ಮಾಯಕೊಂಡ: ಕೃಷಿ ಇಲಾಖೆ ಅಧಿಕಾರಿಗಳು ಸಹಾಯಧನದಲ್ಲಿ ದೊರೆಯುವ ಕೃಷಿ ಪರಿಕರಗಳನ್ನು ರೈತರಿಗೆ ಸಮರ್ಪಕವಾಗಿ ವಿತರಿಸದೆ ಅನ್ಯಾಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಸೋಮವಾರ ಮಾಯಕೊಂಡ ರೈತ ಸಂಪರ್ಕ ಕೇಂದ್ರದ ಬಳಿ ಪ್ರತಿಭಟನೆ ನಡೆಸಿದರು.
‘ಕೃಷಿ ಇಲಾಖೆ ಅಧಿಕಾರಿಗಳು ರೈತರ ಪರವಾಗಿ ಕೆಲಸ ಮಾಡದೆ ತೀರಾ ಅಸಡ್ಡೆ ತೋರುತ್ತಿದ್ದಾರೆ. ಪಿಎಂ ಕಿಸಾನ್ ಯೋಜನೆ ಇನ್ನೂ ಹಲವು ರೈತರಿಗೆ ತಲುಪಿಲ್ಲ. ಇದಕ್ಕೆ ಅಧಿಕಾರಿಗಳು ನೇರ ಹೊಣೆ. ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ಒದಗಿಸದೆ ಮರೆ ಮಾಚುತ್ತಾರೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗುಮ್ಮನೂರು ಬಸವರಾಜ್ ದೂರಿದರು.
ಪ್ರಸಕ್ತ ವರ್ಷ ಮಳೆಗಾಲದ ಬೆಳೆಗಳು ಬಹುತೇಕ ಹಾಳಾಗಿವೆ. ಆದರೂ, ಜಮೀನುಗಳಿಗೆ ತೆರಳಿ ವಾಸ್ತವಾಂಶದ ಸರ್ವೆ ಮಾಡದೆ ಕಚೇರಿಯಲ್ಲಿಯೇ ಕಾಲ ಕಳೆಯುತ್ತಾರೆ. ಬಿತ್ತನೆ ಬೀಜ, ತಾಡಪಲ್, ಕೀಟನಾಶಕಗಳು, ಸ್ಪ್ರೇಯರ್, ಟ್ರ್ಯಾಕ್ಟರ್ ಚಾಲಿತ ಯಂತ್ರೋಪಕರಣಗಳ ಸರಬರಾಜು ಮಾಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಎಸ್‌ಸಿ, ಎಸ್‌ಟಿಗಳಿಗೆ ಅಗತ್ಯವಿರುವ ಪರಿಕರಗಳನ್ನು ಒದಗಿಸದೆ ಒಂದೆರಡು ನೀಡಿ, ಅವರಿಗೆ ಬೇಕಾದವರಿಗೆ ಕೊಟ್ಟು ಕೈತೊಳೆದುಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.
ರೈತ ಮುಖಂಡ ರಾಮಜೋಗಿ ಪ್ರತಾಪ್ ಮಾತನಾಡಿ, ‘ಕೃಷಿ ಇಲಾಖೆಯಲ್ಲಿ ಸಿಗುವ ಪರಿಕರಗಳನ್ನು ಅವರಿಗೆ ಬೇಕಾದವರಿಗೆ ನೀಡುತ್ತಾರೆ. ಪರಿಕರಗಳ ಮಾಹಿತಿ ಹಾಗೂ ದರವನ್ನು ನೋಟಿಸ್ ಬೋರ್ಡ್‌ನಲ್ಲಿ ಜನರಿಗೆ ಕಾಣುವಂತೆ ಹಾಕಬೇಕು. ಮಾರಾಟ ಮಾಡುವ ಎಲ್ಲ ಪರಿಕರಗಳಿಗೂ ಬಿಲ್ ನೀಡುವ ವ್ಯವಸ್ಥೆ ಆಗಬೇಕು’ ಎಂದು ಒತ್ತಾಯಿಸಿದರು.
‘ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸದಾ ರೈತಸ್ನೇಹಿಯಾಗಿ ಕೆಲಸ ನಿರ್ವಹಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಕೊಳ್ಳುತ್ತೇನೆ. ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಸಿಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಇಲಾಖೆಯದ್ದು. ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು’ ಎಂದು ಕೃಷಿ ಅಧಿಕಾರಿ ಬೀರಪ್ಪ ಕೆ. ತಿಳಿಸಿದರು.
ರೈತ ಮುಖಂಡರಾದ ಮಲ್ಲಿಕಾರ್ಜುನ್, ಎಸ್.ಜಿ.ರುದ್ರೇಶ್, ಕಿರಣ್, ನಾಗರಾಜ, ರಂಗಪ್ಪ, ಪರಶುರಾಮ, ರಮೇಶ, ಪ್ರವೀಣ್, ಬಸಮ್ಮ, ರತ್ನಮ್ಮ, ತಿಮ್ಮಜ್ಜ, ಪುಟ್ಟಪ್ಪ, ಹನುಮಂತಪ್ಪ, ಯಲ್ಲಪ್ಪ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.