ಗುರುವಾರ , ಜೂನ್ 17, 2021
22 °C

ಕಾರ್ಮಿಕ ಸಂಘಟನೆಗಳಿಂದ ‘ಭಾರತ ರಕ್ಷಿಸಿ’ ಆಂದೋಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ಮಹಾನಗರ ಪಾಲಿಕೆಯ ಮಹಾತ್ಮ ಗಾಂಧಿ ಪ್ರತಿಮೆ ಎದುರು ಸೋಮವಾರ ‘ಭಾರತ ರಕ್ಷಿಸಿ’ ಆಂದೋಲನ ನಡೆಯಿತು.

‘ಸಾರ್ವಜನಿಕ ಉದ್ದಿಮೆಗಳು ದೇಶದ ಆಸ್ತಿ, ಇವುಗಳನ್ನು ಮಾರಾಟ ಮಾಡುವುದು ದೇಶ ವಿರೋಧಿ’, ‘ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ ದೇಶ ವಿರೋಧಿ’, ‘ಮೋದಿ ಹಠಾವೊ, ದೇಶ್ ಬಚಾವೋ’, ‘ಭೂಸುಧಾರಣಾ ಕಾಯ್ದೆಯನ್ನು ಒಪ್ಪುವುದಿಲ್ಲ’, ‘ರೈತ ಕಾರ್ಮಿಕರ ಹೋರಾಟ ಚಿರಾಯುವಾಗಲಿ’ ಎಂದು ಘೋಷಣೆ ಕೂಗಿದರು.

ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಚಾಲನೆ ನೀಡಿ ಕಾರ್ಮಿಕ ಮುಖಂಡ ಎಚ್.ಕೆ. ರಾಮಚಂದ್ರಪ್ಪ, ‘ಕೇಂದ್ರ ಸರ್ಕಾರ ರಾಷ್ಟ್ರೀಯ ಉದ್ಯಮಗಳನ್ನು ಖಾಸಗೀಕರಣಗೊಳಿಸಲು ಹೊರಟಿದೆ. ಬ್ರಿಟಿಷರಿಂದ ಹೋರಾಟ ಮಾಡಿ ಪಡೆದಂತಹ ಕಾಯ್ದೆಗಳನ್ನು ನಮ್ಮನ್ನು ಆಳುತ್ತಿರುವ ಕೇಂದ್ರ ಸರ್ಕಾರ ಕಳೆಯುತ್ತಿದೆ. ರೈತ, ಕಾರ್ಮಿಕ ಹಾಗೂ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಕ್ವಿಟ್ ಇಂಡಿಯಾ ಚಳವಳಿಯ ಭಾಗವಾಗಿ ಭಾರತ ರಕ್ಷಿಸಿ ಕಾರ್ಯಕ್ರಮ ನಡೆಸಲಾಗುತ್ತಿದೆ’ ಎಂದು ಹೇಳಿದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನ ಜಬೀನಾಖಾನಂ ಮಾತನಾಡಿ, ‘ಕಾರ್ಮಿಕ ಹಕ್ಕುಗಳನ್ನು ಕೇಳಿದರೆ ದೇಶ ವಿರೋಧಿ ಪಟ್ಟ ಕಟ್ಟುತ್ತಿದ್ದು, ಇದನ್ನು ಎಲ್ಲರೂ ವಿರೋಧಿಸಬೇಕಿದೆ’ ಎಂದರು.

ಬಂಡವಾಳಶಾಹಿ ಮಾಲೀಕರ ಪರವಾಗಿ ಮಾಡಿರುವ ಕಾರ್ಮಿಕ ಕಾಯ್ದೆ ತಿದ್ದುಪಡಿ, ರೈಲ್ವೆ, ವಿದ್ಯುತ್ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ, ಕಾರ್ಮಿಕ ಕಾಯ್ದೆ, ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಭೂ ಕಂದಾಯ ಕಾಯ್ದೆ ತಿದ್ದುಪಡಿ ಕಾಯ್ದೆಗಳಿಗೆ ವಿರೋಧ ವ್ಯಕ್ತಪಡಿಸಿದರು.

‘ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ ತಿಂಗಳಿಗೆ ₹ 21 ಸಾವಿರ ವೇತನ ನೀಡಬೇಕು ಹಾಗೂ ₹ 10 ಸಾವಿರ ಪಿಂಚಣಿ ನೀಡಬೇಕು’ ಎಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದರು. 

ಕಾರ್ಮಿಕ ಮುಖಂಡರಾದ ಆವರಗೆರೆ ವಾಸು, ಆವರಣಗೆರೆ ಚಂದ್ರು, ಕೆ.ಮಹಾಂತೇಶ್, ಪಾಲವ್ವನಹಳ್ಳಿ ಪ್ರಸನ್ನಕುಮಾರ್, ಗದಿಗೇಶ್, ಕರಿಬಸಪ್ಪ, ವಿ.ಶ್ರೀನಿವಾಸ್, ಎಚ್.ವಿ. ಶಾರದಮ್ಮ, ಪರಶುರಾಮ್, ಕೆ.ಎಚ್. ಆನಂದರಾಜ್, ಕೈದಾಳೆ ಮಂಜುನಾಥ, ಆರ್. ತಿಪ್ಪೇಸ್ವಾಮಿ, ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.