ಬಾಕಿಯುಳಿದ ಅಭಿವೃದ್ಧಿ ಕೆಲಸಗಳ ಪಟ್ಟಿ ನೀಡಿ

7
ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್‌

ಬಾಕಿಯುಳಿದ ಅಭಿವೃದ್ಧಿ ಕೆಲಸಗಳ ಪಟ್ಟಿ ನೀಡಿ

Published:
Updated:
Deccan Herald

ದಾವಣಗೆರೆ: ‘ಜಿಲ್ಲೆಯ ಪ್ರಗತಿಗೆ ಹೊಸದಾಗಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳು ಹಾಗೂ ಬಾಕಿ ಉಳಿದಿರುವ ಕಾಮಗಾರಿಗಳ ಪಟ್ಟಿಯನ್ನು ಎಲ್ಲಾ ಇಲಾಖೆಗಳ ಅಧಿಕಾರಿಗಳು ನೀಡಿದರೆ ಸರ್ಕಾರದಿಂದ ಅಗತ್ಯ ಅನುದಾನವನ್ನು ತರುತ್ತೇನೆ’ ಎಂದು ಸಣ್ಣ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌. ಶ್ರೀನಿವಾಸ್‌ (ವಾಸು) ತಿಳಿಸಿದರು.

ಉಸ್ತುವಾರಿ ಸಚಿವರಾದ ಬಳಿಕ ಮೊದಲ ಬಾರಿಗೆ ನಗರಕ್ಕೆ ಬಂದು ಜಿಲ್ಲಾ ಪಂಚಾಯ್ತಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಗುರುವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

‘ಸರ್ಕಾರ ಮಟ್ಟದಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳಿಗೆ ಮಂಜೂರಾತಿ ಪಡೆದುಕೊಳ್ಳಲಾಗುವುದು. ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಾಗ ಎದುರಾಗುವ ಸಮಸ್ಯೆಗಳನ್ನು ನೇರವಾಗಿ ನನ್ನ ಗಮನಕ್ಕೆ ತರಬಹುದು. ಅಧಿಕಾರಿಗಳು ಒಳ್ಳೆಯ ರೀತಿಯಿಂದ ಕೆಲಸ ಮಾಡಿ ಸರ್ಕಾರಕ್ಕೆ ಹೆಸರು ತರಬೇಕು’ ಎಂದು ಸೂಚಿಸಿದರು.

ಶಾಲಾ ಕೊಠಡಿ ಸಮಸ್ಯೆ: ಶಾಲೆಯಲ್ಲಿ ಶಿಥಿಲಗೊಂಡ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸಬೇಡಿ. ಜಿಲ್ಲೆಯಲ್ಲಿ ಎಷ್ಟು ಕೊಠಡಿಗಳನ್ನು ನಿರ್ಮಿಸಬೇಕು ಎಂಬ ಬಗ್ಗೆ ಪ್ರಸ್ತಾವವನ್ನು ಕಳುಹಿಸಿಕೊಡಿ. ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳಿ ಎಂದು ಸಚಿವರು ಡಿಡಿಪಿಐ ಪರಮೇಶ್ವರ್‌ಗೆ ಸೂಚಿಸಿದರು.

ಕೆಡವಿಹಾಕಲು ಒಪ್ಪಿಗೆ ಪಡೆದಿರುವ ಶಿಥಿಲಗೊಂಡಿರುವ ಕೊಠಡಿಗಳನ್ನು ಕೂಡಲೇ ಕೆಡವಿಹಾಕುವಂತೆ ಬಿಇಒಗಳಿಗೆ ಸೂಚನೆ ನೀಡಿ ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಸಲಹೆ ನೀಡಿದರು.

ಜಿಲ್ಲಾ ಪಂಚಾಯ್ತಿ ಯೋಜನಾಧಿಕಾರಿ ಜಿ.ಎಸ್‌. ಷಡಕ್ಷರಪ್ಪ, ಮ–ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಎಲ್ಲಾ ಶಾಲೆಗಳಲ್ಲೂ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಪಿಡಿಒ ಹಾಗೂ ಬಿಇಒಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಅಂಗನವಾಡಿ ಕಟ್ಟಡ: ಜಿಲ್ಲೆಯಲ್ಲಿ 630 ಅಂಗನವಾಡಿಗಳಿಗೆ ಕಟ್ಟಡ ನಿರ್ಮಾಣಗೊಳ್ಳಬೇಕಾಗಿದ್ದು, ಇದರಲ್ಲಿ ನಗರ ಪ್ರದೇಶದಲ್ಲೇ 386 ಕಟ್ಟಡ ನಿರ್ಮಿಸಬೇಕಾಗಿದೆ. ಸಮರ್ಪಕವಾದ ಖಾಲಿ ಜಾಗ ಸಿಗುತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ಮಾಹಿತಿ ನೀಡಿದರು.

‘ಗ್ರಾಮೀಣ ಪ್ರದೇಶಗಳಲ್ಲಿ ನರೇಗಾ ಯೋಜನೆಯಡಿ ಸಾಧ್ಯವಾದಷ್ಟು ಹೆಚ್ಚು ಕಟ್ಟಡಗಳನ್ನು ನಿರ್ಮಿಸಬೇಕು. ನಗರ ಪ್ರದೇಶಗಳಲ್ಲಿ ಪಾಲಿಕೆಯೂ ಆದ್ಯತೆ ಮೇಲೆ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡಬೇಕು’ ಎಂದು ಸಚಿವರು ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಮಂಜುನಥ ಬಳ್ಳಾರಿ, ‘ಇಂದಿರಾ ಕ್ಯಾಂಟೀನ್‌ಗೆ ವಾರ್ಷಿಕ ₹ 4 ಕೋಟಿ ಪಾವತಿಸಬೇಕಾಗುತ್ತಿದೆ. ನಮಗೆ ಅಭಿವೃದ್ಧಿ ಚಟುವಟಿಕೆಗಳಿಗೇ ಹಣ ಹೊಂದಿಸುವುದು ಕಷ್ಟವಾಗುತ್ತಿದೆ’ ಎಂದು ತಿಳಿಸಿದರು.

ಗಾಜಿನಮನೆಗೆ ಅನುದಾನ ಕೊರತೆ: ‘₹ 25 ಕೋಟಿ ವೆಚ್ಚಮಾಡಿ ಗಾಜಿನಮನೆ ನಿರ್ಮಿಸಲಾಗಿದೆ. ವಿದ್ಯುತ್‌ ಸಂಪರ್ಕ ಸೇರಿ ಇನ್ನೂ ಕೆಲವು ಕೆಲಸಗಳಾಗಬೇಕು. ಇಲ್ಲದಿದ್ದರೆ ಅದು ಜನರ ಬಳಕೆಗೆ ಬರುವುದಿಲ್ಲ. ಇದಕ್ಕಾಗಿ ₹ 5.25 ಕೋಟಿ ಅನುದಾನ ಬೇಕಾಗಿದ್ದು, ಕೂಡಲೇ ಮಂಜೂರು ಮಾಡಿಸಬೇಕು’ ಎಂದು ಶಾಸಕ ಎಸ್‌.ಎ. ರವೀಂದ್ರನಾಥ್‌ ಮನವಿ ಮಾಡಿದರು.

‘ಈ ಬಗ್ಗೆ ಪ್ರಸ್ತಾವ ಕಳುಹಿಸಿಕೊಡಿ. ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಸಚಿವರು ಭರವಸೆ ನೀಡಿದರು.

ಬಿತ್ತನೆ ಬೀಜ ವಿಫಲ:ಜಿಲ್ಲೆಯಲ್ಲಿ ಏಳು ಮಾದರಿಯ ಬಿತ್ತನೆ ಬೀಜ ವಿಫಲಗೊಂಡಿದ್ದು, ಸಂಬಂಧಪಟ್ಟ ಕಂಪನಿಯ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್‌ ತಿಳಿಸಿದರು.

‘ಖಾಸಗಿ ಅಂಗಡಿಯವರು ರೈತರಿಗೆ ನೀಡಿದ ಬಿಜ ಸರಿಯಾಗಿದೆಯೇ ಪರಿಶೀಲಿಸಿ. ವಿಫಲಗೊಂಡಿರುವುದು ಕಂಡುಬಂದರೆ ಅವುಗಳನ್ನು ಜಪ್ತಿ ಮಾಡಿ’ ಎಂದು ಸಚಿವರು ಸೂಚಿಸಿದರು.

ಹಾಸ್ಟೇಲ್‌ ಪರಿಶೀಲಿಸಿ: ಬಿಹಾರದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆದ ಅತ್ಯಾಚಾರ ಘಟನೆ ಉಲ್ಲೇಖಿಸಿದ ಸಚಿವರು, ‘ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಸ್ಟೇಲ್‌ಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸಬೇಕು. ಅಲ್ಲಿನ ಹೆಣ್ಣುಮಕ್ಕಳು ಸುರಕ್ಷಿತರಾಗಿದ್ದಾರೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

ಮರಳು ಸಮಸ್ಯೆ: ಜಿಲ್ಲೆಯಲ್ಲಿ ಆಶ್ರಮ ಮನೆ, ಶೌಚಾಲಯ ನಿರ್ಮಿಸಲು ಫಲಾನುಭವಿಗಳಿಗೆ ಮರಳು ಸಿಗುತ್ತಿಲ್ಲ ಎಂದು ರವೀಂದ್ರನಾಥ್‌ ಆಕ್ಷೇಪಿಸಿದರು. ಜಿಲ್ಲೆಯಲ್ಲಿ ನದಿಯಿಂದ ತೆಗೆಯುವ ಮರಳು ಹೊರಗೆ ಹೋಗುವುದಕ್ಕೆ ಕಡಿವಾಣ ಹಾಕಿ, ಸ್ಥಳೀಯರಿಗೆ ಸುಲಭದಲ್ಲಿ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು.

ಡಿಎಚ್‌ಒ ಡಾ. ಎಂ.ಎಸ್‌. ತ್ರಿಪುಲಾಂಭ, ‘ತಾಲ್ಲೂಕು ಆಸ್ಪತ್ರೆಗಳಲ್ಲಿ 25 ತಜ್ಞ ವೈದ್ಯರ ಕೊರತೆ ಇದೆ. ಜಿಲ್ಲೆಗೆ ಮಂಜೂರಾಗಿರುವ 341 ಸ್ಟಾಫ್‌ ನರ್ಸ್‌ ಹುದ್ದೆಗಳ ಪೈಕಿ 112 ಸ್ಟಾಫ್‌ ನರ್ಸ್‌ಗಳ ಕೊರತೆ ಇದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಆಸ್ಪತ್ರೆಯಲ್ಲಿ 40 ಸ್ಟಾಫ್‌ ನರ್ಸ್‌ಗಳ ಕೊರತೆ ಇದೆ. ಜಿಲ್ಲಾ ಆಸ್ಪತ್ರೆಯಲ್ಲಿ ಸೂಪರ್‌ ಸ್ಪೆಶಾಲಿಟಿ ಸೌಲಭ್ಯ ಕಲ್ಪಿಸಬೇಕಾಗಿದೆ ಎಂದು ಅಧೀಕ್ಷಕಿ ಡಾ. ಎಚ್‌.ಡಿ. ನೀಲಾಂಬಿಕಾ ತಿಳಿಸಿದರು.

ಶಾಸಕ ರಾಮಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ನಿರ್ವಹಣಾಧಿಕಾರಿ ಎಸ್‌. ಅಶ್ವತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. 

***

‘ಹಬ್ಬದೂಟಕ್ಕೆ ಕರೆದಿಲ್ಲ...’
ಜಿಲ್ಲೆಯಲ್ಲಿ ಮೇಲ್ದರ್ಜೆಗೇರಿಸಬೇಕಾದ ರಸ್ತೆಗಳ ಬಗ್ಗೆ ವಿವರ ನೀಡಲು ತಡಬಡಾಯಿಸಿದ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಮಲ್ಲಿಕಾರ್ಜುನ್‌ ಅವರನ್ನು, ‘ಮಾಹಿತಿ ಇಲ್ಲದೇ ಸಭೆಗೆ ಬಂದಿದ್ದೀರಲ್ಲ. ನಾನೇನು ಹಬ್ಬದೂಟಕ್ಕೆ ನಿಮ್ಮನ್ನು ಕರೆದಿಲ್ಲ’ ಎಂದು ಸಚಿವರು ತರಾಟೆಗೆ ತೆಗೆದುಕೊಂಡರು.

ಇದಕ್ಕೂ ಮೊದಲು ಸಮರ್ಪಕವಾಗಿ ಮಾಹಿತಿ ನೀಡಲು ವಿಫಲರಾದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕುಮಾರ್‌ ಹನುಮಂತಪ್ಪ ಅವರಿಗೂ ಸಚಿವರು ಬಿಸಿ ಮುಟ್ಟಿಸಿದರು. ‘ಜಿಲ್ಲೆಗೆ ಬಂದು ಮೂರು ವರ್ಷಗಳಾಗಿದ್ದರೂ ಇಲಾಖೆಯ ಮಾಹಿತಿ ನಿಮ್ಮ ಬಳಿ ಇಲ್ಲ. ಪ್ರತಿಯೊಂದನ್ನೂ ಜಿಲ್ಲಾಧಿಕಾರಿಯೇ ಬಿಡಿಸಿ ಹೇಳಬೇಕೆ? ಹಾಸ್ಟೇಲ್‌ ಯಾವ ಸ್ಥಿತಿಯಲ್ಲಿದೆ ಎಂಬುದನ್ನಾದರೂ ನೋಡಿದ್ದಿಯೋ...’ ಎಂದು ಕಿಡಿ ಕಾರಿದರು.

**

ಡಿಸಿಸಿ ಬ್ಯಾಂಕ್‌ ಅವ್ಯವಹಾರ: ಪರಿಶೀಲನೆ ಭರವಸೆ
ಡಿಸಿಸಿ ಬ್ಯಾಂಕ್‌ನಲ್ಲಿ ಸಿಬ್ಬಂದಿ ನೇಮಕಾತಿಯಲ್ಲಿ ಭಾರಿ ಅವ್ಯವಹಾರ ನಡೆದಿರುವ ಕುರಿತು ಪತ್ರಕರ್ತರು ಸಚಿವರ ಗಮನಕ್ಕೆ ತಂದಾಗ, ‘ಈ ಬಗ್ಗೆ ನನಗೆ ಇನ್ನೂ ಮಾಹಿತಿ ಲಭಿಸಿಲ್ಲ. ಏನಾಗಿದೆ ಎಂಬುದನ್ನು ಪರಿಶೀಲಿಸುತ್ತೇನೆ. ಲೋಪ ನಡೆದಿರುವುದು ಕಂಡು ಬಂದರೆ ಸಹಕಾರ ಸಚಿವರಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಕೋರುತ್ತೇನೆ’ ಎಂದು ಭರವಸೆ ನೀಡಿದರು.

‘ಜಿಲ್ಲೆಯ ಪ್ರವಾಸಿ ತಾಣಗಳಿಗೆ ನಾನೂ ಭೇಟಿ ನೀಡಿ, ಯಾವ ರೀತಿ ಅಭಿವೃದ್ಧಿಪಡಿಸಬಹುದು ಎಂದು ನೋಡುತ್ತೇನೆ. ಪ್ರವಾಸೋದ್ಯಮ ಸಚಿವರೊಂದಿಗೆ ಚರ್ಚಿಸಿ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಜಿಲ್ಲಾಡಳಿತ ಭವನದಲ್ಲಿರುವ ನನ್ನ ಕಚೇರಿಗೆ ಇಂದು ಹೋದಾಗ ಕುರ್ಚಿಗಳಿಗೆ ದೂಳು ಹಿಡಿದಿತ್ತು. ಅಲ್ಲಿಯೇ ನನ್ನ ಸಾರ್ವಜನಿಕ ಸಂಪರ್ಕ ಕಚೇರಿ ನಡೆಯಲಿದೆ. ತಿಂಗಳಿಗೆ ಮೂರು– ನಾಲ್ಕು ಬಾರಿ ಜಿಲ್ಲೆಗೆ ಬರುತ್ತೇನೆ. ಶಾಸಕರ ಜೊತೆಗೆ ಸಮಾಲೋಚನೆ ನಡೆಸಿ ಜಿಲ್ಲೆಯ ಅಭಿವೃದ್ಧಿ ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.

ಸಚಿವರು ಹೇಳಿದ್ದೇನು...

* ನಿರುದ್ಯೋಗಿ ಯುವಕ–ಯುವತಿಯರಿಗೆ ಕೌಶಲ ತರಬೇತಿ ನೀಡಿ ಕೆಲಸವನ್ನೂ ಕೊಡಿಸಿ

* ಗೋಮಾಳ, ಸರ್ಕಾರಿ ಜಾಗಗಳಲ್ಲಿ ಸಸಿ ಬೆಳೆಸಲು ಕ್ರಮ ಕೈಗೊಳ್ಳಬೇಕು

* ಎಸ್‌.ಎಸ್‌.ಎಲ್‌.ಸಿ ಹಾಗೂ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯಕ್ಕೆ 10ನೇ ಸ್ಥಾನಕ್ಕೆ ಬರಲು ಕ್ರಮ ಕೈಗೊಳ್ಳಿ

* ಫಲಾನುಭವಿಗಳಿಗೆ ಬ್ಯಾಂಕ್‌ಗಳಲ್ಲಿ ಸಾಲಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು.

* ಗಂಗಾ ಕಲ್ಯಾಣ ಯೋಜನೆಯ ಕೊಳವೆಬಾವಿಗಳಿಗೆ ತಕ್ಷಣವೇ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು.

ಅಂಕಿ– ಅಂಶಗಳು
* 627 ಜಿಲ್ಲೆಯಲ್ಲಿ ಶಿಥಿಲಗೊಂಡಿರುವ ಶಾಲಾ ಕೊಠಡಿಗಳು
* 348 ಜಿಲ್ಲೆಯಲ್ಲಿ ಅಗತ್ಯವಿರುವ ಶಾಲಾ ಕೊಠಡಿಗಳು
* 350 ದೊಡ್ಡ ಪ್ರಮಾಣದಲ್ಲಿ ದುರಸ್ತಿಗೊಳ್ಳಬೇಕಾದ ಶಾಲಾ ಕೊಠಡಿಗಳು
* 15 ಜಿಲ್ಲೆಯ ಹೋಬಳಿಗಳಲ್ಲಿ ಮಳೆಯ ಕೊರತೆ
*ಶೇ 76 ಜಿಲ್ಲೆಯಲ್ಲಿ ಪೂರ್ಣಗೊಂಡ ಬಿತ್ತನೆ ಪ್ರಮಾಣ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !