ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ. ಅಧ್ಯಕ್ಷೆ, ಸಿಇಒ ನಡುವೆ ಮುಸುಕಿನ ಗುದ್ದಾಟ

ಅಡಕತ್ತರಿಯಲ್ಲಿ ಸಿಲುಕಿದ ಸರ್ಕಾರಿ ಇಲಾಖೆ ಅಧಿಕಾರಿಗಳು
Last Updated 16 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್‌ ಮತ್ತು ಸಿಇಒ ಎಚ್‌. ಬಸವರಾಜೇಂದ್ರ ನಡುವಿನ ಮುಸುಕಿನ ಗುದ್ದಾಟ ಮುಂದುವರಿದ್ದು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.

ಈಚೆಗೆ ನಡೆದಿದ್ದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಸೇರಿ ಹಲವು ಸದಸ್ಯರು ಸಿಇಒ ಕಾರ್ಯವೈಖರಿ ಬಗ್ಗೆ ನೇರವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು. ಸದಸ್ಯರು ಮತ್ತು ಸಿಇಒ ನಡುವೆ ವಾಗ್ವಾದವೂ ನಡೆದಿತ್ತು. ಇದರ ಮುಂದುವರಿದ ಭಾಗದಂತೆ ಶುಕ್ರವಾರ ನಡೆದ ಮಾಸಿಕ ಕೆಡಿಪಿ ಸಭೆಯೂ ಕಂಡಿತು.

ಅಕ್ಕ–ಪಕ್ಕದಲ್ಲೇ ಕುಳಿತಿದ್ದರೂ ಅಧ್ಯಕ್ಷೆ ಹಾಗೂ ಸಿಇಒ ಪರಸ್ಪರ ಮಾತನಾಡದೆ ಇಲಾಖೆಗಳ ಅಧಿಕಾರಿಗಳ ಮೇಲೆ ಪ್ರಶ್ನೆಗಳ ಮಳೆ ಸುರಿಸುತ್ತಿದ್ದರು. ಮಾತಿನ ನಡುವೆ ಆಗಾಗ ‘ಟಾಂಟ್‌’ ನೀಡುತ್ತಿದ್ದರು. ಇದು ಜಿಲ್ಲಾ ಮಟ್ಟದ ಅಧಿಕಾರಿಗಳ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ.

ಕೃಷಿ ಇಲಾಖೆಯ ಮೇಲಿನ ಚರ್ಚೆಯ ವೇಳೆ ಕಟ್ಟಡ ನಿರ್ಮಾಣ ವಿಳಂಬವಾಗುತ್ತಿರುವ ಬಗ್ಗೆ ಆಕ್ಷೇಪಿಸಿದ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಜೆ. ಸವಿತಾ, ಜಗಳೂರಿನ ಎಇಇ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಸಿಇಒ, ‘ಅವರು ಬೇಕು; ಅವರ ಅಪ್ಪನೇ ಬೇಕು ಎಂದು ನೀವೇ ಕೇಳಿ ಹಾಕಿಸಿಕೊಳ್ಳುತ್ತೀರಿ. ಈಗ ನನ್ನನ್ನು ದೂರಬೇಡಿ’ ಎಂದು ಏರುಧ್ವನಿಯಲ್ಲಿ ಹೇಳಿದರು.

ಇದಕ್ಕೆ ಪ್ರತಿಯಾಗಿ ಅಧ್ಯಕ್ಷೆ, ‘ಸದಸ್ಯರು ಅಗತ್ಯ ಇರುವ ಕಡೆಗೆ ಕೆಲಸ ಮಾಡಲು ಹಣ ನೀಡುವಂತೆ ಕೇಳುತ್ತಾರೋ ಅಥವಾ ತಮ್ಮ ಮನೆಯ ಕೆಲಸಕ್ಕೆ ಕೇಳುತ್ತಾರೋ’ ಎಂದು ಅಧಿಕಾರಿಯನ್ನು ಪ್ರಶ್ನಿಸುವ ಮೂಲಕ ಸಿಇಒಗೆ ಟಾಂಗ್‌ ನೀಡಿದರು.

ತೋಟಗಾರಿಕೆ ಇಲಾಖೆಯ ಮೇಲಿನ ಚರ್ಚೆಯ ವೇಳೆ ಕಳೆದ ಸಾಲಿನಲ್ಲಿ ಹನಿ ನೀರಾವರಿಗೆ ಬಂದ ಅನುದಾನ ವಾಪಸ್ಸಾಗಿರುವ ಕುರಿತು ಅಧ್ಯಕ್ಷೆ ಹಾಗೂ ಉಪಾಧ್ಯಕ್ಷ ಸುರೇಂದ್ರ ನಾಯ್ಕ ಪ್ರಶ್ನಿಸಿದರು. ಈ ಬಗ್ಗೆ ತೋಟಗಾರಿಕೆ ಅಧಿಕಾರಿ ವಿವರಣೆ ನೀಡುತ್ತಿದ್ದಾಗ ಬೇಗನೆ ಮುಗಿಸುವಂತೆ ಸಿಇಒ ತಾಕೀತು ಮಾಡಿದರು. ಆಗ ಸಿಟ್ಟಿಗೆದ್ದ ಅಧ್ಯಕ್ಷೆ, ‘ನಿಮಗೆ ಅರ್ಜೆಂಟ್‌ ಇದ್ದರೆ ಹೋಗಬಹುದು. ಜಿಲ್ಲಾ ಪಂಚಾಯಿತಿಗಿಂತಲೂ ನೀವು ಜಿಲ್ಲಾಡಳಿತದ ಜವಾಬ್ದಾರಿಯನ್ನೇ ಹೆಚ್ಚು ತೆಗೆದುಕೊಂಡಂತಿದೆ’ ಎಂದು ಗುಡುಗಿದರು. ಇದಕ್ಕೆ ಎದಿರೇಟು ನೀಡಿದ ಸಿಇಒ, ‘ಕೆಡಿಪಿ ಸಭೆಯಲ್ಲಿ ಮೊದಲು ಪ್ರಗತಿಯ ವಿವರ ನೀಡಬೇಕು. ಅದನ್ನು ಬಿಟ್ಟು ಹಳೆಯ ಕಥೆ ಹೇಳುತ್ತೀರಲ್ಲ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಮೇಲೆ ರೇಗಿದರು.

ಮಧ್ಯಾಹ್ನ 1 ಗಂಟೆ ವೇಳೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೆರೆ ಪರಿಶೀಲನಾ ಸಭೆಗೆ ತೆರಳಬೇಕು ಎಂದು ಸಿಇಒ ಹೊರಡಲು ಮುಂದಾದರು. ಆಗ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರು, ‘ನಿಮಗೆ ಜಿಲ್ಲಾ ಪಂಚಾಯಿತಿ ವಿಚಾರ ಮುಖ್ಯವಲ್ಲ. ಅಲ್ಲಿಗೆ ಹೋಗುವುದಿದ್ದರೆ ಕೆಡಿಪಿ ಸಭೆಯನ್ನು ಏಕೆ ಇಟ್ಟುಕೊಳ್ಳಬೇಕಾಗಿತ್ತು? ಮೊದಲು ನಮ್ಮ ಹಳ್ಳಿಗಳ ಕಡೆಗೆ ಆದ್ಯತೆ ನೀಡಿ’ ಎಂದು ಗದರಿದರು.

ತಕ್ಷಣವೇ ಸಿಇಒ, ಜಿಲ್ಲಾಧಿಕಾರಿ ಕಚೇರಿಗೆ ಮೊಬೈಲ್‌ ಕರೆ ಮಾಡಿ ಸಭೆಗೆ ಬರಲು ಅಧ್ಯಕ್ಷೆ ಅನುಮತಿ ನೀಡುತ್ತಿಲ್ಲ ಎಂದು ದೂರಿದರು. ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ಹೊರಟಾಗ, ‘ಅಧ್ಯಕ್ಷೆ ಅನುಮತಿ ನೀಡದಿರುವುದಿಂದ ನಾನು ಬರುವುದು ವಿಳಂಬವಾಗಲಿದೆ ಎಂದು ಜಿಲ್ಲಾಧಿಕಾರಿಗೆ ತಿಳಿಸಿ’ ಎಂದು ಸಿಇಒ ಬಹಿರಂಗವಾಗಿಯೇ ಉಸುರಿದರು.

ಕ್ಷೇತ್ರ ಭೇಟಿಗೆ ತಾಕೀತು

ಅಧ್ಯಕ್ಷೆ ಬರುವ ಪೂರ್ವದಲ್ಲೇ ಸಭಾಂಗಣಕ್ಕೆ ಬಂದ ಸಿಇಒ ಬಸವರಾಜೇಂದ್ರ, ಸರ್ಕಾರಿ ಇಲಾಖೆಗಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ನೀವು ಯಾರೂ ಕ್ಷೇತ್ರ ಭೇಟಿ ಮಾಡಿ ಪರಿಶೀಲನೆ ನಡೆಸುತ್ತಿಲ್ಲ. ನಾನು ಅನಿರೀಕ್ಷಿತ ಭೇಟಿ ನೀಡಿದಾಗ ಶಾಲೆಯೊಂದರಲ್ಲಿ ನೀರು ಇರಲಿಲ್ಲ. ಪಿಎಚ್‌ಸಿಗಳಲ್ಲಿ ವೈದ್ಯರ ಕೊರತೆ ಬಗ್ಗೆ ದೂರುಗಳು ಬರುತ್ತಿವೆ. ಡಿಡಿಪಿಐ, ಡಿಎಚ್‌ಒ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ವಿಶೇಷವಾಗಿ ಹೆಚ್ಚಿನ ಅವಧಿಯನ್ನು ಕ್ಷೇತ್ರ ಭೇಟಿಗೆ ನೀಡಬೇಕು’ ಎಂದು ತಾಕೀತು ಮಾಡಿದರು.

‘ಕೂಡಲೇ ಟೆಂಡರ್‌ಗಳನ್ನು ಕರೆದು ಅಕ್ಟೋಬರ್‌ ಒಳಗೆ ಶೇ 50ರಷ್ಟು ಸಾಧನೆ ಮಾಡಬೇಕು. ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳಬೇಕು’ ಎಂದು ಅಧ್ಯಕ್ಷೆ ಸಭೆಗೆ ಬರುವ ಮುನ್ನವೇ ಚಾಟಿ ಬೀಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT