ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಅಲೆಮಾರಿಗಳಿಗೆ ಸಿಗದ ಸೌಲಭ್ಯ

ಅರೆ ಅಲೆಮಾರಿ, ಆದಿವಾಸಿಗಳಿಗೆ ಇಲ್ಲದ ವಿಶೇಷ ಪ್ಯಾಕೇಜ್
Last Updated 20 ಮೇ 2020, 20:00 IST
ಅಕ್ಷರ ಗಾತ್ರ

ದಾವಣಗೆರೆ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜಿಲ್ಲೆಯ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ, ಅತಿ ಸೂಕ್ಷ್ಮ, ಬುಡಕಟ್ಟು ಜನ ಸಂಕಷ್ಟದಲ್ಲಿದ್ದಾರೆ.

ರಸ್ತೆ ಬದಿ ಹಾಗೂ ದೇವಸ್ಥಾನಗಳ ಅಕ್ಕಪಕ್ಕದ ಜಾಗ, ಊರಿನ ಪಾಳು ಜಾಗಗಳಲ್ಲಿ ಟೆಂಟ್‌, ಗುಡಾರ ಹಾಗೂ ಗುಡಿಸಲುಗಳನ್ನು ಹಾಕಿಕೊಂಡು ವಾಸಿಸುತ್ತಿದ್ದಾರೆ. ಕೆಲವರು ತಲೆಪಿನ್ನು, ಟೇಪು, ಬಾಚಣಿಗೆಗಳನ್ನು ಮಾರಾಟ ಮಾಡಿ ಜೀವನ ನಡೆಸಿದರೆ, ಕೆಲವರು ಕೂಲಿ, ಕೆಲವರು ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಸ್ವಂತ ಮನೆಯೂ ಇಲ್ಲ; ಜಮೀನು ಇಲ್ಲ.

ಸುಡುಗಾಡು ಸಿದ್ಧ, ಹಕ್ಕಿಪಿಕ್ಕಿ, ದಕ್ಕಲಿಗರು, ಶಿಳ್ಳೆಕ್ಯಾತ, ಗೊಂಡಬಾಳಿ ಸೇರಿ 15ಕ್ಕೂ ಹೆಚ್ಚು ಸಮುದಾಯದವರು ಇದ್ದು, ಇವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಕ್ಕೂ ಸೇರುತ್ತಾರೆ. ದಾವಣಗೆರೆ ನಗರದಲ್ಲಿ 6 ಸಾವಿರ ಹಾಗೂ ಜಿಲ್ಲೆಯಲ್ಲಿ ಅಂದಾಜು 15 ಸಾವಿರದಿಂದ 20 ಸಾವಿರ ಅಲೆಮಾರಿಗಳಿದ್ದಾರೆ.

‘ಲಾಕ್‌ಡೌನ್ ಸಂದರ್ಭದಲ್ಲಿ ಆಹಾರ ಸಾಮಗ್ರಿಗಳು ಇಲ್ಲದೇ ಈ ಸಮುದಾಯ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ದಾನಿಗಳು ಇವರ ಹತ್ತಿರ ಸುಳಿಯುವುದಿಲ್ಲ’ ಎಂದು ಆದಿವಾಸಿ ಅರೆ ಅಲೆಮಾರಿ, ಸೂಕ್ಷ್ಮ, ಅತಿ ಸೂಕ್ಷ್ಮ, ಬುಡಕಟ್ಟುಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಡಿ.ತಿಮ್ಮಣ್ಣ ಅಳಲು ತೋಡಿಕೊಳ್ಳುತ್ತಾರೆ.

‘ಮಡಿವಾಳರಿಗೆ, ಸವಿತಾ ಸಮಾಜದವರಿಗೆ, ರಿಕ್ಷಾ ಮತ್ತು ಟ್ಯಾಕ್ಷಿ ಚಾಲಕರು ಸೇರಿ ಹಲವರಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪ್ಯಾಕೇಜ್ ಘೋಷಿಸಿದ್ದಾರೆ. ಆದರೆ, ವಿಶೇಷ ಪ್ಯಾಕೇಜ್‌ ಘೋಷಣೆ ಮಾಡುವಾಗ ಅಲೆಮಾರಿಗಳನ್ನು ಕಡೆಗಣಿಸಿರುವುದು ಖಂಡನೀಯ. ಈ ಸಮುದಾಯಗಳು ಈ ದೇಶದ ಮೂಲನಿವಾಸಿಗಳು. ಆದರೆ, ಈ ಸಮುದಾಯಗಳಿಗೆ ನೆಲೆಯನ್ನು ಕಲ್ಪಿಸದೇ ಇರುವುದು ದುರ್ದೈವದ ಸಂಗತಿ’ ಎನ್ನುತ್ತಾರೆ ತಿಮ್ಮಣ್ಣ.

‘ಬೆಂಗಳೂರಿನಿಂದ ಈಚೆಗೆ ನಡೆದ ಅಲೆಮಾರಿಗಳ ಸಮಾವೇಶದಲ್ಲಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದಾಗಿ ಭರವಸೆ ನೀಡಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಅಲೆಮಾರಿಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಅಲ್ಲದೇ ಆಹಾರದ ಕಿಟ್‌ಗಳನ್ನು ವಿತರಿಸಬೇಕು’ ಎಂದು ಅವರು ಆಗ್ರಹಿಸುತ್ತಾರೆ.

‘ದೊಂಬಿದಾಸರು ಹಾಗೂ ಗೊಲ್ಲರು ಹಿಂದುಳಿದ ವರ್ಗಗಳ ಇಲಾಖೆಯ ವ್ಯಾಪ್ತಿಗೆ ಬರಲಿದ್ದು, 2019–20ನೇ ಸಾಲಿನಲ್ಲಿ 2,786 ಮೆಟ್ರಿಕ್‌ಪೂರ್ವ ವಿದ್ಯಾರ್ಥಿಗಳಿಗೆ ₹ 59 ಲಕ್ಷ ವಿದ್ಯಾರ್ಥಿವೇತನ ನೀಡಲಾಗಿದೆ’ ಎನ್ನುತ್ತಾರೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಂಗಪ್ಪ ಎಸ್.ಆರ್.

*
ಜಿಲ್ಲೆಯಲ್ಲಿ 11 ಸಾವಿರಕ್ಕೂ ಹೆಚ್ಚು ಅಲೆಮಾರಿಗಳು ಕುಟುಂಬಗಳು ನೋಂದಣಿಯಾಗಿದ್ದು, ಸಿಸಿ ರಸ್ತೆ ಹಾಗೂ ಸಮುದಾಯ ಭವನಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.
-ಗಂಗಪ್ಪ ಎಸ್.ಆರ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT