ಜನ, ಜಾನುವಾರಿಗೆ ಕುಡಿಯುವ ನೀರು ಪೂರೈಸಿ

ಶನಿವಾರ, ಜೂಲೈ 20, 2019
25 °C
ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಶಾಸಕ ಸೂಚನೆ

ಜನ, ಜಾನುವಾರಿಗೆ ಕುಡಿಯುವ ನೀರು ಪೂರೈಸಿ

Published:
Updated:
Prajavani

ದಾವಣಗೆರೆ: ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಜನ, ಜಾನುವಾರಿಗೆ ಕುಡಿಯಲು ನೀರು ಒದಗಿಸಿ ಎಂದು ಶಾಸಕ ಎಸ್‌.ಎ. ರವೀಂದ್ರನಾಥ್ ಅಧಿಕಾರಿಗಳಿಗೆ ಸೂಚಿಸಿದರು.

ಶನಿವಾರ ನಡೆದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘ಮನುಷ್ಯನಿಗೆ ನೀರು ಎಷ್ಟು ಮುಖ್ಯವೋ ಜಾನುವಾರಿಗೂ ಅಷ್ಟೇ ಅವಶ್ಯಕ. ಆದ್ದರಿಂದ ಎಲ್ಲಾ ಗ್ರಾಮಗಳಲ್ಲಿರುವ ನೀರಿನ ತೊಟ್ಟಿಗಳಿಗೆ ನೀರು ಪೂರೈಕೆ ಮಾಡಿ, ತೊಟ್ಟಿಗಳಿಲ್ಲದ ಗ್ರಾಮಗಳಲ್ಲಿ ಹೊಸ ತೊಟ್ಟಿಗಳನ್ನು ನಿರ್ಮಿಸಿ ನೀರು ಪೂರೈಸಿಬೇಕು. ತಾಲೂಕಿನಾದ್ಯಂತ ನೀರಿನ ಹಾಹಾಕಾರ ಉಂಟಾಗದಂತೆ ಕಾರ್ಯನಿರ್ವಹಿಸಿ’ ಎಂದು ಸೂಚಿಸಿದರು.

ತಾಲ್ಲೂಕಿನ ಮಾಯಾಕೊಂಡ ಕ್ಷೇತ್ರದ ಗ್ರಾಮಗಳಲ್ಲಿ ಉಂಟಾಗಿರುವ ನೀರಿನ ಸಮಸ್ಯೆಯನ್ನು ನಿರ್ಲಕ್ಷಿಸದೇ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಜನ-ಜಾನುವಾರಿಗೆ ನೀರಿನ ಸಮಸ್ಯೆ ಬಾರದಂತೆ ನೀರು ಪೂರೈಸಬೇಕು. ತೊಟ್ಟಿ ಇಲ್ಲದ ಗ್ರಾಮಗಳಲ್ಲಿ ತೊಟ್ಟಿ ನಿರ್ಮಿಸಿಬೇಕು. ಈಗಾಗಲೇ ನಿರ್ಮಿಸಿ ದುರಸ್ತಿಗೊಂಡ ತೊಟ್ಟಿಗಳನ್ನು ಸುಸ್ಥಿತಿಗೆ ತಂದು ನೀರನ್ನು ಪೂರೈಸುವಂತೆ ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು.

ಮೋಟರ್ ಖರೀದಿಗೆ ಹಣವಿಲ್ಲ:

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ಆಯುಕ್ತ ರವೀಂದ್ರ, ‘ಮಾಯಾಕೊಂಡ ಕ್ಷೇತ್ರದಲ್ಲಿ ಒಂದು ಗ್ರಾಮಕ್ಕೆ ಖಾಸಗಿ, ಬೋರ್‍ವೆಲ್ ಮೂಲಕ ಹಾಗೂ 17 ಗ್ರಾಮಗಳು ಕಾಟೀಹಳ್ಳಿ ಮತ್ತು ಹುಣಸೇಕಟ್ಟೆ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳಿಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ’ ಎಂದು ಸಭೆಯಲ್ಲಿ ತಿಳಿಸಿದರು.

ಇದಕ್ಕೆ ಉತ್ತರಿಸಿದ ಶಾಸಕ ರವಿಂದ್ರನಾಥ್, ‘ಎಲ್ಲಾ ಗ್ರಾಮ ಮತ್ತು ಅಂಗನವಾಡಿಯಲ್ಲಿ ಶೌಚಾಲಯ ಮತ್ತು ಅಡುಗೆಕೋಣೆಯನ್ನು ನಿರ್ಮಿಸಿ. ಅಲ್ಲದೇ ದುಃಸ್ಥಿಯಲ್ಲಿರುವ ಕಟ್ಟಡಗಳನ್ನು ಮೊದಲು ಸರಿಪಡಿಸಬೇಕು. ಇದೇ ವೇಳೆ ಅರಸಾಪುರ ಶಾಲೆ ಮತ್ತು ಅಂಗನವಾಡಿಯಲ್ಲಿ ಶೌಚಾಲಯ ಹಾಗೂ ಅಡುಗೆ ಕೋಣೆ ದುರಸ್ತಿಯಲ್ಲಿದೆ ಅದನ್ನು ಸರಿಪಡಿಸಿದ್ದೀರಾ’ ಎಂದು ಕಡ್ಲೆಬಾಳು ಪಿಡಿಓ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ರಾಘವೇಂದ್ರನಾಯ್ಕ್, ‘ಶಾಲೆ ಮತ್ತು ಅಂಗನವಾಡಿಗಳಲ್ಲಿ ಶೌಚಾಲಯಗಳನ್ನು ಹೊಸದಾಗಿ ನಿರ್ಮಿಸಲಾಗಿದೆ. ಅಡುಗೆ ಕೋಣೆ ದುರಸ್ತಿಯಲ್ಲಿದ್ದು, ಅದನ್ನು ಸರಿಪಡಿಸಲು ಹಣವಿಲ್ಲ. ಹಣ ಮಂಜೂರಾದ ಕೂಡಲೇ ಸರಿಪಡಿಸಲಾಗುವುದು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಪ್ರಭಾರ ಇಒ ರೇವಣಸಿದ್ದನಗೌಡ, ‘ಜನರಿಗೆ ದಿನವೊಂದಕ್ಕೆ ₹40 ಲೀಟರ್‍ನಂತೆ ಮತ್ತು ಜಾನುವಾರಿಗೆ 50 ಲೀಟರ್‍ನಂತೆ ನೀರು ಪೂರೈಕೆ ಮಾಡಲಾಗುತ್ತಿದೆ. ಚುನಾವಣೆ ಸಂದರ್ಭ ಎಲ್ಲಾ ಶಾಲೆಗಳಿಗೆ ಶೌಚಾಲಯಗಳನ್ನು ಸರಿಪಡಿಸಲು ಹಣ ಮಂಜೂರು ಮಾಡಲಾಗಿತ್ತು. ಅಂಗನವಾಡಿ ಶೌಚಾಲಯಗಳು ಮತ್ತು ಅಡುಗೆ ಮನೆಗಳ ದುರಸ್ತಿಯನ್ನು ಕೂಡಲೇ ಮಾಡಲಾಗುವುದು’ ಎಂದರು.

ಅತ್ತಿಗರೆ ಗ್ರಾಮ ಪಂಚಾಯಿತಿ ಪಿಡಿಒ ‘ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬ್ಬೂರು ಸೇರಿ ಹಲವು ಗ್ರಾಮಗಳಲ್ಲಿ ಆಶ್ರಯ ಯೋಜನೆಯಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ಅವುಗಳಿಗೆ ಹಂತ ಹಂತವಾಗಿ ಜಿಪಿಎಸ್ ಮಾಡಿ ಫೋಟೋ ತೆಗೆಯಲಾಗಿದೆ. ಆದರೆ ಈವರೆಗೂ ಹಣ ಮಂಜೂರಾಗಿಲ್ಲ. ಫಲಾನುಭವಿಗಳು ಪ್ರತಿನಿತ್ಯ ಕಚೇರಿಗೆ ಬಂದು ಹಣ ಮಂಜೂರು ಮಾಡುವಂತೆ ಒತ್ತಾಯಿಸುತ್ತಿದ್ದಾರೆ’ ಎಂದರು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ,  ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಪಿಡಿಒ ಹಾಗೂ ಎಂಜಿನಿಯರ್‍ಗಳು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !