ಮಂಗಳವಾರ, ಜನವರಿ 31, 2023
19 °C

ಪ್ರಾಂಶುಪಾಲರ ವಿರುದ್ಧ ಉಪನ್ಯಾಸಕರ ಪ್ರತಿಭಟನೆ: ಶಾಸಕ ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊನ್ನಾಳಿ: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಾಠ ಮಾಡುವ ಉಪನ್ಯಾಸಕರು ಪ್ರಾಂಶುಪಾಲರ ವರ್ತನೆ ಖಂಡಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು.

ವಿಷಯ ತಿಳಿದು ಕಾಲೇಜಿಗೆ ಭೇಟಿ ನೀಡಿದ ಶಾಸಕ ಎಂ.ಪಿ.ರೇಣುಕಾಚಾರ್ಯ ಉಪನ್ಯಾಸಕರು ಹಾಗೂ ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡರು.

‘ತರಗತಿಗಳಿಗೆ ಹೋಗಿ ಮೊದಲು ಪಾಠ ಮಾಡುವುದನ್ನು ಕಲಿತುಕೊಳ್ಳಿ, ನಂತರ ನಿಮ್ಮ ಸಮಸ್ಯೆಗಳ ಬಗ್ಗೆ ನನ್ನ ಬಳಿ ಮಾತನಾಡಿ. ಈ ರೀತಿಯ ವರ್ತನೆಗಳಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು’ ಎಂದು ಉಪನ್ಯಾಸಕರಿಗೆ ತಿಳಿ ಹೇಳಿದರು.

ಆಗ ಉಪನ್ಯಾಸಕರೊಬ್ಬರು, ‘ವಿದ್ಯಾರ್ಥಿಗಳ ಮುಂದೆಯೇ ಪ್ರಾಂಶುಪಾಲು ನನಗೆ ಏಕವಚನದಲ್ಲಿ ಮಾತನಾಡಿದ್ದೂ ಅಲ್ಲದೆ, ಅವಮಾನ ಮಾಡಿದ್ದಾರೆ’ ಎಂದು ದೂರಿದರು. ಮತ್ತೊಬ್ಬ ಉಪನ್ಯಾಸಕರು, ‘ವಿನಾಕಾರಣ ನನಗೆ ನೊಟೀಸ್ ಜಾರಿ ಮಾಡಿದ್ದಾರೆ’ ಎಂದು ದೂರಿದರು. ‘ಪ್ರಾಂಶುಪಾಲರ ವಿರುದ್ಧ ನಾನೊಬ್ಬನೇ ಅಲ್ಲ, ಎಲ್ಲ ಉಪನ್ಯಾಸಕರೂ ದೂರು ಹೇಳುತ್ತಾರೆ. ಬೇಕಿದ್ದರೆ ಕೇಳಿ’ ಎಂದು ಮತ್ತೊಬ್ಬ ಉಪನ್ಯಾಸಕರು ಶಾಸಕರ ಬಳಿ ನೋವನ್ನು ಹೇಳಿಕೊಂಡರು.

ಇದರಿಂದ ಕೋಪಗೊಂಡ ಶಾಸಕರು, ‘ನಾಲ್ಕು ಗೋಡೆಗಳ ಮಧ್ಯೆ ನಿಮ್ಮ ಸಮಸ್ಯೆಗಳನ್ನು ಚರ್ಚೆ ಮಾಡಿ ಬಗೆಹರಿಸಿಕೊಳ್ಳಿ’ ಎಂದು ಸೂಚಿಸಿದರು.

‘ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕಾಲೇಜಿಗೆ ವಿದ್ಯಾಭ್ಯಾಸಕ್ಕೆ ಬರುತ್ತಾರೆ. ಅವರಿಗೆ ಅನ್ಯಾಯ ಮಾಡಿದರೆ ದೇವರು ಒಳ್ಳೆಯದು ಮಾಡುವುದಿಲ್ಲ. ಯಾರದ್ದೇ ತಪ್ಪಿರಲಿ ಆ ಬಗ್ಗೆ ಈಗ ನಾನು ಮಾತನಾಡುವುದಿಲ್ಲ. ಮುಂದಿನ ಮಂಗಳವಾರ ಬರುತ್ತೇನೆ. ಆಗ ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಿ. ಅಲ್ಲಿಯೇ ಅದಕ್ಕೆ ಪರಿಹಾರ ಮಾಡೋಣ’ ಎಂದರು. ಶಾಸಕರ ಸೂಚನೆಯಂತೆ ಉಪನ್ಯಾಸಕರು ಪ್ರತಿಭಟನೆ
ಕೈಬಿಟ್ಟು ತರಗತಿಗಳನ್ನು ಮುಂದುವರಿಸಿದರು.  

ಪ್ರಾಂಶುಪಾಲ ರಾಮಚಂದ್ರಪ್ಪ, ಉಪನ್ಯಾಸಕರಾದ ಬಸವರಾಜ್, ನಾಗರಾಜ್, ವೀರಯ್ಯ, ನಾಗರಾಜ್, ಅರುಣ್ ಶಿಂಧೆ, ಲಕ್ಷ್ಮಿ, ಸುಮತಿ, ಸಲ್ಮಾಬಾನು, ನೇತ್ರಾವತಿ ಸೇರಿ ಹಲವು ಉಪನ್ಯಾಸಕರು ಇದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಜರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು