ಭಾನುವಾರ, ಜನವರಿ 19, 2020
26 °C

ವೇತನ ಹೆಚ್ಚಳಕ್ಕೆ ಆಗ್ರಹಿಸಿ ಬಿಸಿಯೂಟ ತಯಾರಕರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ರಾಜ್ಯ ಸಮಿತಿಯಿಂದ ಮಂಗಳವಾರ ಪ್ರತಿಭಟನೆ ನಡೆಯಿತು.

ಜಯದೇವ ವೃತ್ತದಿಂದ ಹೊರಟ ಬಿಸಿಯೂಟ ತಯಾರಿಸುವ ಮಹಿಳೆಯರು ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮೆರವಣಿಗೆಯ ಮೂಲಕ ತಾಲ್ಲೂಕು ಕಚೇರಿಗೆ ತಲುಪಿ ತಹಶೀಲ್ದಾರ್ ಕಚೇರಿಯ ಮ್ಯಾನೇಜರ್‌ಗೆ ಮನವಿ ಸಲ್ಲಿಸಿದರು.

‘17 ವರ್ಷಗಳಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಬಿಸಿಯೂಟ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಬಿಸಿಯೂಟ ತಯಾರಕರು ಯಾವುದೇ ಸೌಲಭ್ಯಗಳಿಲ್ಲದೇ ದುಡಿಯುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಸೇರಿ ಮುಖ್ಯ ಅಡುಗೆಯವರಿಗೆ ₹2,700 ಹಾಗೂ ಅಡುಗೆ ಸಹಾಯಕರಿಗೆ ₹2,600 ಗೌರವಧನ ನೀಡುತ್ತಿದ್ದು, ಇದರಿಂದ ಜೀವನ ನಡೆಸುವುದು ಕಷ್ಟವಾಗಿದೆ’ ಎಂದು ಮಹಿಳೆಯರು ಅಳಲು ತೋಡಿಕೊಂಡರು.

‘ಬಿಸಿಯೂಟ ತಯಾರಿಸುವ ಮಹಿಳೆಯರಿಗೆ ಕೆಲಸದ ಭದ್ರತೆ ಒದಗಿಸಬೇಕು ಹಾಗೂ ವೇತನ ಹೆಚ್ಚಿಸಬೇಕು ಎಂದು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಬಿಸಿಯೂಟ ಪೂರೈಕೆಯ ಹೊಣೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವ ಹುನ್ನಾರ ನಡೆಯುತ್ತಿದ್ದು, ಸರ್ಕಾರ ಇದನ್ನು ಕೈಬಿಡಬೇಕು. ಒಂದು ವೇಳೆ ಖಾಸಗಿಯವರಿಗೆ ವಹಿಸಿದ್ದಲ್ಲಿ 1.18 ಲಕ್ಷದಷ್ಟಿರುವ ಬಿಸಿಯೂಟ ತಯಾರಿಸುವ ಮಹಿಳೆಯರು ಬೀದಿ ಪಾಲಾಗುತ್ತಾರೆ’ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು ಹೇಳಿದರು.

ಸಮಿತಿಯ ರಾಜ್ಯ ಖಜಾಂಚಿ ರುದ್ರಮ್ಮ ಬೆಳಲಗೆರೆ, ಜಿಲ್ಲಾ ಸಂಚಾಲಕರಾದ ಸಿ.ರಮೇಶ್, ಗದಿಗೇಶ ಪಾಳೇದ, ಜ್ಯೋತಿಲಕ್ಷ್ಮಿ, ವನಜಾಕ್ಷಮ್ಮ, ಪದ್ಮ, ರೇಣುಕಮ್ಮ, ಹನುಮಕ್ಕ, ರಜಿಯಾಬೇಗಂ, ಮಂಜುಳಾ, ಹಾಲಮ್ಮ, ಗೀತಾಬಾಯಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಿಸಿಯೂಟ ತಯಾರಿಕರ ಬೇಡಿಕೆಗಳು

*ಬಿಸಿಯೂಟ ತಯಾರಕರಿಗೆ ಪ್ರತಿ ತಿಂಗಳ 5ರೊಳಗೆ ಸಂಬಳ ನೀಡಬೇಕು,

*ಶಾಲಾ ಸಿಬ್ಬಂದಿಯಾಗಿ ಪರಿವರ್ತಿಸುವುದು.

*ಕಾರ್ಮಿಕರೆಂದು ಪರಿಗಣಿಸಿ ಕಾರ್ಮಿಕ ಕಾಯ್ದೆಯಡಿ ಪರಿವರ್ತಿಸುವುದು

*ಪಿಎಫ್‌, ಇಎಸ್‌ಐ ಜಾರಿಗೊಳಿಸಬೇಕು

*₹2ಲಕ್ಷ ಅಪಘಾತ ಪರಿಹಾರ ಹಾಗೂ ಮರಣ ಹೊಂದಿದರೆ ₹ 5ಲಕ್ಷ  ಪರಿಹಾರ ನೀಡಬೇಕು

*60 ವರ್ಷ ವಯಸ್ಸಾದ ತಯಾರಕರಿಗೆ ₹3 ಸಾವಿರ ನಿವೃತ್ತಿ ಪಿಂಚಣಿ, ₹2ಲಕ್ಷ ಇಡುಗಂಟು ನೀಡಬೇಕು

*ದಸರಾ ರಜೆ ಹಾಗೂ ಬೇಸಿಗೆ ರಜಾಗಳ ಸಂಬಳ ನೀಡಬೇಕು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು