ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತನ ಸಂಬಂಧಿಕರಿಂದ ಪ್ರತಿಭಟನೆ

ವೈದ್ಯರ ನಿರ್ಲಕ್ಷ್ಯದಿಂದ ರೋಗಿ ಸಾವು: ಆರೋಪ
Last Updated 10 ಮೇ 2019, 19:50 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ಕೆಟಿಜೆ ನಗರದ ಕ್ಲಿನಿಕ್‌ನ ವೈದ್ಯರ ನಿರ್ಲಕ್ಷ್ಯದಿಂದ ರೋಗಿ ರುದ್ರಪ್ಪ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಸಂಬಂಧಿಕರು ಜಿಲ್ಲಾ ಆಸ್ಪತ್ರೆ ಎದುರು ಶುಕ್ರವಾರ ಪ್ರತಿಭಟಿಸಿದರು. ವೈದ್ಯರನ್ನು ಬಂಧಿಸಿ, ಮೃತರ ಕುಟುಂಬದವರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಹರಪನಹಳ್ಳಿ ತಾಲ್ಲೂಕಿನ ಹಗರಿಗಜಾಪುರ ರುದ್ರಪ್ಪ (63) ವೈದ್ಯರ ನಿರ್ಲಕ್ಷ್ಯದಿಂದಲೇ ರುದ್ರಪ್ಪ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ ಸಂಬಂಧಿಕರು ಕುಟುಂಬದವರಿಗೆ ₹ 10 ಲಕ್ಷ ಪರಿಹಾರ ನೀಡಬೇಕು. ಡಾ. ವಿಶ್ವನಾಥ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

‘ಕಾಲಿಗೆ ಗಾಯವಾಗಿ ನೋವಿನಿಂದ ಬಳಲುತ್ತಿದ್ದ ತಂದೆ ರುದ್ರಪ್ಪ ಅವರನ್ನು ಚಿಕಿತ್ಸೆಗಾಗಿ ಕೆಟಿಜೆ ನಗರದ ಕ್ಲಿನಿಕ್‌ಗೆ ಕರೆತರಲಾಗಿತ್ತು. ಡಾ. ವಿಶ್ವನಾಥ ಚುಚ್ಚುಮದ್ದು ನೀಡುತ್ತಿದ್ದಂತೆ ಬಾಯಲ್ಲಿ ಬುರುಗು ಬಂದು ನರಳತೊಡಗಿದರು. ಸಿ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದರು. ಕೆಲ ಕ್ಷಣದಲ್ಲೇ ತಂದೆ ಮೃತಪಟ್ಟರು. ತಂದೆ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ’ ಎಂದು ರುದ್ರಪ್ಪ ಪುತ್ರಿ ಸರಳಾ ಆರೋಪಿಸಿದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಚ್‌.ಜಿ. ಉಮೇಶ್‌, ‘ರುದ್ರಪ್ಪ ದಾವಣಗೆರೆಯಲ್ಲಿನ ಮಗಳ ಮನೆಗೆ ಬಂದಿದ್ದರು. ಕಾಲಿಗೆ ಗಾಯವಾಗಿದ್ದ ಕಾರಣಕ್ಕೆ ಖಾಸಗಿ ಕ್ಲಿನಿಕ್‌ನ ವೈದ್ಯರ ಬಳಿಗೆ ಬಂದಿದ್ದರು. ವೈದ್ಯರು ಚುಚ್ಚುಮದ್ದು ನೀಡಿದ ಕೂಡಲೇ ಬಿದ್ದು ಒದ್ದಾಡಿ ಮೃತಪಟ್ಟಿದ್ದಾರೆ. ರುದ್ರಪ್ಪ ಸಾವಿಗೆ ಕಾರಣರಾದ ಡಾ. ವಿಶ್ವನಾಥ್‌ ಅವರ ಪ್ರಮಾಣಪತ್ರ ರದ್ದು ಮಾಡಿ ಕೂಡಲೇ ಬಂಧಿಸಬೇಕು. ಮೃತರ ಕುಟುಂಬಕ್ಕೆ ₹ 10 ಲಕ್ಷ ಪರಿಹಾರ ನೀಡಬೇಕು. ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಮೃತನ ಸಂಬಂಧಿಕರು, ಬಡಾವಣೆ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ವೈದ್ಯರ ವಿರುದ್ಧ ರುದ್ರಪ್ಪ ಪುತ್ರ ಕೊಟ್ರೇಶ್‌ ಕೆಟಿಜೆ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT