ಬಡವರಿಗೂ ಇದೆ ಬದುಕುವ ಹಕ್ಕು

7
ಕಾರ್ಮಿಕ ಮಹಿಳೆಯರಿಗೆ ಸೌಲಭ್ಯಗಳ ಮಾಹಿತಿ ಕಾರ್ಯಾಗಾರದಲ್ಲಿ ಕೆಂಗಬಾಲಯ್ಯ

ಬಡವರಿಗೂ ಇದೆ ಬದುಕುವ ಹಕ್ಕು

Published:
Updated:
Deccan Herald

ದಾವಣಗೆರೆ: ಬಡವನಾಗಿ ಹುಟ್ಟಿದ ಎಂಬ ಕಾರಣಕ್ಕೆ ಬದುಕುವ ಹಕ್ಕನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ದೇಶದ ಪ್ರತಿಯೊಬ್ಬ ಪ್ರಜೆಗೂ ಬದುಕುವ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ ಎಂದು ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ ಹೇಳಿದರು.

ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ಜಿಲ್ಲಾ ಸಮಿತಿಯಿಂದ ನಗರದ ರೋಟರಿ ಬಾಲಭವನದಲ್ಲಿ ಅಸಂಘಟಿತ ವಲಯದ ಮಹಿಳಾ ಕಾರ್ಮಿಕರ, ಕಟ್ಟಡ ಮತ್ತು ಇತರೆ ನಿರ್ಮಾಣ, ಮನೆ ಕೆಲಸ ಹಾಗೂ ಗುತ್ತಿಗೆ ಪೌರ ಕಾರ್ಮಿಕ ಮಹಿಳೆಯರಿಗೆ ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸೃಷ್ಟಿ ಪಂಚಭೂತಗಳದ್ದು, ಬದುಕು ನಮ್ಮದು. ಸೃಷ್ಟಿಯಲ್ಲಿ ತಾರತಮ್ಯ ಇಲ್ಲ. ಬದುಕಿನಲ್ಲಿ ಇದೆ. ಬಡತನ ಮತ್ತು ಅನಕ್ಷರತೆ ಅಸಮಾನತೆಗೆ ಕಾರಣ. ಅದರಿಂದ ಹೊರಗೆ ಬಾರದೆ ಬೆಳಕು ಕಾಣದು ಎಂದು ತಿಳಿಸಿದರು.

ಮನುಷ್ಯನಿಗೆ ಎಲ್ಲಿಯವರೆಗೆ ಸ್ವಾವಲಂಬನೆಯಿಂದ ಬದುಕು ಕಟ್ಟಿಕೊಳ್ಳಲು ಆರ್ಥಿಕ ಶಕ್ತಿ ಇರುವುದಿಲ್ಲವೋ ಅಲ್ಲಿಯವರೆಗೆ ಶೋಷಣೆ, ಅಸಮಾನತೆ ನಿಲ್ಲದು. ಅಕ್ಷರ ಜ್ಞಾನ ಇಲ್ಲದ ಮುಗ್ದ ಜನರಿಗೆ ಆರ್ಥಿಕವಾಗಿ ಮುಂದೆ ಬನ್ನಿ ಎಂದರೆ ಮುಂದೆ ಬರಲು ಸಾಧ್ಯವಿಲ್ಲ. ಸಂವಿಧಾನದ ಆಶಯದಂತೆ ಸಂಪತ್ತಿನ ಸಮಾನ ಹಂಚಿಕೆಯಾಗಬೇಕು. ಜನರು ತಮ್ಮ ಹಕ್ಕುಗಳನ್ನು ಕೇಳಬೇಕಿದ್ದರೆ ವಿದ್ಯೆ ಇರಬೇಕು, ಸಂಘಟಿತರಾಗಿರಬೇಕು ಎಂದರು.

ಅಧಿಕಾರಿಗಳು ಮನೆಗೆ ಬಾಗಿಲಿಗೆ ಸರ್ಕಾರದ ಸೌಲಭ್ಯ ತಲುಪಿಸುವುದಿಲ್ಲ. ಅದಕ್ಕಾಗಿ ಏನೆಲ್ಲ ಸೌಲಭ್ಯ ಇದೆ ಎಂಬುದನ್ನು ನಾವೇ ಅರಿತುಕೊಂಡು ಅಧಿಕಾರಿಗಳನ್ನು ಪ್ರಶ್ನಿಸಬೇಕು. ಮಕ್ಕಳಿಗೆ ವಿದ್ಯೆ ನೀಡಬೇಕು. ಬಾಲಕಾರ್ಮಿಕ ಪದ್ಧತಿಯಿಂದ ಮುಕ್ತರಾಗಿರಬೇಕು. ಹೆಣ್ಣು– ಗಂಡು ಭೇದ ಮಾಡಬಾರದು. ಬದುಕಿನಲ್ಲಿ ಗುರಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸ್ಲಂ ಜನಾಂದೋಲನದ ತುಮಕೂರು ಜಿಲ್ಲಾ ಸಂಚಾಲಕ ಶೆಟ್ಟಳಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ‘ಸಂವಿಧಾನದ ಆಶಯಗಳನ್ನು ಜಾರಿಗೆ ತಾರದ ಪ್ರಭುತ್ವ ಕೂಡ ಅಸಮಾನತೆಗೆ ಕಾರಣವಾಗಿದೆ. ಮನಸ್ಸಿನಲ್ಲಿ ಮಲೀನ ಇಟ್ಟುಕೊಂಡಿರುವ ಅಧಿಕಾರಿಗಳಿಗೂ ಅಸಮಾನತೆ ಹೋಗಲಾಡಿಸುವುದು ಬೇಕಾಗಿಲ್ಲ. ನಗರ ಸ್ವಚ್ಛತೆಯ ಕೆಲಸವನ್ನು ಕೀಳು, ಅಪವಿತ್ರ ಎಂದು ಮನಸ್ಸಿಗೆ ತುಂಬಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಸಂಘಟಿತ ಕಾರ್ಮಿಕರು ತಮ್ಮ ಹೊಟ್ಟೆಪಾಡಿಗೆ ಮಾತ್ರ ಕೆಲಸ ಮಾಡುವುದಲ್ಲ. ದೇಶದ ಪ್ರಗತಿಯಲ್ಲಿ ಅವರ ಕೊಡುಗೆಯೂ ಇದೆ. ಅದನ್ನು ಬಚ್ಚಿಡಲಾಗಿದೆ. ಉದಾರೀಕರಣ ಬಂದ ಮೇಲೆ ಕೆಲಸಕ್ಕೂ, ಮಾಡಿದ ಕೆಲಸಕ್ಕೆ ಸರಿಯಾದ ವೇತನಕ್ಕೂ ತೊಂದರೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆಯ ರಾಜ್ಯ ಸಂಚಾಲಕಿ ಚಂದ್ರಮ್ಮ ಅಧ್ಯಕ್ಷತೆ ವಹಿಸಿದ್ದರು. ಪರ್ಯಾಯ ಕಾನೂನು ವೇದಿಕೆಯ ಲೇಖಾ ವಿಷಯ ಮಂಡನೆ ಮಾಡಿದರು. ಮಾನವ ಹಕ್ಕುಗಳ ವೇದಿಕೆಯ ಕಾರ್ಯದರ್ಶಿ ಎಲ್‌.ಎಚ್‌. ಅರುಣ್‌ಕುಮಾರ್‌, ಕಾರ್ಮಿಕ ಇಲಾಖೆಯ ಇನ್‌ಸ್ಪೆಕ್ಟರ್‌ ಮಮತಾಜ್‌ ಬೇಗಂ, ಸ್ಲಂ ಜನಾಂದೋಲನದ ಜಿಲ್ಲಾ ಅಧ್ಯಕ್ಷ ಎಂ. ಶಬ್ಬೀರ್‌ ಸಾಬ್‌, ದೀಪಿಕಾ, ಎನ್‌. ಮೈತ್ರಿದೇವಿ ಉಪಸ್ಥಿತರಿದ್ದರು.

ಸ್ಲಂ ಜನಾಂದೋಲನ ಜಿಲ್ಲಾ ಸಂಚಾಲಕಿ ರೇಣುಕಾಯಲ್ಲಮ್ಮ ಸ್ವಾಗತಿಸಿದರು. ಚಿತ್ರದುರ್ಗ ಜಿಲ್ಲಾ ಸಂಚಾಲಕ ಮಂಜಣ್ಣ ವಂದಿಸಿದರು. ಅರುಣ್‌ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !