ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಣೆ ಕುಸಿತ: ಭತ್ತ ಬೆಳೆದು ಬಸವಳಿದ ರೈತ

ತೆರೆಯದ ಖರೀದಿ ಕೇಂದ್ರ; ಬೆಂಬಲ ಬೆಲೆಯೂ ಮರೀಚಿಕೆ
Last Updated 3 ಜೂನ್ 2021, 3:58 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ನೀರಾವರಿ ಬೇಸಿಗೆ ಭತ್ತದ ಕಟಾವು ಎಲ್ಲೆಡೆ ಭರದಿಂದ ಸಾಗಿದೆ. ತೀವ್ರ ಧಾರಣೆ ಕುಸಿತದಿಂದ ರೈತರಿಗೆ ನಷ್ಟದ ಆತಂಕ ಎದುರಾಗಿದೆ.

ಲಾಕ್‌ಡೌನ್‌ನಿಂದ ಸರಿಯಾದ ಮಾರುಕಟ್ಟೆ ಇಲ್ಲದಿರುವುದು, ಬೆಳೆ ಸಾಗಿಸಲು ವಾಹನಗಳಿಗೆ ಹೆಚ್ಚಿನ ಬಾಡಿಗೆ ನೀಡಬೇಕು. ಡಿಸೇಲ್‌ ಬೆಲೆ ಏರಿಕೆ, ಅಕ್ಕಿ ಗಿರಣಿ ಮುಚ್ಚಿರುವುದು ಹಾಗೂ ‌ಗಿರಣಿ ಮಾಲೀಕರು ಭತ್ತ ಖರೀದಿಗೆ ಮುಂದಾಗದೇ ಇರುವುದು, ಖರೀದಿ ಕೇಂದ್ರ ತೆರೆಯದಿರುವುದು, ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಿದಿರುವುದು..ಹೀಗೆ ಹಲವು ಕಾರಣಗಳಿಂದ ಭತ್ತ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ.

‘ಗಗನಕ್ಕೇರುತ್ತಿರುವ ಬೆಳೆ ವೆಚ್ಚ, ಅಸ್ಥಿರ ಧಾರಣೆ, ಬೇಡಿಕೆ ಕುಸಿತದಿಂದ ಭತ್ತದ ಬೆಳೆ ಬೆವರಿಳಿಸಿದೆಯೇ ಹೊರತು ಆರ್ಥಿಕ ಸ್ವಾವಲಂಬನೆ ಮರೀಚಿಕೆ. ನೀರಾವರಿ ಜಮೀನ್ದಾರ ಎಂಬ ಅಹಂಗೆ ಧಕ್ಕೆ ಒದಗಿದೆ. ತಂತ್ರಜ್ಞಾನದ ಯುಗದಲ್ಲಿಯೂ ರೈತರ ತಗುಲುವ ಖರ್ಚು, ಧಾರಣೆ ನಿಗದಿಯಂತಹ ಅಂಶಗಳ ಬಗ್ಗೆ ಯೋಜಿತ ಮಾರ್ಗಸೂಚಿಗಳಿಲ್ಲ. ಅನ್ನ ನೀಡುವ ರೈತರಿಗೆ ಉರುಳಾಗುವ ತೀರ್ಮಾನಗಳ ಬಗ್ಗೆ ಫಲಪ್ರದ ಬದ್ಧತೆ ತೋರಬೇಕು’ ಎಂದು ಒತ್ತಾಯಿಸುತ್ತಾರೆ
ರೈತ ಜಗದೀಶ್.

‘ಹೋಬಳಿ ವ್ಯಾಪ್ತಿಯಲ್ಲಿ 2800 ಹೆಕ್ಟೇರ್ ನೀರಾವರಿ ಭತ್ತ ಬೆಳೆಯಲಾಗುತ್ತಿದೆ. ಬಹು ಬೇಡಿಕೆ ಎಂದು ಪರಿಗಣಿಸಿ ಆರ್‌ಎನ್ಆರ್, ಸೋನಾ, ಶ್ರೀರಾಮ್ ಸೋನಾ ತಳಿಗಳನ್ನು ಬೆಳೆದಿದ್ದೇವೆ. ಆರ್‌ಎನ್ಆರ್ ತಳಿ ಒಂದು ಕ್ವಿಂಟಲ್‌ಗೆ ₹1500 ಆಸುಪಾಸಿನಲ್ಲಿದೆ. ಶ್ರೀರಾಮ ಸೋನಾ ₹1700 ದರ ಇದೆ. ಕೊಯ್ಲಿನ ನಂತರ ಧಾರಣೆ ಕುಸಿಯುವ ಆತಂಕ ಇದೆ. ಕಳೆದ ಬಾರಿ ಪ್ರತಿ ಕ್ವಿಂಟಲ್‌ಗೆ ₹1900 ರಿಂದ ₹2000ವರೆಗೆ ಖರೀದಿಸಲಾಗಿತ್ತು. 15 ಎಕರೆ ಮಿಟ್ಟ ಹಿಡಿದು ಭತ್ತ ಬೆಳೆದಿದ್ದೇನೆ. ಇದೇ ಧಾರಣೆ ಇದ್ದಲ್ಲಿ ₹ 2 ಲಕ್ಷಕ್ಕಿಂತ ಹೆಚ್ಚು ನಷ್ಟವಾಗುತ್ತದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ಗೆದ್ದಲಹಟ್ಟಿ ರೈತ ಸಂತೋಷ್.

‘ಜಮೀನಿನ ಗುಣಲಕ್ಷಣ ಅವಲಂಬಿಸಿ ಪ್ರತಿ ಎಕರೆಗೆ 20ರಿಂದ 25ಕ್ವಿಂಟಲ್ ಇಳುವರಿ ಬರಲಿದೆ. ಗಗನಕ್ಕೇರಿದ ಬಿತ್ತನೆ ಬೀಜ, ಗೊಬ್ಬರದ ಬೆಲೆಯಿಂದ ಎಕರೆಗೆ ₹20 ಸಾವಿರಕ್ಕಿಂತ ಹೆಚ್ಚು ಖರ್ಚು ತಗುಲುತ್ತಿದೆ. ಸಂಗ್ರಹಿಸಿಡಲು ಸ್ಥಳದ ಕೊರತೆ, ಮಳೆಗಾಲ ಆರಂಭವಾದರೆ ಸಮಸ್ಯೆ ಉಲ್ಬಣವಾಗಲಿದೆ. ಬಹುಪಾಲು ರೈತರಿಗೆ ನಷ್ಟವಾಗಲಿದೆ’ ಎನ್ನುತ್ತಾರೆ ಮಲ್ಲಾಪುರ ರೈತ ಕರಿಯಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT