ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಗಟೇರಿ ಆಸ್ಪತ್ರೆಯಲ್ಲಿ ಕೊರತೆಗಳದೇ ರೋಗ!

ಶಿಥಿಲ ಕಟ್ಟಡ l ಕೆಲವೇ ಸಿಬ್ಬಂದಿ l ವೈದ್ಯಕೀಯ ಪ್ರಮಾಣ ಪತ್ರ ಪಡೆಯಲು ನಾಗರಿಕರ ಪರದಾಟ
Last Updated 17 ನವೆಂಬರ್ 2019, 20:49 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆಯ ತಿಪ್ಪಮ್ಮ ಅವರ ಪತಿಗೆ ಹೃದಯ ಕಾಯಿಲೆ. ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಬಂದಿದ್ದರು. ಡಾಕ್ಟರ್‌ ಬರೆದುಕೊಟ್ಟಿದ್ದ ಕೆಲವು ಔಷಧಗಳು ಅಲ್ಲೇ ಸಿಕ್ಕಿದವು. ಉಳಿದವನ್ನು ಹೊರಗಿನ ಔಷಧ ಅಂಗಡಿಗಳಿಂದ ಕೊಂಡು ತರುವುದು ಅನಿವಾರ್ಯವಾಗಿತ್ತು. ಕೈಯಲ್ಲಿ ಹಣ, ಮೊಬೈಲ್‌ ಏನೂ ಇಲ್ಲದ ಅವರು ಉಳಿದ ಔಷಧ ತರುವುದಕ್ಕಾಗಿ ಹಣ ಹೊಂದಿಸಲು ಪರದಾಡುತ್ತಿದ್ದರು.

‘ಪ್ರತಿ ಬಾರಿ ಬಂದಾಗಲೂ ಡಾಕ್ಟರ್‌ ಬರೆದುಕೊಟ್ಟ ಹಲವು ಔಷಧಗಳನ್ನು ಹೊರಗಿನಿಂದ ತರಬೇಕಾಗುತ್ತದೆ. ಎಲ್ಲವೂ ಇಲ್ಲಿ ಲಭ್ಯವಿಲ್ಲ. ಕುಡಿಯುವ ನೀರನ್ನೂ ಕ್ಯಾಂಟೀನ್‌ನಿಂದ ತಂದುಕೊಳ್ಳಬೇಕಾಗುತ್ತದೆ’ ಎಂದು ಅವರು ಅಳಲು ತೋಡಿಕೊಂಡರು.

ಆಸ್ಪತ್ರೆಯ ಹೊರ ಆವರಣದ ಫುಟ್‌ಪಾತ್‌ನಲ್ಲಿ ರೋಗಿಯೊಬ್ಬರು ಶಾಲು ಹೊದ್ದು ಮಲಗಿದ್ದರು. ‘ಚಿತ್ರದುರ್ಗ ಜಿಲ್ಲೆಯ ರಂಗೇನಹಳ್ಳಿಯಿಂದ ಬಂದಿದ್ದು, ಕಿಡ್ನಿ ವೈಫಲ್ಯದಿಂದಾಗಿ ವಾರಕ್ಕೆರಡು ಬಾರಿ ಡಯಾಲಿಸಿಸ್‌ ಮಾಡಿಸಬೇಕಿದೆ. ಚಿತ್ರದುರ್ಗದ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಯಂತ್ರ ಇದ್ದರೂ, ರೋಗಿಗಳ ದಟ್ಟಣೆಯಿಂದಾಗಿ ಅಲ್ಲಿ ಸೌಲಭ್ಯ ಸಿಗದೇ ಇಲ್ಲಿಗೆ ಬಂದಿದ್ದೇವೆ. ಮಧ್ಯಾಹ್ನ 1ರ ವರೆಗೆ ಕಾಯಬೇಕಿದೆ’ ಎಂದು ಅವರ ಸೊಸೆ ತಿಳಿಸಿದರು. ನಡೆದಾಡಲೂ ಸಾಧ್ಯವಾಗದಷ್ಟು ಸುಸ್ತಾಗಿದ್ದ ಅವರು ವಿಶ್ರಾಂತಿ ಪಡೆಯಲು ಒಳಗೆ ಸೂಕ್ತ ಜಾಗವಿಲ್ಲದ ಕಾರಣ ಆಸ್ಪತ್ರೆಯ ಹೊರ ಆವರಣದ ಫುಟ್‌ಪಾತ್‌ನಲ್ಲಿ ಮಲಗಿದ್ದರು.

ಮಧ್ಯ ಕರ್ನಾಟಕದ ದೊಡ್ಡ ಆಸ್ಪತ್ರೆಯಾದ ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯು 930 ಬೆಡ್‌ಗಳ ಸಾಮರ್ಥ್ಯದ್ದು. ಈ ಆಸ್ಪತ್ರೆಗೆ ನಗರ, ಜಿಲ್ಲೆಯಿಂದಷ್ಟೇ ಅಲ್ಲದೇ ಹಾವೇರಿ, ಚಿತ್ರದುರ್ಗ, ತುಮಕೂರು, ಶಿವಮೊಗ್ಗ ಜಿಲ್ಲೆಗಳಿಂದಲೂ ಬಡ ಕೂಲಿ ಕಾರ್ಮಿಕರು, ರೈತರು ಬರುವುದು ಸಾಮಾನ್ಯ. 29.5 ಎಕರೆ ಪ್ರದೇಶದಲ್ಲಿ 1976ರಲ್ಲಿ ನಿರ್ಮಾಣವಾಗಿರುವ ಈ ಆಸ್ಪತ್ರೆಯ ಕಟ್ಟಡ ಈಗ ಶಿಥಿಲಾವಸ್ಥೆಗೆ ತಲುಪಿದೆ. ಬರುವ ರೋಗಿಗಳ ಸಂಖ್ಯೆ ಏರುತ್ತಿದ್ದು, ಅದಕ್ಕೆ ತಕ್ಕಂತೆ ಸೌಲಭ್ಯ ಮಾತ್ರ ಏರುತ್ತಿಲ್ಲ.

ಆಸ್ಪತ್ರೆಯ ಒಳ ವರಾಂಡಾಗಳಲ್ಲಿ ಕಲ್ಲು ಬೆಂಚುಗಳ ವ್ಯವಸ್ಥೆ ಇದೆಯಾದರೂ, ರೋಗಿಗಳು ಹಾಗೂ ಅವರ ಸಂಬಂಧಿಗಳ ಸಂಖ್ಯೆ ಅಪಾರವಾಗಿರುವ ಕಾರಣ ಹಲವು ರೋಗಿಗಳು ಆಸ್ಪತ್ರೆಯ ಹೊರಗಿನ ಫುಟ್‌ಪಾತ್‌, ಖಾಲಿ ಜಾಗಗಳಲ್ಲಿ ವಿಶ್ರಾಂತಿ ಪಡೆಯುತ್ತಿರುವ ದೃಶ್ಯ ಸಾಮಾನ್ಯ. ಮಂಡಿಪೇಟೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿಯೂ ಇದೇ ದೃಶ್ಯ. ಹಸುಗೂಸುಗಳನ್ನು ಎತ್ತಿಕೊಂಡ ಮಹಿಳೆಯರು ಆಸ್ಪತ್ರೆಯ ದ್ವಾರದ ಜಗುಲಿಯ ಮೇಲೆ ಬಿಸಿಲಿದ್ದರೂ ಅಲ್ಲಲ್ಲಿ ಕುಳಿತಿರುವ ದೃಶ್ಯ ಸದಾ ಕಂಡು ಬರುತ್ತದೆ. ಈ ಎರಡೂ ಆಸ್ಪತ್ರೆಗಳ ಆವರಣದಲ್ಲಿ ಹಲವೆಡೆ ಎಲೆ ಅಡಿಕೆ ಜಗಿದು ಉಗುಳಿದ ಕಲೆಗಳು, ಸ್ವಚ್ಛತೆಯ ಕೊರತೆ ಇರುವುದು, ಮನಬಂದಂತೆ ಪ್ಲಾಸ್ಟಿಕ್‌ ಬಳಸಿ ಎಸೆಯುವುದು ಮೊದಲಾದ ಪ್ರವೃತ್ತಿ ಸಾಮಾನ್ಯ ಎಂಬಂತಾಗಿದೆ. ಆಸ್ಪತ್ರೆಯ ಆವರಣದಲ್ಲಿ ಪ್ಲಾಸ್ಟಿಕ್‌ ನಿಷೇಧ ಆಗಿಲ್ಲವೇ ಎಂಬ ಪ್ರಶ್ನೆಯೂ ಮೂಡುತ್ತದೆ.

‘ನಮ್ಮ ಸಂಬಂಧಿಕರೊಬ್ಬರನ್ನು ಈಚೆಗೆ ಇಲ್ಲಿ ಅಡ್ಮಿಟ್‌ ಮಾಡಲಾಗಿತ್ತು. ಆದರೆ ವೈದ್ಯರು ನಿರ್ಲಕ್ಷ್ಯ ತೋರಿದ ಕಾರಣ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗೆ ಹೋಗಬೇಕಾಯಿತು. ಖಾಸಗಿ ಲಾಬಿ ತೀವ್ರವಾಗುತ್ತಿರುವ ಇಂದಿನ ದಿನಗಳಲ್ಲಿ ಸಾರ್ವಜನಿಕ ಆಸ್ಪತ್ರೆಯನ್ನು ದುರ್ಬಲವಾಗಲು ಬಿಡಬಾರದು. ಇದರಿಂದ ಬಡವರು ಪರದಾಡುವ ಸ್ಥಿತಿ ಬರುತ್ತದೆ. ಹೀಗಾಗಿ ಜಿಲ್ಲಾ ಆಸ್ಪತ್ರೆಯನ್ನು ಸುಸಜ್ಜಿತಗೊಳಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಪ್ರಧಾನ ಕಾರ್ಯದರ್ಶಿ ಕರಿಬಸಪ್ಪ ಎಂ. ಒತ್ತಾಯಿಸುತ್ತಾರೆ.

‘ವೃದ್ಧಾಪ್ಯ ಪಿಂಚಣಿಗಾಗಿ ತಪಾಸಣೆ ನಡೆಸಿ ಪ್ರಮಾಣಪತ್ರ ಕೊಡಬೇಕು. ಚಿಗಟೇರಿ ಆಸ್ಪತ್ರೆಯಲ್ಲಿ ಇದಕ್ಕೆ ಕನಿಷ್ಠ ₹ 300ನ್ನಾದರೂ ವಸೂಲಿ ಮಾಡುತ್ತಾರೆ. ಹಲವು ದಿನಗಳ ಕಾಲ ನಾವು ಹೋರಾಟ ಮಾಡಿದರೂ, ಅದು ನಿಂತಿಲ್ಲ. ಈಗ ಪಡೆದ ಹಣ‌ಕ್ಕೆ ರಸೀದಿ ಕೊಡುತ್ತಿದ್ದಾರೆ. ಜೀವನಕ್ಕಾಗಿ ಪಿಂಚಣಿ ಹಣವನ್ನೇ ಅವಲಂಬಿಸಿದ ಹಲವರು ಇದರಿಂದ ಹೈರಾಣಾಗಿ ಹೋಗುತ್ತಿದ್ದಾರೆ. ಬಡವರಿಗೆ ವಯಸ್ಸಿನ ಪ್ರಮಾಣ ಪತ್ರವನ್ನು ಉಚಿತವಾಗಿ ನೀಡಬೇಕು’ ಎಂದು ಅವರು ಮನವಿ ಮಾಡಿದರು.

‘ಔಷಧಗಳ ಪೂರೈಕೆ ಸರ್ಕಾರದ ಮಟ್ಟದಿಂದ ಆಗಬೇಕಾದ ಪ್ರಕ್ರಿಯೆ. ಇಲ್ಲಿ ಸುತ್ತಲೂ 5 ಜಿಲ್ಲೆಗಳಿಂದಲೂ ರೋಗಿಗಳು ಬರುತ್ತಿರುವುದರಿಂದ ಯಾವಾಗಲೂ ನಮ್ಮ ಅಂದಾಜಿಗಿಂತ ಬೇಡಿಕೆ ಹೆಚ್ಚುತ್ತ ಹೋಗುತ್ತಿದೆ. ಪ್ರತಿದಿನ ಹೊರರೋಗಿಗಳ ಸಂಖ್ಯೆ 2,000, ಒಳರೋಗಿಗಳ ಸಂಖ್ಯೆ 600 ದಾಟುತ್ತದೆ. ಹೀಗಾಗಿ ಎಷ್ಟೇ ಸೌಲಭ್ಯಗಳಿದ್ದರೂ ಅವರು ಸಾಲದಾಗುತ್ತಿವೆ. ಔಷಧ ಟೆಂಡರ್‌ ಪ್ರಕ್ರಿಯೆಯ ಇ–ಪೋರ್ಟಲ್‌ ಲಾಕ್‌ ಆಗಿದ್ದ ಕಾರಣದಿಂದಲೂ ಔಷಧ ಪೂರೈಕೆಯಲ್ಲಿ ಸಮಸ್ಯೆಯಾಗಿತ್ತು. ಆದರೂ, ಸಾಧ್ಯವಾದಷ್ಟೂ ರೋಗಿಗಳಿಗೆ ಉಚಿತ ಔಷಧ ಒದಗಿಸಲು ಯತ್ನಿಸುತ್ತಿದ್ದೇವೆ’ ಎಂದು ಚಿಗಟೇರಿ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್‌ ಪ್ರತಿಕ್ರಿಯಿಸಿದ್ದಾರೆ.

ಬಯೊ ಮೆಡಿಕಲ್‌ ತ್ಯಾಜ್ಯದ ವಿಲೇವಾರಿ ಸರಿಯಾಗುತ್ತಿಲ್ಲ ಎಂಬ ಆರೋಪವನ್ನು ನಿರಾಕರಿಸಿದ ಅವರು, ‘ಶೇ 85ರಷ್ಟು ಸಾಮಾನ್ಯ ತ್ಯಾಜ್ಯ ಶೇ 15ರಷ್ಟು ಬಯೊ ಮೆಡಿಕಲ್‌ ತ್ಯಾಜ್ಯ ಸಂಗ್ರಹವಾಗುತ್ತದೆ. ಶುಶ್ರೂಷಕರ ಕೊರತೆ ಇದೆ. 40 ಬೆಡ್‌ಗೆ ಒಬ್ಬರಂತೆ ಈಗ ಲಭ್ಯರಿದ್ದಾರೆ. ಹೀಗಾಗಿ ಯಾವಾಗಲೋ ಇಂಥ ಸಮಸ್ಯೆ ಕಂಡು ಬಂದಿರಬಹುದು. ಆದರೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಖಾಸಗಿ ಕಂಪನಿಯೊಂದರ ಜೊತೆ ಒಡಂಬಡಿಕೆ ಮಾಡಿಕೊಂಡು ಮೆಡಿಕಲ್‌ ತ್ಯಾಜ್ಯವನ್ನು ಅವರಿಗೇ ನೀಡುತ್ತಿದ್ದೇವೆ. ಆಸ್ಪತ್ರೆಯ ಎಲ್ಲೆಡೆ ಪೋಸ್ಟರ್‌ಗಳನ್ನು ಅಂಟಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದೇವೆ. ‘ಡಿ’ ಹುದ್ದೆ ನೌಕರರಿಗೂ ತರಬೇತಿ ನೀಡಿದ್ದೇವೆ’ ಎಂದು ತಿಳಿಸಿದರು.

‘ಪ್ಲಾಸ್ಟಿಕ್‌ ತರಬೇಡಿ ಎಂಬ ನಮ್ಮ ಮನವಿಗೆ ಜನರಿಂದ ಅಷ್ಟಾಗಿ ಸ್ಪಂದನೆ ಇನ್ನೂ ವ್ಯಕ್ತವಾಗಿಲ್ಲ. ಪ್ಲಾಸ್ಟಿಕ್‌ಗಳಲ್ಲೇ ಆಹಾರ ತಂದು ವಾರ್ಡ್‌ಗಳಲ್ಲಿ, ಆವರಣದಲ್ಲಿ ಒಗೆಯುವ ಪ್ರವೃತ್ತಿ ಮುಂದುವರಿದಿದೆ. ಕಂಡಲ್ಲಿ ಉಗುಳುವ ದುರಭ್ಯಾಸದಿಂದ ಸಹ ಜನ ಹೊರಬಂದಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ವಾರ್ಡ್‌ಗಳ ಸ್ನಾನಗೃಹ, ಶೌಚಗೃಹಗಳಲ್ಲಿ ಬಟ್ಟೆ, ಕಸ, ಮುಸುರೆ ಹಾಕಬೇಡಿ ಎಂದು ಎಚ್ಚರಿಕೆ ನೀಡಿದರೂ ಜನರು ಕಿವಿಗೊಡುತ್ತಿಲ್ಲ. ಹೀಗಾಗಿ 15 ದಿನಗಳಿಗೊಮ್ಮೆ ಇಲ್ಲಿಯ ಶೌಚಾಲಯಗಳು ಬ್ಲಾಕ್‌ ಆಗುವುದು, ನಾವು ಮಹಾನಗರ ಪಾಲಿಕೆಯಿಂದ ಯಂತ್ರ ತರಿಸಿ ಸ್ವಚ್ಛಗೊಳಿಸುವುದು ಸಾಮಾನ್ಯವಾಗಿಬಿಟ್ಟಿದೆ. ಕೇರ್‌ ಕಂಪ್ಯಾನಿಯನ್‌ ಪ್ರೋಗ್ರಾಮ್‌’ (ಸಿಸಿಪಿ) ಮೂಲಕ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ’ ಎಂದು ವಿವರಿಸಿದರು.

ಶಿಥಿಲ ಕಟ್ಟಡ, ಸಿಬ್ಬಂದಿ ಕೊರತೆ, ಔಷಧ ಕೊರತೆ, ಮೂಲ ಸೌಲಭ್ಯಗಳ ಕೊರತೆಯಂಥ ಸಮಸ್ಯೆಗಳಿಂದ ಬಳಲುತ್ತಿರುವ ಈ ಆಸ್ಪತ್ರೆಯ ಅಭಿವೃದ್ಧಿಗೆ ಬಲವಾದ ಇಚ್ಛಾಶಕ್ತಿಯನ್ನು ಸ್ಥಳೀಯ ಜನಪ್ರತಿನಿಧಿಗಳು ಪ್ರದರ್ಶಿಸುವುದು ಅಗತ್ಯ ಎನ್ನುವುದು ದಾವಣಗೆರೆಯ ನಾಗರಿಕರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT