ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

ಒಪಿಡಿ ಬಂದ್‌; ರೋಗಿಗಳ ಪರದಾಟ
Last Updated 17 ಜೂನ್ 2019, 17:12 IST
ಅಕ್ಷರ ಗಾತ್ರ

ದಾವಣಗೆರೆ: ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರೆ ನೀಡಿದ್ದ ಬಂದ್‌ ಹಿನ್ನೆಲೆಯಲ್ಲಿ ನಗರದ ಸೋಮವಾರ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಮಾಡಿದ ವೈದ್ಯರು ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಇಲ್ಲಿನ ಬಾಪೂಜಿ ಮಕ್ಕಳ ಆಸ್ಪತ್ರೆಯಲ್ಲಿ ಜಮಾಯಿಸಿದ ಹಿರಿಯ, ಕಿರಿಯ ವೈದ್ಯರು ‘ನಾವು ಭಯೋತ್ಪಾದಕರಲ್ಲ, ವೈದ್ಯರು, ‘ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ಎಂದಿಗೂ ಸಲ್ಲದು’ ಎಂಬ ಫಲಕಗಳನ್ನು ಹಿಡಿದು ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದರು.

ಗುಂಡಿ ಸರ್ಕಲ್‌, ಪಿ.ಜಿ. ರಸ್ತೆ, ಸಿಟಿ ಸೆಂಟ್ರಲ್‌ ಆಸ್ಪತ್ರೆ, ಅಂಬೇಡ್ಕರ್‌, ಜಯದೇವ ಸರ್ಕಲ್‌ ಮಾರ್ಗವಾಗಿ ಅಶೋಕ ರಸ್ತೆ, ಗಾಂಧಿ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಡಾ. ಕಾಳಪ್ಪನವರ್‌,‘ ವೈದ್ಯರಿಗೆ ರಕ್ಷಣೆ ನೀಡಬೇಕು. ವೈದ್ಯರ ಮೇಲೆ ಹಲ್ಲೆ ನಡೆಸಿದ ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು’ ಎಂದು ಒತ್ತಾಯಿಸಿದರು.

ವೈದ್ಯರಿಗೆ ರಕ್ಷಣೆ ನೀಡಬೇಕು. ವೈದ್ಯರಿಗೆ ರಕ್ಷಣೆ ನೀಡಲು ಕಠಿಣ ಕಾನೂನು ರೂಪಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಬಳಿಕ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಜೆ. ಉದೇಶ್ ಅವರಿಗೆ ಮನವಿ ಸಲ್ಲಿಸಿದರು.

ಜೆಜೆಎಂ ವೈದ್ಯಕೀಯ ಕಾಲೇಜಿನ ಡಾ. ಮುರುಗೇಶ್‌, ಡಾ. ಅರುಣಕುಮಾರ, ಡಾ. ಎ.ಎಂ. ಶಿವಕುಮಾರ, ಡಾ.ಶಶಿಕಲಾ ಕೃಷ್ಣಮೂರ್ತಿ, ಪ್ರೇಮಾ ಪ್ರಭುದೇವ ಸೇರಿ ಹಿರಿಯ, ಕಿರಿಯ ವೈದ್ಯರು ಭಾಗವಹಿಸಿದ್ದರು. ಇಡಿಎ, ಐಎಂಎ, ಜೂನಿಯರ್‌ ಡಾಕ್ಟರ್ಸ್‌ ಅಸೋಸಿಯೇಷನ್‌ ಸೇರಿ ಹಲವು ವೈದ್ಯಕೀಯ ಸಂಘಟನೆಗಳು ಮುಷ್ಕರ ಬೆಂಬಲಿಸಿ ಭಾಗವಹಿಸಿದ್ದವು.

ಒಪಿಡಿ ಬಂದ್‌:

ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ (ತುರ್ತು ಚಿಕಿತ್ಸೆ, ಹೆರಿಗೆ ಘಟಕ ಹೊರತುಪಡಿಸಿ) ಒಪಿಡಿ ಬಂದ್‌ ಮಾಡಲಾಗಿತ್ತು. 24 ಗಂಟೆ ಬಂದ್‌ ಆದ ಕಾರಣ ಇದರಿಂದ ರೋಗಿಗಳು ಪರದಾಡುವಂತಾಯಿತು.

ಬಾಪೂಜಿ ಆಸ್ಪತ್ರೆ, ಎಸ್‌. ಎಸ್‌. ಹೈಟೆಕ್‌ ಆಸ್ಪತ್ರೆ, ಸಿಟಿ ಸೆಂಟ್ರಲ್‌ ಹಾಸ್ಪಿಟಲ್‌, ಆರೈಕೆ ಆಸ್ಪತ್ರೆ ಸೇರಿ ಬಹುತೇಕ ಎಲ್ಲಾ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು ಬಂದ್‌ ಆಗಿದ್ದವು.

ರೋಗಿಗಳ ಪರದಾಟ:

ವೈದ್ಯರ ಮುಷ್ಕರದ ಕಾರಣ ಇಲ್ಲಿನ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ನೂಕು ನುಗ್ಗಲು ಕಂಡು ಬಂತು. ಕೆಲವೇ ವೈದ್ಯರು ಕಾರ್ಯನಿರ್ವಹಿಸಿದರು. ಇದರಿಂದ ರೋಗಿಗಳು, ಮಹಿಳೆಯರು, ಮಕ್ಕಳು ಗಂಟೆಗಟ್ಟಲೆ ಕಾಯುವಂತಾಯಿತು.

ಎಲ್ಲಾ ಖಾಸಗಿ ಆಸ್ಪತ್ರೆಗಳು ಬಂದ್‌ ಆದ ಕಾರಣ ಜಿಲ್ಲಾ ಆಸ್ಪತ್ರೆಗೆ ಹೆಚ್ಚು ರೋಗಿಗಳು ಬಂದಿದ್ದರು. ಒಪಿಡಿಯಲ್ಲಿ ಉದ್ದನೆಯ ಸರತಿ ಸಾಲಿನಲ್ಲಿ ನಿಂತು ಮಹಿಳೆಯರು, ಮಕ್ಕಳು ಸುಸ್ತಾದರು.

ಜಿಲ್ಲಾ ಪ್ರಯೋಗ ಶಾಲಾ ತಂತ್ರಜ್ಞರ ಸಂಘ ಬೆಂಬಲ: ಎಲ್ಲಾ ಪ್ರಯೋಗಾಲಯವನ್ನು ಬಂದ್‌ ಮಾಡಿ ವೈದ್ಯರ ಮುಷ್ಕರಕ್ಕೆ ಜಿಲ್ಲಾ ಪ್ರಯೋಗ ಶಾಲಾ ತಂತ್ರಜ್ಞರ ಸಂಘ ಬೆಂಬಲ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT