ಭಾನುವಾರ, ಜೂನ್ 13, 2021
26 °C

ಕನ್ನಡಿಗರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಬೆಳಗಾವಿ ಜಿಲ್ಲೆಯ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಪ್ರತಿಮೆ ಸ್ಥಾಪನೆ ನೆಪದಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡಿಗರ ಮೇಲೆ ನಡೆಸಿದ ಪುಂಡಾಟ ಖಂಡಿಸಿ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಉಪವಿಭಾಗಾಧಿಕಾರಿ ಕಚೇರಿ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ‘ಕನ್ನಡಿಗರ ಮೇಲೆ ಗೂಂಡಾಗಿರಿ ನಡೆಸಿದ ನಾಡದ್ರೋಹಿ ಶಿವಸೇನೆ ಕಾರ್ಯಕರ್ತರನ್ನು ಬಂಧಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಆ ಸಂಘಟನೆಯನ್ನು ನಿಷೇಧಿಸಬೇಕು’ ಎಂದು ಆಗ್ರಹಿಸಿದರು.

ನಂತರ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಅವರ ಮೂಲಕ ಗೃಹ ಸಚಿವರಿಗೆ ಮನವಿಪತ್ರ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಕೆ.ಎನ್.ವೆಂಕಟೇಶ್ ಮಾತನಾಡಿ, ‘ಕನ್ನಡಿಗರ ಸ್ವಾಭಿಮಾನದ ನೆಲ ಬೆಳಗಾವಿಯಲ್ಲಿ ಶಿವಸೇನೆಯವರು ಪದೇ ಪದೇ ಕನ್ನಡಿಗರನ್ನು ಕೆಣಕುತ್ತಿದ್ದಾರೆ. ಗಡಿ ವಿವಾದದ ಹೆಸರಿನಲ್ಲಿ ಮುಗ್ಧ ಮರಾಠಿಗರನ್ನು ಪ್ರಚೋದಿಸಿ ನಿರಂತರ ದೌರ್ಜನ್ಯ ಮುಂದುವರಿಸಿದ್ದಾರೆ. ರಾಜ್ಯ ಸರ್ಕಾರ ಇದನ್ನು ನಿಯಂತ್ರಿಸಬೇಕು’ ಎಂದು ಆಗ್ರಹಿಸಿದರು.

‘ಮರಾಠರ ಮತಗಳಿಗಾಗಿ ಬೆಳಗಾವಿಯ ಕೆಲವು ರಾಜಕಾರಣಿಗಳು ಎಂಇಎಸ್ ಮತ್ತು ಶಿವಸೇನೆಗೆ ಬೆಂಬಲಿಸಿ, ಅವರ ಪುಂಡಾಟಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷ ಬೆಂಬಲ ನೀಡುವ ನಾಡದ್ರೋಹ ಕೆಲಸ ನಡೆಸುತ್ತಿದ್ದಾರೆ. ಈ ಸಂಘಟನೆಗಳು ಭಯೋತ್ಪಾದಕರಂತೆ ವರ್ತಿಸಿದರೂ ರಾಜ್ಯ ಸರ್ಕಾರ ಮೌನ ವಹಿಸಿರುವುದು ಸರಿಯಲ್ಲ’ ಎಂದು ಆಕ್ಷೇಪಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಶೇರ್ ಅಲಿ, ಸಂಘಟನಾ ಕಾರ್ಯದರ್ಶಿ ಅಶ್ಫಕ್ ಅಲಿ, ಕಾರ್ಯದರ್ಶಿ ಅಯಾಜ್ ಖಾನ್,  ಸದಸ್ಯ ಪ್ರಸನ್ನ, ಚಮನ್ ಅಲಿ ಇದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.