ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ ಕುರಿತು ರಘು ಆಚಾರ್‌ ಹೇಳಿಕೆ ಖಂಡಿಸಿ ಪ್ರತಿಭಟನೆ

Last Updated 15 ಡಿಸೆಂಬರ್ 2018, 11:55 IST
ಅಕ್ಷರ ಗಾತ್ರ

ಹರಪನಹಳ್ಳಿ: ತರಳಬಾಳು ಶಾಖಾಮಠ ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ವಿಧಾನಪರಿಷತ್ ಸದಸ್ಯ ರಘು ಆಚಾರ್‌ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹಿಸಿ ತಾಲ್ಲೂಕಿನ ಲಿಂಗಾಯತ ಸಮಾಜ ಹಾಗೂ ಸಾಧು ಲಿಂಗಾಯತ ಸಮಾಜದವರು ಶನಿವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಕೊಟ್ಟೂರು ರಸ್ತೆ ಪಿಎಲ್‌ಡಿ ಬ್ಯಾಂಕ್ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಬಸ್ ನಿಲ್ದಾಣದ ರಸ್ತೆ ಮೂಲಕ ಪ್ರವಾಸಿ ಮಂದಿರ ವೃತ್ತದಲ್ಲಿ ಸೇರಿತು. ರಘು ಆಚಾರ್‌ ಪ್ರತಿಕೃತಿ ದಹಿಸಿದ ಪ್ರತಿಭಟನಾಕಾರರು ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಸಾಧು ವೀರಶೈವ ಲಿಂಗಾಯತ ಸಮಾಜ ಅಧ್ಯಕ್ಷ ಬಂದೋಳ್ ಮಂಜುನಾಥ್, ‘ಪಂಡಿತಾರಾಧ್ಯ ಸ್ವಾಮೀಜಿ ಬಗ್ಗೆ ರಘು ಆಚಾರ್‌ ಲಘುವಾಗಿ ಮಾತನಾಡಿರುವುದು ಅವರ ಘನತೆಗೆ ತಕ್ಕದ್ದಲ್ಲ. ಇಡೀ ಸಮಾಜದ ಹಿತ ಕಾಯುವ ಗುರುಗಳ ಹಾಗೂ ಮಠಗಳ ಬಗ್ಗೆ ಮಾತನಾಡುವ ಹಕ್ಕು ಇವರಿಗೆಲ್ಲಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೀರಶೈವ ಪಂಚಮಶಾಲಿ ಸಮಾಜದ ಅಧ್ಯಕ್ಷ ಪಾಟೀಲ್ ಬೆಟ್ಟನಗೌಡ, ‘ರಘು ಆಚಾರ್‌ ಉದ್ದಟತನದ ಹೇಳಿಕೆಯನ್ನು ಯಾವುದೇ ರಾಜಕೀಯ ನೇತಾರರು ಖಂಡಿಸದೇ ಹಾಗೂ ಬುದ್ಧಿ ಮಾತನ್ನು ಹೇಳದಿರುವುದು ವಿಷಾದನೀಯ. ಅವರು ಧಾರ್ಮಿಕ ಶ್ರದ್ಧಾಕೇಂದ್ರಗಳ ಮಠಾಧೀಶರಿಗೆ ಮಾಡಿದ ಅಪಮಾನಕ್ಕೆ ತಕ್ಕ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ, ಸಭಾಪತಿ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೂ ಸಮಾಜದ ಮೂಲಕ ಮನವಿ ಮಾಡುತ್ತಿದ್ದೇವೆ’ ಎಂದು ಹೇಳಿದರು.

ವೀರಶೈವ ಸಮಾಜದ ತಾಲ್ಲೂಕು ಅಧ್ಯಕ್ಷ ಎಂ.ರಾಜಶೇಖರ್, ‘ಸರ್ವ ಸಮಾಜದ ಹಿತ ಬಯಸುವ ಗುರುಗಳಿಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆಚಾರ್ ಸಮಾಜಕ್ಕೆ ಅಪಮಾನ ಮಾಡಿದಂತಾಗಿದೆ. ಕೂಡಲೇ ಸರ್ಕಾರ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಮುಖಂಡ ಜಿ.ನಂಜನಗೌಡ, ‘ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಶ್ರೀಗಳ ಬಗ್ಗೆ ಅವಹೇಳನಕಾರಿ ಮಾತನಾಡುವ ಮುನ್ನ ಯೋಚಿಸಬೇಕಿತ್ತು. ಕೂಡಲೇ ಶ್ರೀಗಳ ಬಳಿ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.

ಎಚ್.ಪಿ.ಎಸ್. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಮಹಾಬಳೇಶ್ವರಗೌಡ, ಪ್ರಾಚಾರ್ಯ ಶರಣಪ್ಪ, ವಕೀಲರಾದ ರಾಮನಗೌಡ ಪಾಟೀಲ್, ಆರುಂಡಿ ನಾಗರಾಜ್, ರೇವನಗೌಡ, ವೇದಮೂರ್ತಿ, ನಂದಿಬೇವೂರು ಜಗದೀಶ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕೆಂಚನಗೌಡ, ಪ್ರಕಾಶ್, ಮುಖಂಡರಾದ ಶಂಕರಗೌಡ, ಸಿದ್ದೇಶ್ ಗುಂಡಗತ್ತಿ, ಬೆಣ್ಣಿಹಳ್ಳಿ ರೇವಣ್ಣ, ಹಾಲೇಶ್ ಸತ್ತೂರು, ನಿಚ್ಚವ್ವನಹಳ್ಳಿ ಭೀಮಪ್ಪ, ಆರ್.ಕರೆಗೌಡ, ಓಂಕಾರಗೌಡ, ಪಿ.ಪ್ರೇಮಕುಮಾರ್, ಬಾಗಳಿ ಕರೆಗೌಡ, ನಾಗನಗೌಡ, ಕುಬೇರಪ್ಪ, ನಿಂಗರಾಜ ಪಣಿಯಾಪುರ, ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT