ಶುಕ್ರವಾರ, ಡಿಸೆಂಬರ್ 2, 2022
19 °C
ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ

ವಿದ್ಯಾರ್ಥಿ ವೇತನ ಬಿಡುಗಡೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಿಹರ: ಹಿಂದಿನ ಶೈಕ್ಷಣಿಕ ಸಾಲಿನ ಬಾಕಿ ಇರುವ ವಿದ್ಯಾರ್ಥಿ ವೇತನ ಬಿಡುಗಡೆ ಹಾಗೂ ಯುಯುಸಿಎಂಎಸ್ ತಂತ್ರಾಂಶ ಸರಿಪಡಿಸಿ ಫಲಿತಾಂಶ ಪ್ರಕಟಿಸಲು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ಗುರುವಾರ ನೂರಾರು ವಿದ್ಯಾರ್ಥಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಧ.ರಾ.ಮ ಕಾಲೇಜು ಆವರಣದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಕಾರರು ಪ್ರಮುಖ ರಸ್ತೆಗಳ ಮೂಲಕ ಮಹಾತ್ಮ ಗಾಂಧಿ ವೃತ್ತಕ್ಕೆ ಬಂದು ಕೆಲ ಸಮಯ ಮಾನವ ಸರಪಳಿ ರಚಿಸಿದರು. ನಂತರ ತಾಲ್ಲೂಕು ಕಚೇರಿಗೆ ಬಂದು ತಹಶೀಲ್ದಾರ್ ಡಾ.ಎಂ.ಬಿ.ಅಶ್ವತ್ಥ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ನೀಡಿದರು.

ನಂತರ ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕೊಳ್ಳೆರ ಮಾತನಾಡಿ, ‘2021-22ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರದಿಂದ ಅರ್ಹ ವಿದ್ಯಾರ್ಥಿಗಳಿಗೆಲ್ಲರಿಗೂ ವಿದ್ಯಾರ್ಥಿ ವೇತನ ನೀಡಿಲ್ಲ. ಇದರಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಹಣಕಾಸಿನ ತೊಂದರೆ ಎದುರಾಗಿದೆ. ರಾಜ್ಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನವನ್ನು ಆಧರಿಸಿ ಶಿಕ್ಷಣ ಪಡೆಯುತ್ತಿದ್ದಾರೆ. ಅಂತಹವರಿಗೆ ಶಿಕ್ಷಣ ಮುಂದುವರಿಸಲು ಅಡಚಣೆ ಉಂಟಾಗಿದೆ. ಸರ್ಕಾರ ಸಬೂಬುಗಳನ್ನು ಹೇಳದೇ ಉಳಿದ ಎಲ್ಲ ಅರ್ಹ ವಿದ್ಯಾರ್ಥಿಗಳಿಗೂ ಕೂಡಲೇ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದ ನಂತರ ಎಲ್ಲ ವಿಶ್ವವಿದ್ಯಾಲಯಗಳು ಯುಯುಸಿಎಂಎಸ್ ತಂತ್ರಾಂಶ ಬಳಸಿ ದಾಖಲಾತಿಯಿಂದ ಫಲಿತಾಂಶದವರೆಗೆ ಎಲ್ಲ ರೀತಿಯ ಮಾಹಿತಿಗಳನ್ನು ಇದರ ಮೂಲಕವೇ ನಮೂದಿಸಬೇಕಿದೆ. ಆದರೆ ಈ ತತ್ರಾಂಶದಲ್ಲಿರುವ ಕೆಲವು ಸಮಸ್ಯೆಗಳಿಂದಾಗಿ ಹಾಸ್ಟೆಲ್‌ಗೆ ಅರ್ಜಿ ಸಲ್ಲಿಸಲು, ಬೇರೆ ಕಾಲೇಜಿಗೆ ವರ್ಗಾವಣೆ ಪಡೆಯಲು, ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ತೊಂದರೆ ಉಂಟಾಗಿದೆ. ವಿಶ್ವವಿದ್ಯಾಲಯಗಳು ಸರಿಯಾದ ರೀತಿಯಲ್ಲಿ ಫಲಿತಾಂಶವನ್ನು ನೀಡದಿರುವುದರಿಂದ ಹಲವು ರೀತಿಯ ಸಮಸ್ಯೆಗಳನ್ನು ರಾಜ್ಯದ ವಿದ್ಯಾರ್ಥಿ ಸಮೂಹ ಎದುರಿಸುತ್ತಿದೆ. ಕೂಡಲೇ ಯುಯುಸಿಎಂಎಸ್ ತಂತ್ರಾಂಶ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೊಟ್ರೇಶ್, ನಗರ ಸಹ ಕಾರ್ಯದರ್ಶಿ ವಿನಯ್ ಹಾಗೂ ನೂರಾರು
ವಿದ್ಯಾರ್ಥಿಗಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು