ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಭವನದ ಎದುರು ಮಳಿಗೆ ನಿರ್ಮಾಣಕ್ಕೆ ವಿರೋಧ

ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರಿಂದ ‍ಪ್ರತಿಭಟನೆ
Last Updated 29 ನವೆಂಬರ್ 2022, 5:06 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ರೈತ ಭವನದ ಕಾಂಪೌಂಡ್ ತೆರವು ಮಾಡಿ ಅಲ್ಲಿ ಮಳಿಗೆಗಳನ್ನು ನಿರ್ಮಿಸಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ರೈತ ಭವನದಿಂದ ಸೇನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಯ ಕಚೇರಿವರೆಗೂ ಬೈಕ್ ರ್‍ಯಾಲಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

‘ರಾಜ್ಯದಲ್ಲೇ ಉತ್ತಮ ಸ್ಥಿತಿಯಲ್ಲಿರುವ ರೈತ ಭವನ ಇದಾಗಿದ್ದು, 10X20 ಅಳತೆಯ ನಿವೇಶನಗಳನ್ನಾಗಿ ಪರಿವರ್ತಿಸಿ ವರ್ತಕರಿಗೆ ಹಂಚಿರುವುದನ್ನು ರೈತ ಮುಖಂಡರು ಒಕ್ಕೊರಲಿನಿಂದ ವಿರೋಧಿಸಿದರು. ಅಲ್ಲದೇ ಈ ಆದೇಶವನ್ನು ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು.

‘ಈಗಾಗಲೇ ಕಿಷ್ಕಿಂಧೆಯಂತೆ ಇರುವ ತರಕಾರಿ ಮಾರುಕಟ್ಟೆಯಲ್ಲಿ ಮತ್ತೆ ಮಳಿಗೆಗಳನ್ನು ನಿರ್ಮಿಸಿದರೆ ರಸ್ತೆ ಇನ್ನೂ ಇಕ್ಕಟ್ಟಾಗುತ್ತದೆ. ಇದರಿಂದ ರೈತರು ತರಕಾರಿಗಳನ್ನು ಮಾರುಕಟ್ಟೆಗೆ ತಂದರೆ ಅವುಗಳನ್ನು ಇಳಿಸಲು ತೊಂದರೆಯಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಮಳಿಗೆಗಳನ್ನು ಕಟ್ಟಲು ನಾವು ಬಿಡುವುದಿಲ್ಲ’ ಎಂದು ರೈತ ಮುಖಂಡ ಹುಚ್ಚವನಹಳ್ಳಿ ಮಂಜುನಾಥ್ ಎಚ್ಚರಿಸಿದರು.

‘ಎಪಿಎಂಸಿ ಕಾರ್ಯದರ್ಶಿ ಅಕ್ರಮವಾಗಿ ವರ್ತಕರ ಜೊತೆ ಶಾಮೀಲಾಗಿ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ಮುಖಾಂತರ ಈ ರೈತ ಭವನದ ಜಾಗವನ್ನು ನಿವೇಶನಗಳಾಗಿ ಪರಿವರ್ತಿಸಿ ದಲ್ಲಾಳರಿಗೆ ಹಂಚಿಕೆ ಮಾಡಲಾಗಿದೆ. ಇದನ್ನು ಯಾವುದೇ ಕಾರಣಕ್ಕೂ ರೈತರು ಸಹಿಸುವುದಿಲ್ಲ’ ಎಂದು ಮುಖಂಡ ಚಿನ್ನಸಮುದ್ರದ ಶೇಖರ್ ನಾಯ್ಕ್ ಹೇಳಿದರು.

ರೈತ ಮುಖಂಡ ಬಲ್ಲೂರ್ ರವಿಕುಮಾರ್ ಮಾತನಾಡಿ, ‘ಎಪಿಎಂಸಿಯಲ್ಲಿ ನೂರಾರು ಎಕರೆ ಜಾಗ ಖಾಲಿ ಬಿದ್ದಿದ್ದು, ಅಲ್ಲಿ ಎಲ್ಲಾದರೂ ಮಳಿಗೆಗಳನ್ನು ನಿರ್ಮಿಸಿ ವರ್ತಕರಿಗೆ ಅನುಕೂಲ ಮಾಡಿಕೊಡಲಿ. ಆದರೆ ರೈತಭವನವನ್ನು ಧ್ವಂಸಗೊಳಿಸಿ ಮಳಿಗೆಗಳನ್ನು ಕಟ್ಟಲು ನಾವು ಬಿಡುವುದಿಲ್ಲ’ ಎಂದು ಎಚ್ಚರಿಸಿದರು.

‘ರೈತ ಭವನದ ಕಾಂಪೌಂಡ್ ಅನ್ನು ತೆರವುಗೊಳಿಸಿ ಅಕ್ರಮವಾಗಿ ನಿವೇಶನ ಮಾಡಲು ಎಪಿಎಂಸಿ ಮುಂದಾದರೆ ಹೋರಾಟ ಮಾಡಿ ನಾವು ರೈತ ಭವನ ಉಳಿಸಿಕೊಳ್ಳುತ್ತೇವೆ’ ಎಂದು ರೈತ ಮುಖಂಡ ಹೊನ್ನೂರು ಮುನಿಯಪ್ಪ ಹೇಳಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ‘ತರಕಾರಿ ಮಾರುಕಟ್ಟೆಯ ಸ್ಥಳ ಪರಿಶೀಲನೆ ಮಾಡಿ ಕಾನೂನು ಚೌಕಟ್ಟಿನಲ್ಲಿ ಚರ್ಚಿಸಿ ರೈತರ ಭವನವನ್ನು ಉಳಿಸಿಕೊಡುತ್ತೇವೆ’ ಎಂದು ಭರವಸೆ ನೀಡಿದರು. ಮುಖಂಡರಾದ ಪೂಜಾರ್ ಅಂಜನಪ್ಪ, ಗುಮ್ಮನೂರ್ ಬಸವರಾಜ್, ನೀರ್ಥಡಿ ತಿಪ್ಪೇಸ್ವಾಮಿ, ಆಲೂರು ಪರಶುರಾಮ್, ಪರಶುರಾಂಪುರದ ಮರಳುಸಿದ್ದಯ್ಯ, ಗೋಶಾಲೆ ಬಸವರಾಜ್, ಅಣಬೇರು ಕುಮಾರಸ್ವಾಮಿ, ಕೋಲ್ಕುಂಟೆ ಬಸವರಾಜ್, ಕುರ್ಕಿ ಹನುಮಂತ, ಗಂಗನಕಟ್ಟೆ ಷಣ್ಮುಖಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT