ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳವೆಬಾವಿಗಳನ್ನು ಮರುಪೂರಣ: ಅನುದಾನ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವ

ಕೊಳವೆಬಾವಿ ಮರುಪೂರಣ ಸಬ್ಸಿಡಿಯಲ್ಲಿ ತಾರತಮ್ಯಕ್ಕೆ ಆಕ್ಷೇಪ
Last Updated 16 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ದಾವಣಗೆರೆ: ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಸರ್ಕಾರಿ ಕೊಳವೆಬಾವಿ ಮರುಪೂರಣಕ್ಕೆ ನೀಡುವಷ್ಟೇ ಅನುದಾನವನ್ನು ವೈಯಕ್ತಿಕ ಫಲಾನುಭವಿಗಳಿಗೂ ನೀಡಬೇಕು ಎಂಬ ಕುರಿತು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿಕೊಡಲು ಶುಕ್ರವಾರ ನಡೆದ ಜಿಲ್ಲಾ ಪಂಚಾಯಿತಿ ಮಾಸಿಕ ಕೆಡಿಪಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಡಿಯುವ ನೀರಿನ ಮೇಲಿನ ಚರ್ಚೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಎಚ್‌.ಎನ್‌. ರಾಜು, ‘ಜಲಾಮೃತ ಹಾಗೂ ಜಲಶಕ್ತಿ ಯೋಜನೆಯಡಿ ಕೊಳವೆಬಾವಿಗಳನ್ನು ಮರುಪೂರಣ ಮಾಡಲಾಗುವುದು. ಗ್ರಾಮ ಪಂಚಾಯಿತಿ, ಶಾಲೆಗಳ ಕೊಳವೆಬಾವಿಗಳನ್ನು ಗುರುತಿಸಲಾಗುತ್ತಿದೆ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಸಿ. ಸುರೇಂದ್ರ ನಾಯ್ಕ, ‘ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮ ಪಂಚಾಯಿತಿ ಕೊಳವೆಬಾವಿಗಳಿಗೆ ಮರುಪೂರಣ ಮಾಡಲು ₹ 75 ಸಾವಿರ ನೀಡಲಾಗುತ್ತಿದೆ. ಆದರೆ, ವೈಯಕ್ತಿಕ ಫಲಾನುಭವಿಗಳಿಗೆ ಕೇವಲ ₹ 19 ಸಾವಿರ ನೀಡುವ ಮೂಲಕ ತಾರತಮ್ಯ ಮಾಡಲಾಗುತ್ತಿದೆ. ಬರಗಾಲ ಇರುವುದರಿಂದ ಕೊಳವೆಬಾವಿಗೆ ಮರುಪೂರಣ ಮಾಡಿಕೊಂಡರೆ ರೈತರಿಗೆ ಬೆಳೆ ಬೆಳೆಯಲು ಅನುಕೂಲವಾಗಲಿದೆ. ಹೀಗಾಗಿ ವೈಯಕ್ತಿಕ ಫಲಾನುಭವಿಗಳಿಗೆ ನೀಡುವ ಅನುದಾನವನ್ನೂ ಹೆಚ್ಚಿಸಬೇಕು ಎಂದು ಠರಾವ್‌ ಪಾಸ್‌ ಮಾಡಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಸ್ಪಂದಿಸಿದ ಸ್ಪಂದಿಸಿದ ಸಿಇಒ ಎಚ್‌. ಬಸವರಾಜೇಂದ್ರ, ‘ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿಕೊಡಲಾಗುವುದು. ಜಗಳೂರಿನಂತಹ ಬರಪೀಡಿತ ತಾಲ್ಲೂಕಿನಲ್ಲಾದರೂ ವೈಯಕ್ತಿಕ ಫಲಾನುಭವಿಗಳಿಗೆ ಹೆಚ್ಚಿನ ಅನುದಾನ ಕಲ್ಪಿಸಬೇಕು’ ಎಂದು ಹೇಳಿದರು.

‘ಶಾಲೆಗಳಿಗೆ ಭೇಟಿ ನೀಡಿದಾಗ ಹಣ ಸದ್ಬಳಕೆ ಆಗುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಶಾಲೆಗೆ ನಿಜವಾಗಿಯೂ ಏನು ಬೋಕೋ ಅದನ್ನು ತೆಗೆದುಕೊಳ್ಳಬೇಕು. ಶಾಲೆಗಳಿಗೆ ತೆರಳಿ ಪರಿಶೀಲನೆ ನಡೆಸಬೇಕು’ ಎಂದು ಸಿಇಒ ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ ಅವರಿಗೆ ಸೂಚಿಸಿದರು.

ಶಿಕ್ಷಕರ ವರ್ಗಾವಣೆ ಸಮಸ್ಯೆ ಕುರಿತು ಡಿಡಿಪಿಐ ಸಭೆಗೆ ಮಾಹಿತಿ ನೀಡಿದರು.

ವೈದ್ಯರ ಕೊರತೆ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದಾಗ, ಡಿಎಚ್‌ಒ ರಾಘವೇಂದ್ರ ಸ್ವಾಮಿ ಅವರು, ‘ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿಕೊಡಲಾಗಿದೆ. ಜನಸಂಖ್ಯೆ ಪರಿಗಣಿಸಿ ಅಗತ್ಯ ಇರುವ ಕಡೆ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು. ಜಗಳೂರು ಆಸ್ಪತ್ರೆಯಲ್ಲಿ ವೈದ್ಯರು ರೋಗಿಗಳ ಮೈ ಮುಟ್ಟಿ ತಪಾಸಣೆ ನಡೆಸುತ್ತಿಲ್ಲ. ಗೋಡೆಗೆ ನಿಲ್ಲಿಸಿ ಇಂಜೆಕ್ಷನ್‌ ಚುಚ್ಚುತ್ತಾರೆ ಎಂಬ ದೂರಿಗೆ, ಪರಿಶೀಲಿಸುವುದಾಗಿ ತಿಳಿಸಿದರು.

ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಜೆ. ಸವಿತಾ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಆರ್‌. ಮಹೇಶ್‌ ಹಾಗೂ ಅಧಿಕಾರಿಗಳು ಇದ್ದರು.

ವಿಎ, ಆರ್‌ಐ ಭಯೋತ್ಪಾದಕರು

ಆತ್ಮಹತ್ಯೆ ಮಾಡಿಕೊಂಡಿದ್ದ ಬಾಡದ ರೈತ ರಾಜು ಅವರ ಕುಟುಂಬಕ್ಕೆ ಇನ್ನೂ ಪರಿಹಾರ ನೀಡದೇ ಇರುವ ಬಗ್ಗೆ ಅಧ್ಯಕ್ಷೆ ಶೈಲಜಾ ಬಸವರಾಜ್‌ ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್‌, ಬರಿ ಕೈ ಸಾಲ ಮಾಡಿದ್ದಾರೆ ಎಂಬ ಕಾರಣಕ್ಕೆ ಉಪವಿಭಾಗಾಧಿಕಾರಿ ಸಮಿತಿ ಸಭೆಯಲ್ಲಿ ಪರಿಹಾರ ನಿರಾಕರಿಸಲಾಗಿದೆ ಎಂದರು.

‘ಸೊಸೈಟಿಯಲ್ಲಿ ಸಾಲ ಇರುವುದಾಗಿ ರೈತನ ಕುಟುಂಬದವರು ಹೇಳುತ್ತಿದ್ದಾರೆ. ಹೀಗಿದ್ದರೂ ಗ್ರಾಮ ಲೆಕ್ಕಾಧಿಕಾರಿ (ವಿ.ಎ) ಹಾಗೂ ಕಂದಾಯ ಅಧಿಕಾರಿ (ಆರ್‌.ಐ) ಬರಿ ಕೈಸಾಲ ಮಾಡಿದ್ದಾರೆ ಎಂದು ವರದಿ ನೀಡಿದ್ದಾರೆ. ತಪ್ಪು ಮಾಹಿತಿ ನೀಡಿದರೆ ಜೈಲಿಗೆ ಹೋಗುತ್ತೀರಿ ಎಂದು ರೈತರನ್ನು ಬೆದರಿಸುತ್ತಿರುವ ವಿ.ಎ ಹಾಗೂ ಆರ್‌.ಐಗಳು ಭಯೋತ್ಪಾದಕರಾಗಿದ್ದಾರೆ’ ಎಂದು ಅಧ್ಯಕ್ಷೆ ಅಸಮಾಧಾನ ವ್ಯಕ್ತಪಡಿಸಿದರು.

ಮೇಲ್ಮನವಿ ಸಲ್ಲಿಸಿದರೆ ಜಿಲ್ಲಾಧಿಕಾರಿ ಅಧ್ಯಕ್ಷತೆ ಸಮಿತಿಯಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುದುಗಲ್‌ ತಿಳಿಸಿದರು.

ನಾಲೆ ಹೂಳು ತೆಗೆಸಿ

‘ಭದ್ರಾ ಜಲಾಶಯದಿಂದ ನಾಲೆಗೆ ನೀರು ಹರಿಸುತ್ತಿದ್ದಾರೆ. ಹೋದ ಕಡೆಯಲ್ಲೆಲ್ಲ ರೈತರು ನಾಲೆಯ ಹೂಳು ಹಾಗೂ ಜಂಗಲ್‌ ತೆಗೆಸಬೇಕು ಎಂದು ಮನವಿ ಮಾಡುತ್ತಿದ್ದಾರೆ’ ಎಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ. ವಾಗೀಶ್‌ ಸ್ವಾಮಿ ಸಭೆಯ ಗಮನಕ್ಕೆ ತಂದರು.

ನೀರಾವರಿ ನಿಗಮದ ಅಧಿಕಾರಿಗಳು, ‘ನಾಲೆಗಳ ನಿರ್ವಹಣೆಗಾಗಿ ಪ್ರತ್ಯೇಕ ಅನುದಾನ ನೀಡುತ್ತಿಲ್ಲ. ಹೀಗಾಗಿ ಅನುದಾನ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಮನವಿ ಮಾಡಿದರು.

ರೈತರಿಗೆ ತೊಂದರೆಯಾಗುತ್ತಿರುವುದರಿಂದ ಅನುದಾನ ನೀಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT