ್ಲೆಗಳ ಹೆಸರನ್ನು ಇಟ್ಟುಕೊಂಡು ಅರಿಕೆ ಮಾಡಿಕೊಳ್ಳುತ್ತಾರೆ. ದಾವಣಗೆರೆ ಜಿಲ್ಲೆಯೂ ಅದಕ್ಕೆ ಆಯ್ಕೆಯಾಗಿದೆ. ಈ ಉತ್ಸವ ಜನರ ಮನಸ್ಸಿನಲ್ಲಿ ಉಳಿಯುವಂತೆ ಯಶಸ್ವಿಯಾಗಿ ನಡೆಸಬೇಕು’ ಎಂದು ಸಲಹೆ ನೀಡಿದರು.

ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆಯ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನೆ ಶಿವಕುಮಾರ್ ಮಾತನಾಡಿ, ‘ಸೆ. 29ರಿಂದ ಅಕ್ಟೋಬರ್ 8ರವರೆಗೆ ದಾವಣಗೆರೆಯಲ್ಲಿ ದಸರಾ ನಡೆಯಲಿದೆ. 1983ರಲ್ಲಿ ದಾವಣಗೆರೆಯ ರೇಣುಕ ಮಂದಿರದಲ್ಲಿ ನಡೆದಿತ್ತು. 33 ವರ್ಷಗಳ ನಂತರ ಅಲ್ಲಿ ಮತ್ತೆ ನಡೆಯಲಿದ್ದು, ಎಲ್ಲಾ ಸಮಾಜದ ಮುಖಂಡರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಆವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಯಡಿಯೂರಿನ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ತಾವರಕೆರೆಯ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿಯ ಕೇದಾರ ಶಿವಶಾಂತವೀರ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷ ಅಥಣಿ ವೀರಣ್ಣ, ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆಯ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನೆ ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಉಮಾ ಎಂ.ಕೆ.ರಮೇಶ್, ಜಿ. ಶಿವಯೋಗಪ್ಪ ಇದ್ದರು.

ಪ್ರತಿಕ್ರಿಯಿಸಿ (+)