ದುರ್ಗವನ್ನು ಬೆಚ್ಚಿ ಬೀಳಿಸಿದ ವೇಶ್ಯಾವಾಟಿಕೆ ದಂಧೆ

7
ಒಂಬತ್ತು ಮಂದಿ ಬಂಧನ, ಆರು ಮಹಿಳೆಯರನ್ನು ರಕ್ಷಿಸಿದ ಪೊಲೀಸರು

ದುರ್ಗವನ್ನು ಬೆಚ್ಚಿ ಬೀಳಿಸಿದ ವೇಶ್ಯಾವಾಟಿಕೆ ದಂಧೆ

Published:
Updated:
Deccan Herald

ಚಿತ್ರದುರ್ಗ: ಇಲ್ಲಿನ ಕೆಲ ಲಾಡ್ಜ್‌ಗಳಲ್ಲಿ ಸುರಂಗ ಮಾರ್ಗದ ಮಾದರಿಯಲ್ಲಿ ಕೋಣೆ, ಶೌಚಾಲಯಗಳಿವೆ. ಪೊಲೀಸರು ದಾಳಿ ನಡೆಸಿದಾಗ ಗೊತ್ತಾಗದಂತೆ ಬಚ್ಚಿಟ್ಟುಕೊಳ್ಳಲು ನಿರ್ಮಿಸಿರಬಹುದು ಎನ್ನಲಾಗುತ್ತಿದ್ದು, ಇದು ವೇಶ್ಯಾವಾಟಿಕೆ ದಂಧೆಗೂ ಸಹಕಾರಿಯಾಗಿದೆ.

ಮಹಾನಗರಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಇಲ್ಲಿಯೂ ಕಾಲಿಟ್ಟಿದ್ದು, ಚಿತ್ರದುರ್ಗವನ್ನು ಬೆಚ್ಚಿ ಬೀಳಿಸುತ್ತಿದೆ. ಮಹಿಳೆಯರನ್ನು ಕಳ್ಳ ಸಾಗಾಣೆ ಮಾಡುವ ಜಾಲವೂ ಇರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.

ಸಂಸ್ಥೆಯೊಂದರ ಮಾಹಿತಿ ಆಧರಿಸಿ ಶುಕ್ರವಾರ ಇಲ್ಲಿನ ಮಹಾಲಕ್ಷ್ಮೀ, ಅನುಗ್ರಹ, ಆದರ್ಶ ಮೂರು ಲಾಡ್ಜ್‌ಗಳ ಮೇಲೆ ದಾಳಿ ನಡೆಸಿದ ನಗರಠಾಣೆ ಹಾಗೂ ಬಡಾವಣೆ ಠಾಣೆಯ ಪೊಲೀಸರು, ಒಂಬತ್ತು ಮಂದಿ ಬಂಧಿಸಿ, ಆರು ಮಂದಿ ಮಹಿಳೆಯರನ್ನು ರಕ್ಷಿಸಿದ್ದಾರೆ.

ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಲಾಡ್ಜ್‌ಗಳ ಸುರಂಗ ಮಾರ್ಗ ಮಾದರಿಯ ಗುಹೆಗಳಲ್ಲಿ ಬಚ್ಚಿಟ್ಟುಕೊಳ್ಳಲು ಅಲ್ಲಿದ್ದ ಮಹಿಳೆಯರು ಸೇರಿದಂತೆ ಬಂಧಿತರು ಪ್ರಯತ್ನಿಸಿದರು. ಕೆಲವರು ಒಳಗೆ ಹೋಗಿ ಬೀಗ ಹಾಕಿಕೊಳ್ಳಲು ಮುಂದಾದರು. ಕೋಣೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ ಅಡಗಿಕೊಂಡಿದ್ದ ಅವರೆಲ್ಲರನ್ನು ಹೊರಗೆ ಕರೆತರಲಾಯಿತು.

ವೆಂಕಟೇಶ್, ಕೇಶವ್, ವಿನೋದ್, ಸ್ವಾಮಿ, ಕಾಟಲಿಂಗೇಶ, ಮಂಜಪ್ಪ, ಗಂಗಾಧರ್, ಶರೀಫ್ ಸೇರಿ ಇನ್ನೊಬ್ಬ ಬಂಧಿತ ಆರೋಪಿಗಳು ಚಿತ್ರದುರ್ಗ ಹಾಗೂ ದಕ್ಷಿಣ ಕನ್ನಡ ಎರಡೂ ಜಿಲ್ಲೆಯ ಮೂಲದವರು. ಮಹಿಳೆಯರು ಮೂಲತಃ ಕಲ್ಕತ್ತಾದಿಂದ ಬೆಂಗಳೂರಿಗೆ ವಲಸೆ ಬಂದವರು ಎಂದು ತಿಳಿದು ಬಂದಿದ್ದು, ಅಲ್ಲಿನ ಗಾರ್ಮೆಂಟ್ಸ್‌ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ವೇಶ್ಯಾವಾಟಿಕೆಗೆ ಮಹಿಳೆಯರನ್ನು ಸರಬರಾಜು ಮಾಡುವುದನ್ನೇ ವೃತ್ತಿಯಾಗಿಸಿಕೊಂಡವರು ಸೇರಿ ಈ ದಂಧೆಯಲ್ಲಿ ತೊಡಗಿಸಿಕೊಂಡಿರುವ ಹಲವರ ಸಂಪರ್ಕ ಹೊಂದಿರುವ ಕೆಲ ಪುರುಷರು ಅನೇಕ ದಿನಗಳಿಂದ ಈ ವೃತ್ತಿಯಲ್ಲಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಪೊಲೀಸರು ಶೋಧದಲ್ಲಿ ತೊಡಗಿದ್ದಾರೆ.  

ಪೊಲೀಸರು ಬಂದರೂ ಗೊತ್ತಾಗಬಾರದು ಎಂಬ ಕಾರಣಕ್ಕಾಗಿ ಗಿರಾಕಿಗಳ ಅಥವಾ ಬೇರೆಯವರ ಹೆಸರಿನಲ್ಲೂ ದಂಧೆಕೋರರು ಕೊಠಡಿಗಳನ್ನು ಬುಕ್‌ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಎಸ್‌ಪಿ ಶ್ರೀನಾಥ್ ಎಂ.ಜೋಷಿ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆದಿದ್ದು, ಇಲ್ಲಿನ ನಗರ ಪೊಲೀಸ್ ಠಾಣೆ ಹಾಗೂ ಬಡಾವಣೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಮಾನವ ಕಳ್ಳಸಾಗಾಣೆಯ ದೊಡ್ಡ ಜಾಲವಿದೆ

ಇದು ವೇಶ್ಯಾವಾಟಿಕೆ ಎಂಬುದಕ್ಕಿಂತ ಮಹಿಳೆಯರನ್ನು, ಮನುಷ್ಯತ್ವವನ್ನು ಕೋಳಿಗಳ ರೀತಿಯಲ್ಲಿ ಕಿತ್ತು ತಿನ್ನುವ ಮಾನವ ಕಳ್ಳಸಾಗಾಣೆಯ ದೊಡ್ಡ ಜಾಲ. ಹಲವೆಡೆ ವ್ಯಾಪಾಕವಾಗಿ ನಡೆಯುತ್ತಿರುವ ದಂಧೆ ಎಂದು ಒಡನಾಡಿ ಸಂಸ್ಥೆ ನಿರ್ದೇಶಕ ಪರಶುರಾಮ್ ತಿಳಿಸಿದರು.

ಬಾಂಗ್ಲಾ ದೇಶದಿಂದ ನುಸುಳಿ ಒಂಬತ್ತು ಮಂದಿ ರಾಜ್ಯಕ್ಕೆ ಬಂದಿದ್ದಾರೆ ಎಂಬ ಮಾಹಿತಿ ಆಧರಿಸಿ ಮೈಸೂರಿನಲ್ಲಿ ಈಚೆಗೆ ಬ್ಯೂಟಿ ಪಾರ್ಲರ್‌ವೊಂದರ ಮೇಲೆ ಪೊಲೀಸರು ದಾಳಿ ನಡೆಸಿದಾಗ ಬಾಂಗ್ಲಾ ದೇಶ ಮೂಲದ ಮಹಿಳೆಯೊಬ್ಬರು ಇದ್ದರು. ಉಳಿದ ಎಂಟು ಮಂದಿ ಅಲ್ಲಿ ಪೊಲೀಸರ ಕೈಗೆ ಸಿಗಲಿಲ್ಲ. ಚಿತ್ರದುರ್ಗದ ಕೆಲ ಲಾಡ್ಜ್‌ಗಳಲ್ಲಿ ಇರಬಹುದು ಎಂಬ ಶಂಕೆ ಮೇರೆಗೆ ಇಲ್ಲಿನ ಎಸ್‌ಪಿ ಅವರಿಗೆ ಮೊದಲೇ ಮಾಹಿತಿ ನೀಡಿದ್ದೆ. ದಾಳಿ ನಂತರ ಆ ಮಹಿಳೆಯರು ಕಲ್ಕತ್ತಾದವರು ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ನಾವು ಈ ದಂಧೆಯಲ್ಲಿ ಇರುವವರಲ್ಲ ಎಂಬುದಾಗಿಯೂ ತಿಳಿಸಿದ್ದಾರೆ ಎನ್ನುತ್ತಾರೆ ಅವರು.

ದಾಳಿಯಲ್ಲಿ ನಮ್ಮ ಸಂಸ್ಥೆಯ ಪದಾಧಿಕಾರಿಗಳಾದ ಸ್ಟ್ಯಾಲಿನ್, ಪ್ರದೀಪ್, ಪೃಥ್ವಿ, ನಜೀನಾ, ಕವಿತಾ ಇದ್ದರು.  

ದಾಳಿ ನಡೆಸಿದ ಲಾಡ್ಜ್‌ಗಳು ಈ ಮುಂಚೆಯೂ ವೇಶ್ಯಾವಾಟಿಕೆಗೆ ಸಹಕಾರ ನೀಡಿವೆ ಎಂಬ ಮಾಹಿತಿ ಗೊತ್ತಾದರೆ ಲಾಡ್ಜ್‌ ಮತ್ತು ಅದರ ಮಾಲೀಕರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ.
ಶ್ರೀನಾಥ್ ಎಂ. ಜೋಷಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಿತ್ರದುರ್ಗ

ಸುರಂಗ ಮಾರ್ಗ ಮಾದರಿಯಲ್ಲಿ ಲಾರ್ಡ್‌ಗಳ ಕೊಠಡಿಯೊಳಗೆ ಗುಹೆ ನಿರ್ಮಿಸುವಂಥ ನೈಪುಣ್ಯವುಳ್ಳ ಕೆಲಸಗಾರರು ಗೋವಾ ಸೇರಿದಂತೆ ದೇಶದ 20 ಕಡೆಗಳಲ್ಲಿ ಇದ್ದಾರೆ.
ಪರಶುರಾಮ್, ಒಡನಾಡಿ ಸಂಸ್ಥೆ ನಿರ್ದೇಶಕ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !