ಶುಕ್ರವಾರ, ಡಿಸೆಂಬರ್ 4, 2020
22 °C

ರೈತ ವಿರೋಧಿ ನೀತಿ ಖಂಡಿಸಿ ನ.26ರಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಡಿಹಳ್ಳಿ ಚಂದ್ರಶೇಖರ್‌

ದಾವಣಗೆರೆ: ಕೇಂದ್ರ, ರಾಜ್ಯ ಸರ್ಕಾರಗಳ ರೈತ ವಿರೋಧಿ ಕಾಯ್ದೆ ಜಾರಿಗೆ ತರುವ ಮೂಲಕ ರೈತರನ್ನು ಕೃಷಿಯಿಂದ ಒಕ್ಕಲೆಬ್ಬಿಸುವ ಹುನ್ನಾರ ನಡೆಸಿವೆ. ಇದನ್ನು ಖಂಡಿಸಿ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ನ.26,27 ರಂದು ರೈತರ ಬೃಹತ್ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಯಲ್ಲಿ ರಾಜ್ಯದ ನೂರಾರು ರೈತರು ಭಾಗವಹಿಸಲಿದ್ದಾರೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ) ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

‘ಎಪಿಎಂಸಿ ತಿದ್ದುಪಡಿ, ಅಗತ್ಯ ವಸ್ತುಗಳ ಕಾಯ್ದೆ, ಕೃಷಿ ಬೆಲೆ ನೀತಿ, ಭೂ ಸುಧಾರಣಾ ಕಾಯ್ದೆಗಳ ತಿದ್ದುಪಡಿ ಮೂಲಕ ಸರ್ಕಾರಗಳು ಗ್ರಾಮೀಣ ಜನರನ್ನು ಒಕ್ಕಲೆಬ್ಬಿಸುತ್ತಿವೆ. ಈ ಮೂಲಕ ಕಾರ್ಪೊರೇಟ್‌, ಎಂಎನ್‌ಸಿ ಕಂಪೆನಿಗಳಿಗೆ ಅನುಕೂಲ ಮಾಡಿಕೊಡಲು ಮುಂದಾಗಿವೆ. ಈಗಾಗಲೇ ಬಿತ್ತನೆ ಬೀಜದ ಸೌರ್ವಭೌಮತ್ವ ರೈತರ ಕೈತಪ್ಪಿ ಹೋಗಿದೆ. ಈರುಳ್ಳಿ, ಆಲೂಗಡ್ಡೆ, ಮೆಕ್ಕೆಜೋಳ, ಬೇಳೆಕಾಳು, ಎಣ್ಣೆಕಾಳು, ಸಿರಿಧಾನ್ಯಗಳನ್ನು ಅಗತ್ಯ ವಸ್ತುಗಳ ಕಾಯ್ದೆಯಿಂದ ಹೊರಗಿಡಲಾಗಿದೆ. ಇದರಿಂದ ಕನಿಷ್ಠ ಬೆಂಬಲ ಬೆಲೆ ಸಿಗುವುದಿಲ್ಲ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಯಾವುದೇ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಇರದಿದ್ದರೆ ಮಾರುಕಟ್ಟೆಯಲ್ಲಿ ಅದರ ಬೆಲೆ ದಿಢೀರ್‌ ಏರಿಕೆಯಾಗುತ್ತದೆ. ಈಚೆಗೆ ಈರುಳ್ಳಿ, ತೊಗರಿ ಬೆಳೆಯ ಬೆಲೆ ಹೀಗೆ ಏರಿಕೆಯಾಗಿತ್ತು. ಅಗತ್ಯ ವಸ್ತುಗಳ ಕಾಯ್ದೆಯಿಂದ ಬೆಳೆಗಳನ್ನು ಹೊರಗಿಟ್ಟರೆ ಕನಿಷ್ಠ ಬೆಂಬಲ ಬೆಲೆ ನಿರ್ಧರಿಸುವುದು ಸರ್ಕಾರದ ಹಿಡಿತದಲ್ಲಿ ಇರುವುದಿಲ್ಲ. ಬೆಲೆ ನಿರ್ಧಾರ ಸ್ಟಾಕ್‌ ಮಾರುಕಟ್ಟೆಯ ಹಿಡಿತದಲ್ಲಿ ಇರುತ್ತದೆ. ಕಾರ್ಪೊರೇಟ್ ಕಂಪೆನಿಗಳ ಪರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಆಪಾದಿಸಿದರು.

‘ತುಂಡು ಭೂಮಿ ಇರುವ ರೈತರು ಯಾವುದೇ ಕಾರಣಕ್ಕೂ ಜಮೀನು ಮಾರಾಟ ಮಾಡಬೇಡಿ. ಕೊರೊನಾ ಸಂಕಷ್ಟದಲ್ಲಿ ಊರಿಗೆ ಮರಳಿದ ಸಾವಿರಾರು ಯುವಕರಿಗೆ ನೆರವಾಗಿದ್ದು ಇದೇ ತುಂಡು ಭೂಮಿ. ಯಾವುದನ್ನೂ ಮಾರಾಟ ಮಾಡಬೇಡಿ’ ಎಂದು ಮನವಿ ಮಾಡಿದರು.

ರೈತ ಸಂಘದ ಗೌರವಾಧ್ಯಕ್ಷ ಎಚ್‌.ಆರ್‌. ಬಸವರಾಜಪ್ಪ, ‘ಸರ್ಕಾರ ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ಕನಿಷ್ಠ ಬೆಂಬಲ ಬೆಲೆಗೆ ಯಾವುದೇ ತೊಂದರೆ ಇಲ್ಲ ಎನ್ನುತ್ತದೆ. ಮೆಕ್ಕೆಜೋಳ, ಭತ್ತ, ತೊಗರಿ ಖರೀದಿ ಕೇಂದ್ರವನ್ನೂ ಆರಂಭಿಸುತ್ತಿಲ್ಲ. ಖರೀದಿ ಕೇಂದ್ರ ತೆರೆಯದೆ ಕನಿಷ್ಠ ಬೆಂಬಲ ಬೆಲೆ ನೀಡಲು ಹೇಗೆ ಸಾಧ್ಯ. ಈ ಬಗ್ಗೆ ಸ್ಪಷ್ಟಪಡಿಸಲಿ’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

‘ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮೂಲಕ ಕಪ್ಪು ಹಣವನ್ನು ಬಿಳಿ ಮಾಡಲು ಸರ್ಕಾರ ಅನುಕೂಲ ಮಾಡಿಕೊಡುತ್ತಿದೆ’ ಎಂದು ಆರೋಪಿಸಿದರು.

23ರಂದು ರೈತರ ಪ್ರತಿಭಟನೆ:

ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ, ಪಹಣಿ ನೀಡಲು ಒತ್ತಾಯಿಸಿ ನ. 23ರಂದು ಚನ್ನಗಿರಿ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದು ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದರು.

ಸಂಘದ ಕಾರ್ಯಾಧ್ಯಕ್ಷರಾದ ಮಂಜುನಾಥಗೌಡ, ಈಚಘಟ್ಟ ಸಿದ್ಧವೀರಪ್ಪ, ಹೊನ್ನೂರು ಮುನಿಯಪ್ಪ, ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು