ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನದೊಳಗೆ ಕ್ಯಾಮೆರಾಗಳಿಗೆ ನಿರ್ಬಂಧ ವಿರೋಧಿಸಿ ಪ್ರತಿಭಟನೆ

Last Updated 11 ಅಕ್ಟೋಬರ್ 2019, 15:24 IST
ಅಕ್ಷರ ಗಾತ್ರ

ದಾವಣಗೆರೆ: ವಿಧಾನಮಂಡಲದ ಉಭಯ ಸದನಗಳ ಸಭಾಂಗಣದೊಳಗೆ ಸುದ್ದಿವಾಹಿನಿಗಳ ಮತ್ತು ಮುದ್ರಣ ಮಾಧ್ಯಮದ ಕ್ಯಾಮೆರಾಗಳಿಗೆ ನಿರ್ಬಂಧ ಹೇರಿರುವುದನ್ನು ಖಂಡಿಸಿ ಜಿಲ್ಲಾ ವರದಿಗಾರರ ಕೂಟದಿಂದ ದಾವಣಗೆರೆಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

ವರದಿಗಾರರ ಕೂಟದ ಕಚೇರಿಯಿಂದ ಉಪ ವಿಭಾಗಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿದ ಪತ್ರಕರ್ತರು, ಮುಖ್ಯಮಂತ್ರಿ, ರಾಜ್ಯಪಾಲರು ಮತ್ತು ವಿಧಾನಸಭೆಯ ಸ್ಪೀಕರ್‌ಗೆ ಮನವಿ ಪತ್ರ ರವಾನಿಸಿದರು.

ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್. ಮಲ್ಲೇಶ್ ಮಾತನಾಡಿ, ‘ಸದನದೊಳಗೆ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿರುವುದು ಖಂಡನೀಯ. ಎಲ್ಲಾ ಪಕ್ಷಗಳೂ ಈ ಕೆಲಸವನ್ನು ಮಾಡಿವೆ. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಸ್ಪೀಕರ್ ಅವರೇ ಈ ರೀತಿ ಮಾಡಿರುವುದು ಖಂಡನೀಯ’ ಎಂದರು.

‘ಆಳುವ ಸರ್ಕಾರಗಳು ಮಾಧ್ಯಮದವರಿಗೆ ಗೌರವ ಕೊಡುವುದು ಅವುಗಳ ಕರ್ತವ್ಯ, ಮುಖ್ಯಮಂತ್ರಿ ಸ್ಪೀಕರ್‌ಗೆ ತಿಳಿಹೇಳಿ ಕೂಡಲೇ ಆದೇಶವನ್ನು ಹಿಂದಕ್ಕೆ ಪಡೆಯಬೇಕು’ ಎಂದು ಆಗ್ರಹಿಸಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಧಾನ ಮಂಡಲ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೇರವಾಗಿ ನೋಡುವ ಅವಕಾಶದಿಂದ ಸಾರ್ವಜನಿಕರು ವಂಚಿತರಾಗುವುದು ಜನತಂತ್ರದ ಆಶಯಕ್ಕೆ ವಿರುದ್ಧವಾದುದು. ಸರ್ಕಾರವು ಹೆಚ್ಚು ಪಾರದರ್ಶಕವಾಗಿ ಕೆಲಸ ಮಾಡುವ ಮೂಲಕ ಜನರ ಸಮೀಪಕ್ಕೆ ಆಡಳಿತವನ್ನು ತೆಗೆದುಕೊಂಡು ಹೋಗಬೇಕು ಎಂಬ ಸದಾಶಯ ಇಲ್ಲವಾಗಿ, ಎಲ್ಲವೂ ಗೌಪ್ಯ ವ್ಯವಹಾರ ಎನ್ನುವಂತಾಗಿರುವುದು ಸರಿಯಲ್ಲ’ ಎಂದರು.

ಪ್ರಧಾನ ಕಾರ್ಯದರ್ಶಿ ನಾಗರಾಜ ಬಡದಾಳ್, ಖಜಾಂಚಿ ಎ.ಎಲ್. ತಾರಾನಾಥ್, ಪತ್ರಕರ್ತರಾದ ಕೆ. ಏಕಾಂತಪ್ಪ, ಜಿ.ಎಂ.ಆರ್. ಆರಾಧ್ಯ, ಎನ್.ಆರ್. ನಟರಾಜ, ರವಿಬಾಬು, ರಮೇಶ್ ಜಾಗೀರ್‌ದಾರ್‌, ವರದರಾಜು, ಮಲ್ಲಿಕಾರ್ಜುನ್, ಅಣ್ಣಪ್ಪ, ನಂದೀಶ್, ಪ್ರವೀಣ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT