ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ರಾಂಕ ಶುಲ್ಕ ಇಳಿಕೆ: ಕಂದಾಯ ಸಚಿವ ಆರ್.ಅಶೋಕ್‌

ಪ್ರಗತಿ ಪರಿಶೀಲನಾ ಸಭೆ
Last Updated 27 ಮೇ 2020, 17:11 IST
ಅಕ್ಷರ ಗಾತ್ರ

ದಾವಣಗೆರೆ: ಮಧ್ಯಮ ವರ್ಗದ ಜನರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಮುದ್ರಾಂಕ ಶುಲ್ಕ (ಸ್ಟ್ಯಾಂಪ್‌ ಡ್ಯೂಟಿ) ಇಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದರು.

ಜಿಲ್ಲಾಡಳಿತ ಭವನದದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಬುಧವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

ಹಿಂದೆ ಸ್ಟ್ಯಾಂಪ್‌ಡ್ಯೂಟಿ ಶೇ 5.6ರಷ್ಟು ಇತ್ತು. ಈಗ ₹ 20 ಲಕ್ಷದ ಒಳಗೆ ಮನೆ ಕಟ್ಟಿಕೊಳ್ಳುವವರಿಗೆ ಶೇ 2 ಮತ್ತು ₹ 35 ಲಕ್ಷದ ಒಳಗೆ ಮನೆ ಕಟ್ಟಿಕೊಳ್ಳುವವರಿಗೆ ಶೇ 3 ಮಾತ್ರ ಸ್ಟ್ಯಾಂಪ್‌ಡ್ಯೂಟಿ ವಿಧಿಸಲು ನಿರ್ಧರಿಸಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು ₹ 4,500 ಕೋಟಿ ನಷ್ಟವಾಗಲಿದೆ. ಆದರೂ ಜನರಿಗೆ ಉಪಯೋಗವಾಗಬೇಕು ಎಂದು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು.

ನೋಂದಣಿ ಸಂಖ್ಯೆಯನ್ನು ಹೆಚ್ಚಿಸಬೇಕು. ಕಂದಾಯ ಭೂಮಿಯಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡಿರುವುದನ್ನು ದಂಡ ಕಟ್ಟಿಸಿಕೊಂಡು ಸಕ್ರಮ ಮಾಡಬೇಕು. ಇದರಿಂದ ಜನರಿಗೂ ಸರ್ಕಾರಕ್ಕೂ ಲಾಭವಾಗುತ್ತದೆ ಎಂದರು.

ಕೊರೊನಾ ಒಂದೆರಡು ತಿಂಗಳಲ್ಲಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಹಾಗಾಗಿ ಕೊರೊನಾ ಜತೆಗೆ ಆರ್ಥಿಕ ಅಭಿವೃದ್ಧಿಯೂ ಆಗಬೇಕು. ಹೀಗೇ ಮುಂದುವರಿದರೆ ಜನರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಎಚ್ಚರಿಸಿದರು.

ವೃದ್ದಾಪ್ಯ ವೇತನ ಪಡೆಯಲು ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ತಹಶೀಲ್ದಾರರ ಕಚೇರಿಗಳಿಗೆ ಫಲಾನುಭವಿಗಳು ಅಲೆದಾಡಬೇಕಿಲ್ಲ. ಬದಲಾಗಿ 60 ವರ್ಷ ಪೂರೈಸಿದ ಬಡವರಿಗೆ ಮನೆ ಬಾಗಿಲಿಗೇ ಸೌಲಭ್ಯ ಹುಡುಕಿಕೊಂಡು ಬರಲಿವೆ. ಜಿಲ್ಲಾ ಮತ್ತು ತಾಲ್ಲೂಕು ಕಚೇರಿಯಲ್ಲಿ ಆಧಾರ್ ಕಾರ್ಡ್‌ಗಳ ಪಟ್ಟಿಯಿದೆ. ಯಾರಿಗೆ 60 ವರ್ಷ ತುಂಬಿರುತ್ತದೆಯೋ ಅವರಿಗೆ ಅಂಚೆ ಮೂಲಕ, ಇಲ್ಲವೇ ಗ್ರಾಮ ಲೆಕ್ಕಿಗರೇ ಹೋಗಿ ವೃದ್ಧಾಪ್ಯ ವೇತನ ಯೋಜನೆಯ ಸೇರ್ಪಡೆ ಪತ್ರ ನೀಡಬೇಕು ಎಂದು ಸೂಚಿಸಿದರು.

ತಿಂಗಳಿಗೆ ಒಂದು ಬಾರಿ ಒಂದು ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಬೇಕು. ಅಲ್ಲಿನ ಸಮಸ್ಯೆ ಅರಿತು ಪರಿಹಾರ ಒದಗಿಸಬೇಕು. ರೈತರ ಮನೆಯಲ್ಲಿ ಊಟ ಮಾಡಬೇಕು. ಸ್ಥಳೀಯ ಅಂಗನವಾಡಿ, ಇತರ ಕಚೇರಿಗಳಿಗೆ ಭೇಟಿ ನೀಡಬೇಕು. ಯೋಜನೆಗಳನ್ನು ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.

ಎಲ್ಲ ಖಾಸಗಿ ಆಸ್ಪತ್ರೆಗಳು ತೆರೆದು ಸೇವೆ ನೀಡಬೇಕು. ಒತ್ತುವರಿ ಆಗಿರುವ ಹೊಳೆದಂಡೆ, ಶಾಲೆ, ಗೋಮಾಳ, ಸರ್ಕಾರಿ ಜಮೀನುಗಳ ಸರ್ವೇ ನಡೆಸಬೇಕು. ಸ್ಮಶಾನ ಇಲ್ಲದಿರುವ ಹಳ್ಳಿಗಳ ಪಟ್ಟಿ ಮಾಡಬೇಕು. ಪ್ರತಿ ಹಳ್ಳಿಗಳ ಪಟ್ಟಿ ಮಾಡಿ ಜಾಗ ಗೊತ್ತು ಮಾಡಿಸಬೇಕು. ಬಗರ್ ಹುಕುಂ, ಸಾಗುವಳಿ ಹಕ್ಕುಪತ್ರ ವಿತರಿಸಬೇಕು. 94ಸಿ ಹಾಗೂ 94ಸಿಸಿಗೆ ಸಂಬಂಧಿಸಿದ ಅರ್ಜಿಗಳನ್ನು ವಿಲೇ ಮಾಡಬೇಕು ಎಂದು ಸೂಚನೆ ನೀಡಿದರು.

ಈಗಾಗಲೇ 49 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈ ತಾಲ್ಲೂಕುಗಳಲ್ಲಿ ಇನ್ನೂ ಒಂದು ತಿಂಗಳ ಕಾಲ ಬರ ಕಾಮಗಾರಿ ಮುಂದುವರಿಸಬೇಕು. ಅದಕ್ಕಾಗಿ ₹ 112 ಕೋಟಿ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಜಗಳೂರು ತಾಲ್ಲೂಕು ಇದರಡಿಯಲ್ಲಿ ಬರುತ್ತದೆ. ಜಗಳೂರಿಗೆ 14 ಕೋಟಿ ಅನುದಾನ ನೀಡಲಾಗಿದೆ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಡಿಸಿ ಪೂಜಾರ ವೀರಮಲ್ಲಪ್ಪ ಮಾಹಿತಿ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ಸಾರಿಗೆ ಸಚಿವ ಲಕ್ಷ್ಮಣ ಸವದಿ, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಎಸ್.ಎ.ರವೀಂದ್ರನಾಥ್, ಎಸ್.ವಿ.ರಾಮಚಂದ್ರ, ಎಸ್. ರಾಮಪ್ಪ, ಪ್ರೊ.ಲಿಂಗಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಯಶೋದಮ್ಮ ಮರುಳಪ್ಪ, ಸಿಇಒ ಪದ್ಮ ಬಸವಂತಪ್ಪ, ಮೇಯರ್ ಅಜಯ್ ಕುಮಾರ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಡಿಎಚ್‌ಒ ಡಾ.ರಾಘವೇಂದ್ರ ಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT