ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ಯಾರೂ ಮುಖ್ಯರಲ್ಲ; ಅಮುಖ್ಯರೂ ಅಲ್ಲ...

ಜಿಲ್ಲೆಯ ಜನರಲ್ಲಿ ಬೆಳೆದ ರಾಜಕೀಯ ಪ್ರಜ್ಞಾವಂತಿಕೆ; ಫಲಿಸದ ತಾರಾ ಪ್ರಚಾರ
Last Updated 17 ಮೇ 2018, 10:27 IST
ಅಕ್ಷರ ಗಾತ್ರ

ಕೊಪ್ಪಳ: ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರೂ ಅಲ್ಲ. ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಹೇಳಿರುವ ಕುವೆಂಪು ಅವರ ಈ ಮಾತು ಜಿಲ್ಲೆಯ ರಾಜಕೀಯ ವಿದ್ಯಮಾನಗಳಿಗೆ ಸರಿಯಾಗಿ ಹೊಂದುತ್ತದೆ.

ಜಿಲ್ಲೆಯಮಟ್ಟಿಗೆ ಯಾವ ಪಕ್ಷದ ತಾರಾ ಪ್ರಚಾರಕರ ವರ್ಚಸ್ಸು, ಭಾಷಣಗಳು ಕೆಲಸ ಮಾಡುವುದಿಲ್ಲ. ಹಣ ಪಡೆದವರೆಲ್ಲರೂ ಆ ಅಭ್ಯರ್ಥಿಗೇ ಮತ ಹಾಕುತ್ತಾರೆ ಎಂಬ ಖಾತ್ರಿ ಇಲ್ಲ. ವ್ಯಕ್ತಿಯ ವರ್ಚಸ್ಸು, ಕೆಲಸ ಮಾಡುವ ಮನೋಭಾವ, ಸ್ವಲ್ಪಮಟ್ಟಿಗೆ ಅನುಕಂಪ ಇವಷ್ಟೇ ಚುನಾವಣೆಯಲ್ಲಿ ಕೆಲಸ ಮಾಡಿವೆ. ಸ್ಥಳೀಯ ವಿಷಯಗಳು, ಜನರ ಮನೋಭಾವ ಅಷ್ಟೇ ಇಲ್ಲಿ ಮುಖ್ಯವಾಗುತ್ತದೆ.

ಜಿಲ್ಲೆಯಲ್ಲಿ ಮೂರು ಸ್ಥಾನಗಳನ್ನು ಬಿಜೆಪಿ ಪಡೆಯುವ ಮೂಲಕ ಗೆಲುವಿನ ಗರಿ ಮುಡಿಗೇರಿಸಿದೆ. ಬಿಜೆಪಿಯದ್ದೇನಿದ್ದರೂ ಕೊನೆಯ ಕ್ಷಣದ ಕಸರತ್ತು. ಆದರೆ, ಅದು ಕೂಡ ಕೊಪ್ಪಳ ಮತ್ತು ಕುಷ್ಟಗಿಯಲ್ಲಿ ಕೈಕೊಟ್ಟಿದೆ.

ಸಂಗಣ್ಣ ಅವರು ತಮ್ಮ ಪುತ್ರನಿಗೆ ಟಿಕೆಟ್‌ ನೀಡುವಂತೆ ಬೇಡಿಕೆ ಇಟ್ಟದ್ದು ಹಲವು ಬಿಜೆಪಿ ಮುಖಂಡರನ್ನು ಕೆರಳಿಸಿ ಅವರು ಪಕ್ಷ ಬಿಟ್ಟು ಕಾಂಗ್ರೆಸ್‌ ಸೇರಿದ ವಿದ್ಯಮಾನ ನಡೆಯಿತು. ಆದರೆ, ಗಂಗಾವತಿಯಲ್ಲಿ ಬಿಜೆಪಿ ಗೆಲುವು ತಡೆಯಲು ಅವರಿಂದ ಆಗಲಿಲ್ಲ. ಕಾಂಗ್ರೆಸ್‌ನ ಕೆಲವು ಹಿರಿಯ ನಾಯಕರು ಬಿಜೆಪಿ ತೆಕ್ಕೆಯೊಳಗೆ ಸೇರಿದರು. ಅದರಿಂದಲೂ ಗಂಭೀರ ಪರಿಣಾಮ ಆಗಲಿಲ್ಲ. ಗಂಗಾವತಿಯಲ್ಲಿ ಕಾಂಗ್ರೆಸ್‌ ಒಡೆದ ಮನೆಯಾಗಿ ಅದರ ಒಂದು ಭಾಗ ಜೆಡಿಎಸ್‌ ಸೇರಿತು. ಹಾಗಿದ್ದರೂ ಅತ್ತ ಕಾಂಗ್ರೆಸನ್ನೂ ಗೆಲ್ಲಿಸಲಾಗಲಿಲ್ಲ. ಜೆಡಿಎಸ್‌ಗೆ ಒಂದು ಸ್ಥಾನ ಗಳಿಸಿಕೊಡಲೂ ಈ ನಾಯಕರು ವಿಫಲರಾದರು. ಹಾಗಾಗಿ ಯಾರೇ ಇದ್ದರೂ, ಇಲ್ಲದಿದ್ದರೂ ಮತದಾರ ತನ್ನದೇ ಆದ ನಿರ್ಧಾರ ಪ್ರಕಟಿಸುತ್ತಾನೆ. ಅವನಿಗೆ ಯಾರ ಉಪಸ್ಥಿತಿಯೂ ಮುಖ್ಯವಾಗುವುದಿಲ್ಲ ಎಂಬುದನ್ನು ಚುನಾವಣೆ ಸಾರಿದೆ.

ಬಿಜೆಪಿಯ ಆಂತರಿಕ ಮೂಲಗಳು ಚುನಾವಣಾ ಪೂರ್ವದಲ್ಲೇ ಹೇಳಿರುವ ಪ್ರಕಾರ ಅವರಿಗೂ ಕೊಪ್ಪಳ ಕ್ಷೇತ್ರದ ಗೆಲುವಿನ ಬಗ್ಗೆ ಸಂದೇಹ ಇತ್ತು. ಉಳಿದ ನಾಲ್ಕು ಕ್ಷೇತ್ರಗಳ ಮೇಲೆ ಬಲವಾದ ವಿಶ್ವಾಸ ಇತ್ತು. ಅದರಲ್ಲಿ ಕುಷ್ಟಗಿ ಕ್ಷೇತ್ರ ಕೈತಪ್ಪಿ ಹೋಯಿತು. ಕೊಪ್ಪಳದಲ್ಲಾದರೆ ಅಭ್ಯರ್ಥಿಯ ಸಿದ್ಧತೆಗೆ ಸಮಯ ಸಿಗಲಿಲ್ಲ. ಗಂಗಾವತಿಯ ಪರಿಸ್ಥಿತಿಯೂ ಭಿನ್ನವೇನಿರಲಿಲ್ಲ. ಅಲ್ಲೂ ಹೆಚ್ಚು ಕಡಿಮೆ ಕೊಪ್ಪಳದ ಸ್ಥಿತಿಯೇ ಇತ್ತು. ಐದು ಜನ ಆಕಾಂಕ್ಷಿಗಳ ನಡುವೆ ಪರಣ್ಣ ಟಿಕೆಟ್‌ ಗಿಟ್ಟಿಸಿಕೊಂಡರು. ಅಸಮಾಧಾನ, ದುಸುಮುಸುಗಳ ನಡುವೆ ಸ್ಪರ್ಧಿಸಬೇಕಾದ ಸವಾಲು ಪರಣ್ಣ ಅವರಿಗಿತ್ತು. ಕೆಲವು ಮುಖಂಡರು ಪಕ್ಷ ಬಿಟ್ಟು ಹೋದ ಪರಿಣಾಮವನ್ನೂ ನಿಭಾಯಿಸಬೇಕಿತ್ತು. ಆದರೆ, ಕುಷ್ಟಗಿಯ ಅಭ್ಯರ್ಥಿಯನ್ನು ಮೊದಲ ಪಟ್ಟಿಯಲ್ಲೇ ಘೋಷಿಸಲಾಗಿತ್ತು. ಸಾಕಷ್ಟು ಸಮಯವೂ ಬಿಜೆಪಿಗೆ ಅಲ್ಲಿ ಸಿಕ್ಕಿತ್ತು.

ಫಲಿಸದ ರಾಹುಲ್‌, ಮೋದಿ ಮಂತ್ರ: ಎಲ್ಲ ತಂತ್ರಗಳೂ ನಿರೀಕ್ಷಿತ ರೀತಿಯಲ್ಲಿ ಪರಿಣಾಮ ಮಾಡದಿದ್ದಾಗ ಬಿಜೆಪಿ ನಂಬಿಕೊಂಡಿದ್ದು ಮೋದಿ ಮಂತ್ರ. ಪ್ರಧಾನಿ ನರೇಂದ್ರ ಮೋದಿ ಅವರು ಕೊಪ್ಪಳದಲ್ಲಿ ಮಾಡಿದ ಭಾಷಣ ಮತಗಳ ಅಲೆಯಾಗಿ ಪರಿವರ್ತನೆಯಾಗುತ್ತದೆ ಎಂದು ಬಿಜೆಪಿ ನಂಬಿತ್ತು. ಆದರೆ, ಕೊಪ್ಪಳ ಕ್ಷೇತ್ರದಲ್ಲೇ ಅದು ಕೈಕೊಟ್ಟಿತು. ಕುಷ್ಟಗಿಯಲ್ಲೂ ಇದೇ ಪರಿಣಾಮದ ಪುನರಾವರ್ತನೆ. ಅಮಿತ್‌ ಷಾ ಆಗಮನ ಯಲಬುರ್ಗಾದಲ್ಲಿ ಸ್ವಲ್ಪ ಕೆಲಸ ಮಾಡಿದೆ.

ಸಾಕಷ್ಟು ಮುಂಚಿತವಾಗಿ ಆಗಮಿಸಿ ಹವೆ ಎಬ್ಬಿಸಲು ಯತ್ನಿಸಿದ ರಾಹುಲ್‌ ಗಾಂಧಿ ಅವರ ಪ್ರಚಾರ ಸಭೆಗಳು ಕಾಂಗ್ರೆಸ್‌ನ್ನು ಎರಡೇ ಸ್ಥಾನದಲ್ಲಿ ಉಳಿಸಿದವು.

'ಆರ್ಥಿಕ, ಸಂಪನ್ಮೂಲಗಳ ವಿಚಾರವಾಗಿ ಜಿಲ್ಲೆ ಹಿಂದುಳಿದಿದೆ. ಆದರೆ, ರಾಜಕೀಯ ಪ್ರಜ್ಞಾವಂತಿಕೆ ಜನರಲ್ಲಿ ಬೆಳೆದಿದೆ. ಅದನ್ನು ಬದಲಾಯಿಸುವುದು ಸುಲಭವಲ್ಲ' ಎನ್ನುತ್ತಾರೆ ಅಳವಂಡಿಯ ಯುವ ಮುಖಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT