ಮಂಗಳವಾರ, ಜುಲೈ 27, 2021
27 °C

ಕಿರ್ಲೋಸ್ಕರ್ ಕಂಪನಿ ಜಾಗದಲ್ಲಿ ಖಾಸಗಿ ಬಡಾವಣೆ;ನಿರಾಕ್ಷೇಪಣಾ ಪತ್ರ ನೀಡದಂತೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಹರಿಹರದ ಮೈಸೂರು ಕಿರ್ಲೋಸ್ಕರ್ ಕಂಪನಿಯ ಜಾಗದಲ್ಲಿ ಖಾಸಗಿಯವರು ನಿರ್ಮಿಸುತ್ತಿರುವ ಬಡಾವಣೆಗಳಿಗೆ ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡಿರುವುದನ್ನು ತಡೆಹಿಡಿಯಬೇಕು ಎಂದು ಹರಿಹರ ಶಾಸಕ ಎಸ್.ರಾಮಪ್ಪ ಅವರು ಧೂಡಾ ಅಧ್ಯಕ್ಷರು ಹಾಗೂ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

‘ಹರಿಹರದ ಹಳೇಹರ್ಲಾಪುರ ಗ್ರಾಮದ 220 ಎಕರೆ ಜಮೀನು ಮೈಸೂರು ಕಿರ್ಲೋಸ್ಕರ್ ಕಂಪನಿ ಹಾಗೂ ಹರಿಹರ ನಗರಸಭೆಯ ಸರ್ಕಾರಿ ಜಮೀನುಗಳ ಜಂಟಿ ಪಹಣಿ ಖಾತೆ ಇದ್ದು, ಈ ಜಮೀನಿನ ಪೈಕಿ 203 ಎಕರೆ ಕಿರ್ಲೋಸ್ಕರ್ ಕಂಪನಿಯ ಜಮೀನಿನಲ್ಲಿ 156 ಎಕರೆ ಜಮೀನನ್ನು ಸರ್ಕಾರದ ಲಿಕ್ವಿಡೇಟರ್ ಮುಖಾಂತರ 2000ನೇ ಇಸವಿಯಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಹರಾಜಿನಲ್ಲಿ ಪಡೆದಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

‘ಹರಾಜು ಪಡೆದಿರುವ ಜಮೀನಿನಲ್ಲಿ ಖಾಸಗಿ ಬಡಾವಣೆಗಳು ನಿರ್ಮಾಣ ಹಂತದಲ್ಲಿದ್ದು, ಲಿಕ್ವಿಡೇಟರ್‌ರವರು ಸರ್ವೆ ನಂಬರ್‌ಗಳ ಹದ್ದುಬಸ್ತನ್ನು ಯಾವ ಏಜೆನ್ಸಿ ಮುಖಾಂತರ ಮಾಡಿದ್ದಾರೆ ಎಂಬುದರ ಮಾಹಿತಿ ಇಲ್ಲದೇ ಹರಿಹರ ನಗರಸಭೆಗೆ ಸೇರಿದ 6 ಎಕರೆ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಖಾಸಗಿಯವರು ಸಂಬಂಧಿಸಿದ ಇಲಾಖೆಗಳಿಂದ ಈಗಾಗಲೇ ನಿರಾಕ್ಷೇಪಣಾ ಪತ್ರ ಪಡೆದುಕೊಂಡಿದ್ದರೆ ಅವುಗಳನ್ನು ರದ್ದುಪಡಿಸಬೇಕು’ ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

‘ಸರ್ಕಾರದ ಸ್ವತ್ತನ್ನು ಹದ್ದುಬಸ್ತು ಮಾಡದೇ ಹರಿಹರ ನಗರಸಭೆಯ ಸ್ವತ್ತನ್ನು ಒತ್ತುವರಿ ಮಾಡಿ ಯಾವುದೇ ಇಲಾಖೆಯ ಅನುಮತಿ ಇಲ್ಲದೇ ಪಿಡಬ್ಲುಡಿ ರಸ್ತೆಯಿಂದ 150 ಅಡಿವರೆಗೆ ಅಳತೆ ಮಾಡಿ ಚರಂಡಿ ನಿರ್ಮಾಣ ಮಾಡದೇ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಿದ್ದಾರೆ.  ಬಡಾವಣೆಯ ಅಂತಿಮ ಅನುಮೋದನೆ ಇಲ್ಲದೇ 24X7 ಕುಡಿಯುವ ನೀರಿನ ಸಂಪರ್ಕವನ್ನು ಕಾನೂನುಬಾಹಿರವಾಗಿ ಕಲ್ಪಿಸಿರುವುದು ಹಾಗೂ ಈ ನೀರನ್ನು ತಮ್ಮ ಬಡಾವಣೆ ಅಭಿವೃದ್ಧಿಗೆ ಬಳಸುತ್ತಿರುವುದು ಕಂಡು ಬಂದಿದೆ’ ಎಂದು ಆರೋಪಿಸಿದ್ದಾರೆ.

‘ಈಗಾಗಲೇ ಕೆಇಬಿ, ಬಿಯುಡಬ್ಲುಎಸ್‌ಎಸ್‌ಬಿ ಇಲಾಖೆಯ ಕೆಲಸಗಳಲ್ಲಿ ಹಲವು ನ್ಯೂನ್ಯತೆಗಳಿದ್ದರೂ ಬಡಾವಣೆ ಮಾಲೀಕರು ಸ್ಥಳೀಯ ಅಧಿಕಾರಿಗಳಿಗೆ ಒತ್ತಡ ಹೇರಿ ಅಥವಾ ಇನ್ನಿತರೆ ಆಮಿಷವೊಡ್ಡಿ ನಿರಾಕ್ಷೇಪಣಾ ಪತ್ರ ಪಡೆದುಕೊಂಡಿದ್ದಾರೆ’ ಎಂದು ಆಪಾದಿಸಿದ್ದಾರೆ.

‘ಸರ್ಕಾರದಿಂದ ಸರ್ವೇ ಕಾರ್ಯ, ಹದ್ದುಬಸ್ತು ಮಾಡಿ ಇಲಾಖೆಯ ನಿಯಮದಂತೆ ಕಾರ್ಯ ಪೂರ್ಣಗೊಳಿಸಿದ ಬಳಿಕ ಇಲಾಖಾವಾರು ಜಂಟಿ ಸಮೀಕ್ಷೆ ಮಾಡಿದ ಬಳಿಕವೇ ನಿರಾಕ್ಷೇಪಣಾ ಪತ್ರ ನೀಡಬೇಕು’ ಎಂದು ಅವರು ಧೂಡಾ ಆಯುಕ್ತರನ್ನು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು