ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಲ್ಲಿ ಶುರುವಾದ ಗೆಲುವಿನ ಲೆಕ್ಕಾಚಾರ

ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ಅಮರನಾಥ ಶೆಟ್ಟಿ
Last Updated 11 ಏಪ್ರಿಲ್ 2018, 12:31 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾದ ಮೂಲ್ಕಿ–ಮೂಡುಬಿದಿರೆ ಕ್ಷೇತ್ರದ ಮೇಲೆ ಈಗ ಬಿಜೆಪಿ ಗಮನ ಕೇಂದ್ರಿಕರಿಸಿದೆ. ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಈ ಬಾರಿ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದು, ಬಿಜೆಪಿ ಪಾಳೆಯದಲ್ಲಿ ಈ ಕ್ಷೇತ್ರವನ್ನು ಕಾಂಗ್ರೆಸ್‌ನಿಂದ ಕಿತ್ತುಕೊಳ್ಳುವ ಲೆಕ್ಕಾಚಾರ ಶುರುವಾಗಿದೆ.

ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿಗೆ ಗೆಲುವು ಸಾಧಿಸಲು ಸಾಧ್ಯವಾಗುವ ಕ್ಷೇತ್ರಗಳ ಪೈಕಿ ಮೂಡುಬಿದಿರೆಯೂ ಒಂದು. ಶೆಟ್ಟರು ಹಿಂದೆ ಸರಿದಿರುವುದರಿಂದ ಈ ಬಾರಿ ಇಲ್ಲಿ ಬಿಜೆಪಿ ಗೆಲುವು ಸುಲಭವಾಗಲಿದೆ ಎಂಬ ಆಶಯ ಬಿಜೆಪಿಯಲ್ಲಿ ಮೂಡಿದೆ.

ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಬಿಜೆಪಿ ಇಲ್ಲಿ ಸೋಲು ಅನುಭವಿಸಬೇಕಾಯಿತು. ಈ ಸೋಲಿಗೆ ಪ್ರಮುಖ ಕಾರಣ ಕೆ. ಅಮರನಾಥ ಶೆಟ್ಟಿ ಅವರ ಸ್ಪರ್ಧೆ. ಪ್ರತಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಜಿದ್ದಾಜಿದ್ದಿನಲ್ಲಿ ಅಮರನಾಥ ಶೆಟ್ಟಿ ಗಮನಾರ್ಹ ಮತಗಳನ್ನು ಪಡೆದಿದ್ದಾರೆ. ಅಮರನಾಥ ಶೆಟ್ಟರ ಸ್ಪರ್ಧೆಯಿಂದ ಸ್ವಲ್ಪ ಮಟ್ಟಿನ ಬಿಜೆಪಿ ಮತಗಳು ವಿಭಜನೆ ಆಗುತ್ತಿದ್ದವು. ಇದು ಪಕ್ಷದ ಸೋಲಿಗೆ ಕಾರಣವಾಗುತ್ತಿತ್ತು ಎನ್ನುವ ಲೆಕ್ಕಾಚಾರ ಬಿಜೆಪಿ ಮುಖಂಡರದ್ದು.

2008ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಜಗದೀಶ್‌ ಅಧಿಕಾರಿ ಸುಮಾರು 10 ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಈ ಚುನಾವಣೆಯಲ್ಲಿ ಅಮರನಾಥ ಶೆಟ್ಟರು 26,083 ಮತಗಳನ್ನು ಪಡೆದಿದ್ದರು. 2013 ರಲ್ಲಿ ಬಿಜೆಪಿ ಉಮಾನಾಥ ಕೋಟ್ಯಾನ್‌, ಸುಮಾರು 4,500 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈ ಸಂದರ್ಭದಲ್ಲಿ ಅಮರನಾಥ ಶೆಟ್ಟರಿಗೆ 20,471 ಮತಗಳು ಬಂದಿದ್ದವು. ಅಲ್ಲದೇ ಈ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿ ಕೂಡ 1,354 ಮತಗಳನ್ನು ಪಡೆದಿದ್ದರು.

ಈ ಎರಡೂ ಚುನಾವಣೆಗಳಲ್ಲಿ ಅಮರನಾಥ ಶೆಟ್ಟರು ಪಡೆದ ಮತಗಳು ಬಿಜೆಪಿ ಅಭ್ಯರ್ಥಿಗಳ ಪಾಲಿಗೆ ನಿರ್ಣಾಯಕವಾಗಿ ಪರಿಣಮಿಸಿದವು. ಈ ಬಾರಿ ಅಮರನಾಥ ಶೆಟ್ಟಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಅಲ್ಲದೇ ಕೆಜೆಪಿ ಅಭ್ಯರ್ಥಿಯೂ ಇಲ್ಲ. ಹೀಗಾಗಿ ಈ ಬಾರಿ ಮೂಡುಬಿದಿರೆ ಕ್ಷೇತ್ರದಲ್ಲಿ ಕಮಲ ಅರಳಿಸಲು ಅವಕಾಶಗಳು ಹೆಚ್ಚಾಗಿವೆ ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.

ನಾಲ್ಕು ಬಾರಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿರುವ ಕಾಂಗ್ರೆಸ್‌ಗೆ, ಈ ಬಾರಿ ಅಮರನಾಥ ಶೆಟ್ಟರು ಇಲ್ಲದೇ ಇರುವುದು ಸ್ವಲ್ಪ ಮಟ್ಟಿಗೆ ಹಿನ್ನಡೆ ಉಂಟು ಮಾಡಬಹುದು ಎನ್ನುವ ಆತಂಕ ಕಾಂಗ್ರೆಸ್‌ನಲ್ಲಿಯೂ ಇದೆ. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅಭಯಚಂದ್ರ ಜೈನ್‌ ಅವರಿಗೆ ಈ ಬಾರಿ ಗೆಲುವು ಸುಲಭದ ತುತ್ತಾಗಲಿಕ್ಕಿಲ್ಲ ಎನ್ನುವ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.

ಪ್ರಮುಖವಾಗಿ ಬಿಲ್ಲವ ಸಮುದಾಯದ ಮತಗಳೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ಬಿಜೆಪಿಯಿಂದ ಬಿಲ್ಲವ ಸಮುದಾಯದ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಮೂಲಕ ಆ ಮತಗಳನ್ನು ಸೆಳೆಯುವ ಪ್ರಯತ್ನಗಳೂ ತೆರೆಮರೆಯಲ್ಲಿ ನಡೆದಿವೆ.

ಕಾಂಗ್ರೆಸ್‌ ಒಡಕಿನ ಲಾಭ

ಕ್ಷೇತ್ರದ ಟಿಕೆಟ್‌ಗಾಗಿ ಈಗಾಗಲೇ ಕಾಂಗ್ರೆಸ್‌ನಲ್ಲಿ ಪೈಪೋಟಿ ಆರಂಭವಾಗಿದೆ. ಒಂದೆಡೆ ಹಾಲಿ ಶಾಸಕ ಅಭಯಚಂದ್ರ ಜೈನ್‌ ಸ್ಪರ್ಧೆ ಮಾಡುವುದು ಬಹುತೇಕ ನಿಶ್ಚಿತವಾಗಿದೆ. ಇನ್ನೊಂದೆಡೆ ಪಕ್ಷದ ಟಿಕೆಟ್‌ಗಾಗಿ ವಿಧಾನ ಪರಿಷತ್ ಸದಸ್ಯ ಐವನ್‌ ಡಿಸೋಜ ಕೂಡ ಪೈಪೋಟಿ ಆರಂಭಿಸಿದ್ದಾರೆ. ಇದರಿಂದ ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟವೂ ಹೆಚ್ಚಾಗಿದೆ. ಒಂದು ವೇಳೆ ಅಭಯಚಂದ್ರ ಜೈನ್‌ರಿಗೆ ಟಿಕೆಟ್‌ ಸಿಕ್ಕರೆ, ಐವನ್‌ ಅವರಿಗೆ ಅಸಮಾಧಾನ ಆಗುವುದು ಸಹಜ. ಐವನ್‌ಗೆ ಟಿಕೆಟ್‌ ಸಿಕ್ಕರೆ, ಅಭಯಚಂದ್ರ ಜೈನ್‌ ಪಾಳೆಯದಿಂದ ಕಾಂಗ್ರೆಸ್‌ಗೆ ಸಂಕಷ್ಟ ಎದುರಾಗಲಿದೆ. ಇದರ ಲಾಭ ಪಡೆಯಬೇಕು ಎನ್ನುವ ತಂತ್ರವನ್ನು ಬಿಜೆಪಿ ಅನುಸರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT