ಗುರುವಾರ , ಆಗಸ್ಟ್ 5, 2021
28 °C
ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಬೈರತಿ ಬಸವರಾಜ ಸೂಚನೆ

ದಾವಣಗೆರೆ: ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡೇತರ ಚಿಕಿತ್ಸೆಯೂ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಚಿಗಟೇರಿ ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್‌ ಚಿಕಿತ್ಸೆಗಾಗಿ ಇಲ್ಲಿವರೆಗೆ ಮೀಸಲಿಡಲಾಗಿತ್ತು. ಈಗ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಹಾಗಾಗಿ ಕೋವಿಡೇತರ ಎಲ್ಲ ಚಿಕಿತ್ಸೆಗಳನ್ನು ಆರಂಭಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಪಂಚಾಯಿತಿಯ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಕೊರೊನಾ ಕಾರಣದಿಂದ ಇತರ ರೋಗಿಗಳು ಬಳಲುವಂತಾಗಬಾರದು. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುವುದಿಲ್ಲ ಎಂದರೆ ಅದು ಆಸ್ಪತ್ರೆಗೆ ಅಷ್ಟೇ ಅಲ್ಲ, ಜಿಲ್ಲೆಗೇ ಕೆಟ್ಟ ಹೆಸರು ಬರುತ್ತದೆ. ಅದಕ್ಕಾಗಿ ಎಲ್ಲರಿಗೂ ಚಿಕಿತ್ಸೆ ದೊರೆಯಬೇಕು. ಮೂರನೇ ಅಲೆ ಬಂದರೆ ಆಗ ಅದಕ್ಕೆ ಸಂಬಂಧಪಟ್ಟಂತೆ ನಿರ್ಧಾರ ಕೈಗೊಳ್ಳೋಣ’ ಎಂದು ಹೇಳಿದರು.

ಕೊರೊನಾ ಒಂದನೇ ಅಲೆಯ ಸಂದರ್ಭದಲ್ಲಿ ಆಪರೇಷನ್‌ ಥಿಯೇಟರ್‌ಗಳನ್ನು ನವೀಕರಣ ಮಾಡಲಾಗಿದೆ. ಈಗ ಯಾವುದೇ ಸಮಸ್ಯೆ ಇಲ್ಲ. ಎಲ್ಲರಿಗೂ ಚಿಕಿತ್ಸೆ ನೀಡಬಹುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಎಲ್ಲರಿಗೂ ಚಿಕಿತ್ಸೆ ನೀಡುವುದನ್ನು ಆರಂಭಿಸಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಸೂಚಿಸಿದರು.

ಕೋವಿಡ್ ಲಾಕ್‍ಡೌನ್ ಕಾರಣದಿಂದಾಗಿ ನಷ್ಟ ಅನುಭವಿಸಿದ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಸರ್ಕಾರದ ತೋಟಗಾರಿಕೆ ಇಲಾಖೆಯಿಂದ ಕೊಡಲಾಗುವ ಪರಿಹಾರ ಮೊತ್ತವನ್ನು ಸರಿಯಾಗಿ ತಲುಪಿಸಬೇಕು. ಪಹಣಿಗಳಲ್ಲಿನ ಸಣ್ಣಪುಟ್ಟ ದೋಷಗಳಿಂದಾಗಿ ರೈತರಿಗೆ ಪಾವತಿಯಾಗದೆ ವಿಳಂಬವಾಗುತ್ತಿದೆ. ಅಂತಹ ರೈತರ ಪಟ್ಟಿಯನ್ನು ಪಡೆದು, ತ್ವರಿತವಾಗಿ ಪಹಣಿ ಸರಿಪಡಿಸಿಕೊಡಬೇಕು ಎಂದು ಸಚಿವರು ಸೂಚನೆ ನೀಡಿದರು.

ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ₹ 1.63 ಕೋಟಿ ಪರಿಹಾರ ಪಾವತಿಯಾಗಿದೆ. ರೈತರ ಪಹಣಿಯಲ್ಲಿನ ದೋಷ, ಪಹಣಿಯಲ್ಲಿ ಹೆಸರು ಇರುವವರು ಮೃತಪಟ್ಟಿದ್ದು, ಮಕ್ಕಳ ಹೆಸರಿಗೆ ಪಹಣಿ ಆಗದೇ ಇರುವುದು ಮುಂತಾದ ದೋಷಗಳಿಂದಾಗಿ ₹ 50 ಲಕ್ಷ ಪರಿಹಾರ ಪಾವತಿಗೆ ಬಾಕಿ ಇದೆ ಎಂದು ತೋಟಗಾರಿಕೆ ಉಪನಿರ್ದೇಶಕ ಲಕ್ಷ್ಮೀಕಾಂತ್ ಬೋಮ್ಮನ್ನಾರ್‌ ಮಾಹಿತಿ ನೀಡಿದರು.

ಬಿಪಿಎಲ್ ಕುಟುಂಬಗಳಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ದೀಪಾವಳಿವರೆಗೂ ಉಚಿತವಾಗಿ ಅಕ್ಕಿ, ಆಹಾರ ಧಾನ್ಯ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಇದರ ಜೊತೆಗೆ ರಾಜ್ಯ ಸರ್ಕಾರವೂ ಕೂಡ ಉಚಿತವಾಗಿ ಅಕ್ಕಿ, ಗೋಧಿ, ರಾಗಿ ನೀಡುತ್ತಿದೆ. ಕೋವಿಡ್ ಸಂಕಷ್ಟ ಸಮಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದು. ಹೀಗಾಗಿ ಬಡವರಿಗೆ ನೀಡುವ ಅಕ್ಕಿ ಪ್ರಮಾಣವನ್ನು 10 ಕೆ.ಜಿ.ಗೆ ಹೆಚ್ಚಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಸಚಿವರು ಹೇಳಿದರು.

ಕೋವಿಡ್‍ನಿಂದ ಮೃತಪಟ್ಟ ಕುಟುಂಬಗಳಿಗೆ ತಲಾ ₹ 1 ಲಕ್ಷ ಪರಿಹಾರ ನೀಡುವ ಯೋಜನೆಯನ್ನು ಸರ್ಕಾರ ಘೋಷಿಸಿದೆ. ಕೋವಿಡ್‍ನಿಂದ ಮೃತಪಟ್ಟ ವ್ಯಕ್ತಿಗಳ ಪಟ್ಟಿಯನ್ನು ಪಡೆಯಬೇಕು. ಬಿಪಿಎಲ್ ಕಾರ್ಡ್ ಇಲ್ಲದ ಅರ್ಹ ಕುಟುಂಬಗಳಿಗೆ ಕೂಡಲೇ ಬಿಪಿಎಲ್ ಕಾರ್ಡ್ ನೀಡುವ ಕಾರ್ಯ ಆಗಬೇಕು ಎಂದು ಸೂಚನೆ ನೀಡಿದರು.

ಎಲ್ಲ ತಾಲ್ಲೂಕುಗಳಲ್ಲಿ ಆಮ್ಲಜನಕ ಘಟಕ ಸ್ಥಾಪಿಸಲಾಗಿದೆ. ಕೋವಿಡ್‍ನ 3ನೇ ಅಲೆ ಬಂದರೆ ಸಮರ್ಪಕವಾಗಿ ನಿರ್ವಹಿಸಲಾಗುವುದು ಡಿಎಚ್‌ಒ ಡಾ. ನಾಗರಾಜ್ ಮಾಹಿತಿ ನೀಡಿದರು.

ಜಿಲ್ಲಾ ಆಸ್ಪತ್ರೆಯ ವಾರ್ಡ್ ಸಂಖ್ಯೆ 65 ಮತ್ತು 66 ಅನ್ನು ಮಕ್ಕಳಿಗಾಗಿ ಪ್ರತ್ಯೇಕವಾರ್ಡ್ ಮಾಡಲಾಗುತ್ತಿದ್ದು, ಆಮ್ಲಜನಕ ಪೈಪ್‍ಲೈನ್ ಮಾಡಲಾಗಿದೆ. 36 ಐಸಿಯು, 36 ಮಕ್ಕಳ ವೆಂಟಿಲೇಟರ್, 36 ಮಲ್ಟಿ ಪ್ಯಾರಾಮೀಟರ್ ಸೇರಿ ಅಗತ್ಯ ವೈದ್ಯಕೀಯ ಪರಿಕರಗಳ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು. ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಖರೀದಿಸುವಂತೆ ಸಚಿವರು ಸೂಚಿಸಿದರು.

ಶಾಸಕರಾದ ಎಸ್.ಎ. ರವೀಂದ್ರನಾಥ್, ಎಸ್.ವಿ.ರಾಮಚಂದ್ರಪ್ಪ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ವಿಜಯ ಮಹಾಂತೇಶ್ ದಾನಮ್ಮನವರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌ ಸಿ.ಬಿ. ಅವರೂ ಇದ್ದರು.

‘ಅನ್‍ಲಾಕ್ ಸಮಯದಲ್ಲಿ ಮೈಮರೆಯಬೇಡಿ’
ಕೋವಿಡ್‍ನ ಎರಡನೇ ಅಲೆ ಇನ್ನೂ ಮುಗಿದಿಲ್ಲ, 3ನೇ ಅಲೆ ಬಗ್ಗೆ ಈಗಾಗಲೇ ಆತಂಕವಿದೆ. ಸರ್ಕಾರ ಲಾಕ್‍ಡೌನ್ ಅನ್ನು ತೆರವುಗೊಳಿಸಿರುವ ಈ ಸಂದರ್ಭದಲ್ಲಿ ಸಾರ್ವಜನಿಕರು ಮಾರುಕಟ್ಟೆ, ಪ್ರವಾಸಿ ತಾಣಗಳು, ಕಲ್ಯಾಣ ಮಂಟಪಗಳು ಮುಂತಾದೆಡೆ ಕೋವಿಡ್‍ನ ಎಲ್ಲ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಜನಸಂದಣಿ ಸೃಷ್ಟಿಸುತ್ತಿದ್ದಾರೆ. ಈಗಾಗಲೇ ಪ್ರಧಾನಮಂತ್ರಿ ಕೂಡ ಜನರ ಇಂತಹ ವರ್ತನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಮುಂಜಾಗ್ರತೆ ವಹಿಸುವಂತೆ ಸಂದೇಶ ನೀಡಿದ್ದಾರೆ. ಕೋವಿಡ್ ಆತಂಕ ದೂರವಾಗಿಲ್ಲ. ಸಾರ್ವಜನಿಕರು ಮೈಮರೆಯಬೇಡಿ. ತುರ್ತು ಕೆಲಸಗಳಿದ್ದರೆ ಮಾತ್ರ ಮನೆಯಿಂದ ಹೊರಗಡೆ ಬರಬೇಕು. ಅನವಶ್ಯಕವಾಗಿ ಬೇಕಾಬಿಟ್ಟಿ ಅಡ್ಡಾಡಬೇಡಿ ಎಂದು ಸಚಿವ ಬೈರತಿ ಬಸವರಾಜ ಸಲಹೆ ನೀಡಿದರು.

‘ಗೊಬ್ಬರ ಕೃತಕ ಅಭಾವ ಸೃಷ್ಟಿಯಾಗದಿರಲಿ’
ಮಳೆ ಬಂದಿದೆ. ರೈತರು ಹುರುಪಿನಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ನಕಲಿ ಬೀಜ ವಿತರಣೆ ಮಾಡಬಾರದು. ಗೊಬ್ಬರ ಅಕ್ರಮ ದಾಸ್ತಾನು ಇಟ್ಟು ಕೃತಕ ಅಭಾವ ಸೃಷ್ಟಿಸಬಾರದು. ಅಂಥ ದಂಧೆಯನ್ನು ನಿಯಂತ್ರಿಸಬೇಕು ಎಂದು ಬೈರತಿ ಬಸವರಾಜ ಹೇಳಿದರು.

ಜಗಳೂರಿನಲ್ಲಿ ಹಲವು ಸಮಸ್ಯೆ
ಜಗಳೂರಿನಲ್ಲಿ ಬಸ್‌ಗಾಗಿ ವಿದ್ಯಾರ್ಥಿಗಳು ಕನಿಷ್ಠ 20 ಬಾರಿ ಪ್ರತಿಭಟನೆ ಮಾಡಿದ್ದಾರೆ. ಅವರನ್ನು ಎಷ್ಟು ಬಾರಿ ಸಮಾಧಾನ ಮಾಡೋದು. ಕೂಡಲೇ ಜಗಳೂರಿನಲ್ಲಿ ಬಸ್‌ ಡಿಪೊ ಆರಂಭಿಸಬೇಕು. ಕೆಎಸ್‌ಆರ್‌ಟಿಸಿ ಬಸ್‌ ಓಡಿಸಬೇಕು ಎಂದು ಶಾಸಕ ಎಸ್‌.ವಿ. ರಾಮಚಂದ್ರ ಒತ್ತಾಯಿಸಿದರು.

ಪಲ್ಲಾಗಟ್ಟೆಯಲ್ಲಿ ಪಡಿತರದಲ್ಲಿ ಬೀಡಿ, ಸಿಗರೇಟ್‌, ಕಸಕಡ್ಡಿ ಇರುವ ಬಗ್ಗೆ ಸ್ಥಳೀಯರಾದ ಚಂದ್ರಪ್ಪ ದೂರಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸಚಿವ ಬೈರತಿ ಬಸವರಾಜ ಸೂಚಿಸಿದರು.

ಸಣ್ಣ ನೀರಾವರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಯಾವ ಸಭೆಗೂ ಬರುವುದಿಲ್ಲ ಎಂದು ಎಸ್‌.ವಿ. ರಾಮಚಂದ್ರ ದೂರಿದಾಗ, ಅವರಿಗೆ ನೋಟಿಸ್‌ ನೀಡಿ ಅಮಾನತು ಮಾಡಿ ಎಂದು ಸಚಿವರು ತಿಳಿಸಿದರು.

ಹರಪನಹಳ್ಳಿ, ಜಗಳೂರು ಕೆರೆ ತುಂಬಿಸುವ ಯೋಜನೆಗಳು ಕಾರ್ಯಗತವಾಗಿಲ್ಲ. ಅದರ ಬಗ್ಗೆ ಮಾಹಿತಿ ಕೂಡ ಅಧಿಕಾರಿಗಳು ನೀಡುತ್ತಿಲ್ಲ ಎಂದು ಶಾಸಕರು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು